Site icon Kannada News-suddikshana

ರೈತರು ಬೆಳೆ ಸಮೀಕ್ಷೆ ವೇಳೆ ನಿಖರ ಬೆಳೆ ನಮೂದಿಸಿ: 545 ಎಕರೆ ಟೊಮೆಟೊ ವಿಮಾ ಪಾವತಿ, ವಾಸ್ತವದಲ್ಲಿ 11.23 ಎಕರೆಯಲ್ಲಿ ಬೆಳೆ!

SUDDIKSHANA KANNADA NEWS/ DAVANAGERE/ DATE:05-03-2025

ದಾವಣಗೆರೆ: ರೈತರು ಬೆಳೆ ಸಮೀಕ್ಷೆ ಕೈಗೊಂಡಾಗ ತಾವು ಬೆಳೆದಿರುವ ಬೆಳೆ ಹಾಗೂ ವಿಸ್ತೀರ್ಣವನ್ನು ನಿಖರವಾಗಿ ದಾಖಲಿಸಬೇಕು. ಜಗಳೂರು ತಾಲ್ಲೂಕಿನ ಬಿಳಿಚೋಡು ಹೋಬಳಿ ಅಸಗೋಡು ಗ್ರಾಮ ವ್ಯಾಪ್ತಿಯಲ್ಲಿ 545 ಎಕರೆ ಟೊಮೆಟೊಗೆ ವಿಮೆ ಪಾವತಿಸಿದ್ದು ವಾಸ್ತವದಲ್ಲಿ 11.23 ಎಕರೆ ಟೊಮೆಟೊ ಬೆಳೆ ಬೆಳೆಯಲಾಗಿದೆ.

ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ ಬಿಳಿಚೋಡು ಹೋಬಳಿಯ ಅಸಗೋಡು ಗ್ರಾಮದಲ್ಲಿ ಟೊಮೆಟೊ ಬೆಳೆಗೆ ರೈತರು ಬೆಳೆ ವಿಮಾ ಕಂತನ್ನು ಪಾವತಿಸಿದ್ದು, ಅಕ್ರಮವಾಗಿ ಬೆಳೆ ಸಮೀಕ್ಷೆ ಆಪ್‍ನಲ್ಲಿ ಟೊಮೆಟೊ ಬೆಳೆಯನ್ನು ಖಾಸಗಿ ನಿವಾಸಿಗಳ ನೆರವಿನಿಂದ ದಾಖಲಿಸಲಾಗಿದೆ. ಸಾಂಪ್ರದಾಯಿಕವಾಗಿ ಬೆಳೆಯಲ್ಪಡುವ ವಿಸ್ತೀರ್ಣಕ್ಕಿಂತಲೂ ಹೆಚ್ಚಿನ ಪ್ರದೇಶದಲ್ಲಿ ಟೊಮೆಟೊ ಬೆಳೆಯು ದಾಖಲಾಗಿದ್ದರಿಂದ, ಜಿಲ್ಲೆಯ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಿ ಭೌತಿಕವಾಗಿ 307 ಪ್ಲಾಟ್ ಗಳನ್ನು ಪುನರ್ ಪರಿಶೀಲಿಸಿದಾಗ ಕೇವಲ 13 ಪ್ಲಾಟುಗಳಲ್ಲಿ ಟೊಮೆಟೊ ಬೆಳೆದಿರುವುದು ಕಂಡು ಬಂದಿದೆ. 545 ಎಕರೆ ಪ್ರದೇಶಕ್ಕೆ ಬೆಳೆ ವಿಮಾ ಕಂತನ್ನು ಪಾವತಿಸಲಾಗಿದ್ದು, ಕೇವಲ 11.23 ಎಕರೆ ಪ್ರದೇಶದಲ್ಲಿ ಟೊಮೆಟೊ ಬೆಳೆ ಕಂಡುಬಂದಿರುತ್ತದೆ.

ಬೆಳೆ ಸಮೀಕ್ಷೆಯನ್ನು ಮಾಡುವಾಗ ಅಥವಾ ಮಾಡಿಸುವಾಗ ಕಡ್ಡಾಯವಾಗಿ ತಾವು ಬೆಳೆದಿರುವ ಬೆಳೆ ಹಾಗೂ ವಿಸ್ತೀರ್ಣವನ್ನು ಪ್ರಲೋಭನೆಗೆ ಒಳಗಾಗದೇ ತಾವು ನಿಖರವಾಗಿ ಬೆಳೆದ ಬೆಳೆಯನ್ನು ದಾಖಲಿಸಬೇಕು. ಯಾರಾದರೂ ತಪ್ಪು ಮಾಹಿತಿ ನೀಡಲು ಆಮಿಷವೊಡ್ಡಿದಲ್ಲಿ ಜಿಲ್ಲಾಡಳಿತದ ಗಮನಕ್ಕೆ ತರಬಹುದು.

‘ಬೆಳೆ ವಿಮೆ ಪರಿಹಾರಕ್ಕೆ ಸಂಬಂಧಿಸಿದಂತೆ ರೈತರು ಪಾವತಿಸಿರುವ ಬೆಳೆ ವಿಮಾ ಕಂತು ಹಾಗೂ ಬೆಳೆದಿರುವ ಬೆಳೆ ಮತ್ತು ವಿಸ್ತೀರ್ಣ ಬಹಳ ಮುಖ್ಯವಾಗಿರುತ್ತದೆ. ರೈತರು ತಾವು ಬೆಳೆದಿರುವ ಬೆಳೆಯನ್ನು “ಬೆಳೆ ಸಮೀಕ್ಷೆ” ಆಪ್ ನಲ್ಲಿ ದಾಖಲಿಸಲು ಅವಕಾಶವಿರುತ್ತದೆ. ರೈತರು ತಾವು ಬೆಳೆದಿರುವ ಬೆಳೆಯನ್ನು ಬೆಳೆ ಸಮೀಕ್ಷೆ ಆಪ್ ನಲ್ಲಿ ದಾಖಲಿಸಲು ಕಷ್ಟವಾದಲ್ಲಿ ಸಂಬಂಧಿಸಿದ ಗ್ರಾಮದಲ್ಲಿನ ಖಾಸಗಿ ನಿವಾಸಿಗಳಿಂದ ಬೆಳೆ ದಾಖಲೀಕರಣವನ್ನು ಕೈಗೊಳ್ಳಲಾಗುತ್ತಿದೆ.

ಜಿಲ್ಲಾಡಳಿತದಿಂದ ಈ ಚಟುವಟಿಕೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಬೆಳೆ ನಷ್ಟ ಹೊಂದಿರುವ ರೈತರಿಗೆ ವಿಮೆ ಪರಿಹಾರ ದೊರಕಿಸಿಕೊಡಲು ನಿಯಮಾನುಸಾರ ಕ್ರಮ ಜರುಗಿಸಲಾಗುತ್ತಿದೆ. ಕಳೆದ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ ರೂ.140 ಕೋಟಿಗಳಿಗಿಂತಲೂ ಹೆಚ್ಚು ವಿಮಾ ಪರಿಹಾರವಾಗಿ ನೀಡಿದ್ದು ಹಣ ನೇರವಾಗಿ ರೈತರ ಖಾತೆಗಳಿಗೆ ಜಮೆಯಾಗಿದೆ ಎಂದು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಅವರು ತಿಳಿಸಿದ್ದಾರೆ.

Exit mobile version