SUDDIKSHANA KANNADA NEWS/ DAVANAGERE/ DATE:09-08-2024
ದಾವಣಗೆರೆ: ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿದ್ದ 10 ಲಕ್ಷ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, ಮೂವರು ಆರೋಪಿತರನ್ನು ಹರಿಹರ ಪೊಲೀಸರು ಬಂಧಿಸಿದ್ದಾರೆ.
ಒಡಿಶಾದ ಗಂಗಾಮ್ ಜಿಲ್ಲೆಯ ಖಾಲಿಕೋಟ್ ತಾಲೂಕಿನ ಕಂಚನ್ ಗ್ರಾಮದವನು ಹಾಗೂ ಹರಿಹರದಲ್ಲಿ ಕಾಂಕ್ರಿಟ್ ಕೆಲಸ ಮಾಡುತ್ತಿದ್ದ ಕೇಸಬಾ ಮೊಹಂತಿ (24), ಕೂಲಿ ಕೆಲಸ ಮಾಡುತ್ತಿದ್ದ ಸುಮಂತ ಸಾಹು (25) ,ಹರಿಹರ ಬೆಂಕಿನಗರದ ಸರ್ಕಾರಿ ಶಾಲೆಯ ಹತ್ತಿರ ವಾಸವಿದ್ದ ಕಾಂಕ್ರಿಟ್ ಕೆಲಸಗಾರ ಸೈಯದ್ ಸಾಧಿಕ್ ಬಂಧಿತ ಆರೋಪಿಗಳು.
ಹರಿಹರ ನಗರದಲ್ಲಿ ಮಾದಕ ವಸ್ತುಗಳ ಸೇವನೆ ಮಾಡುವವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುತಿದ್ದು, ವೇಳೆ ಮಾದಕ ವ್ಯಸನಿಗಳಿಗೆ ಸಿಗುತ್ತಿದ್ದ ಗಾಂಜಾದ ಮೂಲವನ್ನು ಬೆನ್ನೆತ್ತಿದಾಗ, ಪೊಲೀಸರಿಗೆ ಹರಿಹರ ನಗರದಲ್ಲಿ ಕಾನೂನು ಬಾಹಿರವಾಗಿ ಗಾಂಜಾ ಸಾಗಾಟ ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಶುಕ್ರವಾರದಂದು ಹರಿಹರ ನಗರದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕಾನೂನು ಬಾಹಿರವಾಗಿ ಮಾರಾಟ ಮಾಡಲು ಗಾಂಜಾವನ್ನು ಸಂಗ್ರಹಿಸಿರುವ ಬಗ್ಗೆ ಹಾಗು ಮಾರಾಟ ಮಾಡಲು ಯತ್ನಿಸಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ ಸಂತೋಷ ಮತ್ತು ಜಿ. ಮಂಜುನಾಥ ಅವರ ಮಾರ್ಗದರ್ಶನದಲ್ಲಿ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಸವರಾಜ್.ಬಿ.ಎಸ್ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳನ್ನೊಳಗೊಂಡ ತಂಡವು ದಾಳಿ ಮಾಡಿದೆ.
ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿಟ್ಟುಕೊಂಡಿದ್ದ ಸುಮಾರು ರೂ. 10,00,0000 ಮೌಲ್ಯದ 10 ಕೆಜಿ ಗಾಂಜಾ ಹಾಗೂ ಒಂದು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಮೊದಲ ಹಾಗೂ ಎರಡನೇ ಆರೋಪಿಗಳು ಹಾಲಿ ಹರಿಹರ ವ್ಯಾಪ್ತಿಯಲ್ಲಿ ರೈಲ್ವೇ ಹಳಿ ಕಾಮಗಾರಿ ನಡೆಯುತ್ತಿದ್ದು, ಅಲ್ಲಿ ಕಾಂಕ್ರಿಟ್ ಕೆಲಸ ಮಾಡಲು ಬಂದಿದ್ದಾರೆ. ಗಾಂಜಾವನ್ನು ಒಡಿಶಾ ರಾಜ್ಯದಿಂದ ತೆಗೆದುಕೊಂಡು ಬಂದು ಹರಿಹರದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ತನಿಖೆ ವೇಳೆ ತಿಳಿದು ಬಂದಿದೆ.
ಈ ಪ್ರಕರಣದಲ್ಲಿ ಆರೋಪಿತರ ಪತ್ತೆ ಹಾಗೂ ಗಾಂಜಾ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಅಧಿಕಾರಿಗಳಾದ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬಸವರಾಜ್.ಬಿ.ಎಸ್., ಹರಿಹರ ನಗರ ಠಾಣೆಯ ಪೊಲೀಸ್ ನಿರೀಕ್ಷಕ ದೇವಾನಂದ, ಸುರೇಶ ಸಗರಿ, ಹರಿಹರ ನಗರ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಪತಿ ಗಿನ್ನಿ ಮತ್ತು ವಿಜಯ್ ಜಿ.ಎಸ್, ಮಂಜುನಾಥ ಕುಪ್ಪೇಲೂರ, ಸಿಬ್ಬಂದಿಯವರಾದ ನಾಗರಾಜ್ ಸುಣಗಾರ, ಲಿಂಗರಾಜ್, ಸಿದ್ದೇಶ, ಹೇಮಾನಾಯ್ಕ್, ರವಿ.ಆರ್, ರುದ್ರಸ್ವಾಮಿ.ಕೆ.ಸಿ, ಹನುಮಂತ ಗೋಪನಾಳ, ಮಂಜುನಾಥ ಕ್ಯಾತಮ್ಮನವರ್, ರವಿನಾಯ್ಕ್, ಕರಿಯಪ್ಪ, ತಿಪ್ಪೆಸ್ವಾಮಿ, ಸಿದ್ದರಾಜು.ಎಸ್.ಬಿ, ರಾಜಾಸಾಬ್, ರವಿನಾಯ್ಕ, ಸತೀಶ, ತಿಪ್ಪೇಸ್ವಾಮಿ ಅವರನ್ನು ಎಸ್ಪಿ ಉಮಾ ಪ್ರಶಾಂತ್ ಅಭಿನಂದಿಸಿದ್ದಾರೆ.
ಸಾಮಾಜಿಕ ದೊಡ್ಡ ಪಿಡುಗಾದ ಮಾದಕ ವ್ಯಸನಮುಕ್ತ ಸಮಾಜ ನಿರ್ಮಾಣ ಹಾಗೂ ಮಾದಕ ವ್ಯಸನ ಮುಕ್ತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಜಿಲ್ಲೆಯಲ್ಲಿ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮಾದಕ ವಸ್ತುಗಳ ಸೇವೆನೆ ಹಾಗೂ ಮಾರಾಟ ಮಾಡುವವರ ಮೇಲೆ ನಿಗಾವಹಿಸಿ ದಾಳಿ ಮಾಡಿ ಪ್ರಕರಣಗಳನ್ನು ದಾಖಲಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಸಿಬ್ಬಂದಿಗಳನ್ನೊಳಗೊಂಡ ತಂಡಗಳನ್ನು ರಚಿಸಿದ್ದು, ಪ್ರತಿದಿನ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸೇವನೆ ಹಾಗೂ ಅಕ್ರಮ ಮಾರಾಟ ಮಾಡುವವರ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದಾರೆ.