Site icon Kannada News-suddikshana

ಹೊಸ ಕ್ರಿಮಿನಲ್ ಕಾನೂನಿನಂತೆ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಕೇಸ್ ದಾಖಲು

ನವದೆಹಲಿ: ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದಕ್ಕೆ ಹೊಸ ಕ್ರಿಮಿನಲ್ ಕಾನೂನಿನಡಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಪ್ರಕರಣ ದಾಖಲಾಗಿದೆ.

ರೇಖಾ ಶರ್ಮಾ ಅವರ ದೂರಿನ ಆಧಾರದ ಮೇಲೆ ಮಹುವಾ ಮೊಯಿತ್ರಾ ಅವರ ವಿರುದ್ಧ ಜುಲೈ 1ರಂದು ಜಾರಿಗೆ ಬಂದ ಹೊಸ ಕಾನೂನುಗಳ ಪೈಕಿ ಒಂದಾದ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 79 ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ದೆಹಲಿ ಪೊಲೀಸರು ಮಹುವಾ ಮೊಯಿತ್ರಾ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಹತ್ರಾಸ್ ಕಾಲ್ತುಳಿತ ಪ್ರಕರಣದ ಬಳಿಕ ರೇಖಾ ಶರ್ಮಾ ಅವರು ಹತ್ರಾಸ್‌ಗೆ ಭೇಟಿ ನೀಡಿದ ವಿಡಿಯೊವನ್ನು ಮಹುವಾ ಮೊಯಿತ್ರಾ ಅವರು ಎಕ್ಸ್ ನಲ್ಲಿ ಹಂಚಿಕೊಂಡಿದ್ದರು. ಅಲ್ಲದೆ, ‘ತಮ್ಮ ಬಾಸ್‌ನ ಪೈಜಾಮಾ ಹಿಡಿದುಕೊಳ್ಳುವುದರಲ್ಲಿಯೇ ಇವರು ನಿರತರಾಗಿದ್ದಾರೆ’ ಎಂದು ಮಹುವಾ ಮೊಯಿತ್ರಾ ಬರೆದುಕೊಂಡಿದ್ದರು.

ಮಹುವಾ ಮೊಯಿತ್ರಾ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ರಾಷ್ಟ್ರೀಯ ಮಹಿಳಾ ಆಯೋಗವು ಆಕ್ರೋಶ ವ್ಯಕ್ತಪಡಿಸಿತ್ತು. ಜೊತೆಗೆ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಎಫ್‌ಐಆರ್ ದಾಖಲಿಸಬೇಕು, ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ದೆಹಲಿ ಪೊಲೀಸರಿಗೆ ಸೂಚಿಸಲಾಗಿತ್ತು. ಇದರೊಂದಿಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೂ ರಾಷ್ಟ್ರೀಯ ಮಹಿಳಾ ಆಯೋಗವು ಪತ್ರ ಬರೆದಿದ್ದು, ಈ ಪತ್ರದಲ್ಲಿ ಮಹುವಾ ಮೊಯಿತ್ರಾ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿತ್ತು.

 

Exit mobile version