ದಾವಣಗೆರೆ: ಕಳೆದ 31 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ಬರ್ ಬಿನ್ ಖಾಸಿಂ ಸಾಬ್ ಬಂಧಿತ ಆರೋಪಿ. 1993ರಲ್ಲಿ ದಾವಣಗೆರೆ ಜಿಲ್ಲೆಯ ಹರಿಹರ ನಗರದ ಬೆಂಕಿನಗರದಲ್ಲಿ ವಾಸವಾಗಿದ್ದ.
ಘಟನೆ ಹಿನ್ನೆಲೆ:
1993ರ ಅಕ್ಟೋಬರ್ 1 ರಂದು ಹರಿಹರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬಜಾರ್ ಮೊಹಲ್ಲಾದಲ್ಲಿ ಪ್ರಕರಣದ ಪಿರ‍್ಯಾದಿ ಅಬ್ದುಲ್ ಜಬ್ಬಾರ್ ಬಜರ್ ಮೊಹಲ್ಲಾ ಹರಿಹರ ಟೌನ್ ರವರಿಗೆ ಪ್ರಕರಣದ ಆರೋಪಿ ಅಕ್ಬರ್ ಬಿನ್ ಖಾಸಿಂ ಸಾಬ್ ವಿರುದ್ಧ ದೂರು ನೀಡಿದ್ದರು.
ಅಕ್ಬರ್ ತನ್ನ ಮೈಮೇಲೆ ದೇವರು ಬರುತ್ತಾನೆ, ನಾನು ಮಾಟ ಮಂತ್ರ ಮಾಡುತ್ತೇನೆ. ನಿಮ್ಮ ಮನೆಯಲ್ಲಿ ಪೂಜೆ ಮಾಡುತ್ತೇನೆಂದು ನಂಬಿಸಿ ಮನೆಯಲ್ಲಿ ಪೂಜೆ ಮಾಡುವಾಗ ಅಬ್ದುಲ್ ಜಬ್ಬಾರ್ ಅವರ ಮತ್ತು ಅವರ ಹೆಂಡತಿಯ ಮೈಮೇಲಿದ್ದ ಬಂಗಾರದ ಒಡವೆಗಳನ್ನು ಒಂದು ಕಬ್ಬಿಣದ ಪೆಟ್ಟಿಗೆಯಲ್ಲಿ ಹಾಕಲು ಹೇಳಿದ್ದ. ಅದರಂತೆಪೂಜೆ ಮಾಡಿ ಸ್ವಲ್ಪ ದಿನದಲ್ಲಿ ತೆರೆದು ನೋಡಿದರೆ ಡಬಲ್ ಆಗುವುದಾಗಿ ನಂಬಿಸಿದ್ದ. ಸುಮಾರು ಏಳು ಗ್ರಾಂ 650 ಮಿಲಿ ಬಂಗಾರದ ವಿವಿಧ ಆಭರಣಗಳನ್ನು ಪೆಟ್ಟಿಗೆಯಲ್ಲಿ ಹಾಕಿ ತಮಗೆ ಕುಡಿಯಲು ನೀರು ತರಲು ಹೇಳಿದ್ದ.
ಪಿರ‍್ಯಾದಿ ಮನೆಯ ಒಳಗೇ ಹೋಗಿದ್ದಾಗ ಕಬ್ಬಿಣದ ಪೆಟ್ಟಿಗೆಯೊಂದಿಗೆ ಪರಾರಿಯಾಗಿದ್ದ. ತಮಗೆ ನಂಬಿಸಿ ಬಂಗಾರವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾಗಿ ನೀಡಿದ ದೂರಿನ ಮೇರೆ ಗುನ್ನೆ ನಂ : 246/1993 ಕಲಂ : 379, 420 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿತ್ತು.
ಅಂದಿನ ಹರಿಹರ ಗ್ರಾಮಾಂತರ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಎಲ್. ನರಸಿಂಹಯ್ಯ ಅವರು ಸಿಬ್ಬಂದಿಯವರಾದ ಎಸ್ ಬಂಗಾರಪ್ಪ, ಗುರುರಾಜಚಾರ್, ಟಿ ಹಾಲಪ್ಪ, ಎಂ. ಆರ್. ಹನುಮಂತಪ್ಪ ಅವರ ತಂಡವು ಪ್ರಕರಣದ ಆರೋಪಿತನಾದ ಅಕ್ಬರ್ ಬಿನ್ ಖಾಸಿಂ ಸಾಬ್ (1993ರಲ್ಲಿ 26ವರ್ಷ) ಈತನನ್ನು ಪತ್ತೆ ಮಾಡಿ ದಸ್ತಗಿರಿ ಮಾಡಿದ್ದರು.
ಆರೋಪಿತನಿಂದ ಒಂದು ಹರಳಿರುವ 2 ಗ್ರಾಂ ತೂಕದ ಬಂಗಾರದ ಉಂಗುರ, 4 ಗ್ರಾಂ ತೂಕದ ಬಂಗಾರದ ಉಂಗುರ, 1 ಗ್ರಾಂ 650 ಮಿಲಿ ಇರುವ ಬಂಗಾರದ ಬೆಂಡೋಲಿಯನ್ನು ವಶಪಡಿಸಿಕೊಂಡು ತನಿಖೆ ಪೂರೈಸಿ ಆರೋಪಿಯ ವಿರುದ್ಧ ದೋಷರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣವು ಘನ ಸಿಜೆ ಮತ್ತು ಜೆಎಂಎಫ್‌ಸಿ ಹರಿಹರದಲ್ಲಿ ಸಿಸಿ ನಂ : 272/1994 ರಲ್ಲಿ ವಿಚಾರಣೆಯಲ್ಲಿರುವಾಗ ಆರೋಪಿತನು 1995 ರಿಂದ ಹಾಜರಾಗದೇ ಇದ್ದ. 2-01-1997 ರಿಂದ ನ್ಯಾಯಾಲಯವು ಎಲ್‌ಪಿಆರ್ ನಂ : 05/1997 ಎಂದು ಘೋಷಿಸಿತ್ತು.
ಎಲ್ ಪಿ ಆರ್ ಪ್ರಕರಣದ ಆರೋಪಿತನಾದ ಅಕ್ಬರ್ ನನ್ನು ಪತ್ತೆ ಹಚ್ಚಲು ದಾವಣಗೆರೆ ಗ್ರಾಮಾಂತರ ಉಪವಿಭಾಗ ಡಿವೈಎಸ್ಪಿ ಬಿ. ಎಸ್. ಬಸವರಾಜ್, ಹರಿಹರ ಸಿಪಿಐ ಸುರೇಶ ಸಗರಿ, ಪಿಎಸ್ಐಗಳಾದ ಯುವರಾಜ ಕಂಬಳಿ, ಡಿ. ಮಂಜುಳಾ ನೇತೃತ್ವದಲ್ಲಿ ಸಿಬ್ಬಂದಿಯವರಾದ ಎಎಸ್ಐ ರಾಜಶೇಖರಯ್ಯ, ಪ್ರಸನ್ನಕಾಂತ ಮತ್ತು ಷಣ್ಮುಖಪ್ಪ ಅವರನ್ನು ನೇಮಿಸಲಾಗಿತ್ತು. ಬಾತ್ಮೀದಾರರಿಂದ ಹಾಗೂ ಪ್ರಕರಣದ ದೂರುದಾರರ ಕಡೆಯಿಂದ ಮಾಹಿತಿಯನ್ನು ಸಂಗ್ರಹಿಸಿ, ಸುಮಾರು 31 ವರ್ಷದಿಂದ ಘನ ನ್ಯಾಯಾಲಯಕ್ಕೆ ಹಾಜರಾಗದೆ, ಬೆಂಗಳೂರು, ಹೊನ್ನಾಳಿ, ಶಿವಮೊಗ್ಗ ಇತರೆ ಕಡೆಗಳಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ತಲೆಮರೆಸಿಕೊಂಡಿದ್ದ ಆರೋಪಿ ಅಕ್ಬರ್ ಬಿನ್ ಖಾಸೀಂ ಸಾಬ್ ಇತ್ತೀಚಿಗೆ ಹರಿಹರ ನಗರದಕ್ಕೆ ವಾಪಾಸ್ ಬಂದಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಹರಿಹರ ನಗರದಲ್ಲಿ ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಆರೋಪಿತನ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಶ್ಲಾಘಿಸಿದ್ದಾರೆ.





Leave a comment