Site icon Kannada News-suddikshana

ಬಿಜೆಪಿಯಿಂದ ನನಗೂ ಆಹ್ವಾನ ಬಂದಿದೆ: ಮಹಿಮಾ ಪಟೇಲ್ MAHIMA PATEL

SUDDIKSHANA NEWS

DAVANAGERE

ದಾವಣಗೆರೆ: ಚನ್ನಗಿರಿ (CHANNAGIRI) ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನನಗೆ ಬಿಜೆಪಿಯಿಂದ ಆಹ್ವಾನ ಬಂದಿದೆ. ಸ್ಪರ್ಧೆ ಮಾಡುವಂತೆ ಒತ್ತಡ ಇದೆ. ಆದ್ರೆ, ಕ್ಷೇತ್ರದ ಒಂದು ಲಕ್ಷ ಜನರು ಹೇಳಿದರೆ ಸ್ಪರ್ಧೆ ಮಾಡುತ್ತೇನೆ. ನನ್ನ ತಮ್ಮ ತೇಜಸ್ವಿ ಪಟೇಲ್ ಕಾಂಗ್ರೆಸ್ (CONGRESS) ನಿಂದ ಟಿಕೆಟ್ (TICKET) ಬಯಸಿದ್ದಾರೆ. ಒಂದೇ ಮನೆಯಲ್ಲಿ ಇಬ್ಬರು ಓಡಾಡುವುದು ಬೇಡ ಎಂಬುದು ನನ್ನ ನಿರ್ಧಾರ ಎಂದು ಸಂಯುಕ್ತ ಜನತಾದಳದ ರಾಜ್ಯಾಧ್ಯಕ್ಷ ಮಹಿಮಾ ಜೆ. ಹೆಚ್. ಪಟೇಲ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ (CONGRESS) ಹಾಗೂ ಜೆಡಿಎಸ್ (JDS) ನಿಂದಲೂ ಆಹ್ವಾನ ಬಂದಿದೆ. ಮೂರು ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ. ನಾಯಕರನ್ನು ಹೊಗಳಿಕೊಂಡು ಹೋಗುವವರಿಗಷ್ಟೇ ಮಣೆ ಹಾಕಲಾಗುತ್ತದೆ. ಹೊಸ ವ್ಯವಸ್ಥೆ ಕಟ್ಟುವತ್ತ ನನ್ನ ಚಿಂತನೆ. ಈಗ ನಡೆಯುತ್ತಿರುವ ಚುನಾವಣೆಗಳು ದುಡ್ಡು, ತೋಳ್ಬಲದಿಂದ ನಡೆಯುತ್ತಿವೆ. ನಮ್ಮಂಥವರಿಗೆ ಸರಿ ಹೊಂದುವುದಿಲ್ಲ ಎಂದು ಹೇಳಿದರು.

ಚನ್ನಗಿರಿ (CHANNAGIRI)  ಹೆಸರು ಈಗ ದೇಶಾದ್ಯಂತ ಪ್ರಸಿದ್ಧಿಯಾಗಿದೆ. ಎಲ್ಲೆಡೆ ಹರಡಿರುವ ಸಮಸ್ಯೆಯೇ ಭ್ರಷ್ಟಾಚಾರ. ದುಡ್ಡು ಸಿಕ್ಕಿದವರಷ್ಟೇ ತಪ್ಪಿತಸ್ಥರು ಎಂದು ಹೇಳಲಾಗದು. ದೊಡ್ಡ ದೊಡ್ಡ ಕುಳಗಳು ಸಿಕ್ಕಿ ಬಿದ್ದಿಲ್ಲ. ಯಾರು ಏನು ಎನ್ನುವುದು ಜನರಿಗೆ ಗೊತ್ತಿದೆ. ಹಣ ಮಾಡಿದವರಿಗೆ ಸನ್ಮಾನ, ಗೌರವ, ಅಧಿಕಾರಗಳು ಸಿಗುತ್ತಿರಬಹುದು. ಸಿಕ್ಕಿ ಹಾಕಿಕೊಳ್ಳದವರು ದೊಡ್ಡ ಮನುಷ್ಯರೇನಲ್ಲ. ಪಕ್ಷ (PARTY) ಬದಲಾವಣೆ ಮಾಡಿದರೆ ವ್ಯವಸ್ಥೆ ಬದಲಾಗಲ್ಲ. ಜನರು ಬದಲಾಗಬೇಕು. ಹಣ ಕೊಡಲು ಬರುವವರು ಕಳ್ಳರು ಎಂಬ ದೃಷ್ಟಿಯಲ್ಲಿ ಜನರು ನೋಡುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ಜೆ. ಹೆಚ್. ಪಟೇಲ್ (JJ. H. PATEL) ಅವರು ಮುಖ್ಯಮಂತ್ರಿಯಾಗಿದ್ದಾಗ ನಮಗೆ ರಾಜಕಾರಣಕ್ಕೆ ಪ್ರೋತ್ಸಾಹ ನೀಡುತ್ತಿರಲಿಲ್ಲ. ತಂದೆ ತೀರಿ ಹೋದ ಬಳಿಕ ಅಂದರೆ 2000ರಲ್ಲಿ ರಾಜಕೀಯ ಪ್ರವೇಶಿಸಿದೆ. 2004 ರಲ್ಲಿ ಹಣ, ಹೆಂಡ ಹಂಚದೇ ಗೆದ್ದು ಶಾಸಕನಾದೆ. ಇದಕ್ಕೆ ಕಾರಣ ಕ್ಷೇತ್ರದ ಜನತೆ ನನ್ನ ಮೇಲಿಟ್ಟಿದ್ದ ಪ್ರೀತಿ, ವಿಶ್ವಾಸ. 1994 ರಲ್ಲಿ ನನ್ನ ತಂದೆ ಕೇವಲ 5 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ನಾನು ಚುನಾವಣೆಗೆ 25 ಲಕ್ಷ ರೂಪಾಯಿ ವ್ಯಯಿಸಿದ್ದೆ. ಶುದ್ಧ ರಾಜಕಾರಣ ಉಳಿಸಿಕೊಂಡಿರುವ ಸಂತೃಪ್ತಿ ನನಗಿದೆ.

ಗೌರವ ಸಲ್ಲಿಸದಿದ್ದರೆ ಏನೂ ಆಗಲ್ಲ:

ದಾವಣಗೆರೆ (DAVANAGERE) ಜಿಲ್ಲೆಯಾಗಿ 25 ವರ್ಷಗಳು ಸಂದಿದ್ದು, ಇದನ್ನು ಮಾಡಿದ್ದು ಜೆ. ಹೆಚ್. ಪಟೇಲರು ಎಂಬುದು ಎಲ್ಲರಿಗೂ ಗೊತ್ತು. ಮನೆಯವರಾಗಿ ನಾವು ಏನೂ ಹೇಳಲ್ಲ, ನಾವೇನೂ ಸಲ್ಲಿಸಬೇಕೋ ಆ ಗೌರವ ಮಾಡಿದ್ದೇವೆ. ಜಿಲ್ಲಾಡಳಿತ, ಸರ್ಕಾರ ಗೌರವ ಸಲ್ಲಿಸದಿದ್ದರೆ ಹಾನಿ ಏನೂ ಆಗಲ್ಲ. ಗೌರವಕ್ಕೋಸ್ಕರ ನನ್ನ ತಂದೆ ಈ ಕೆಲಸ ಮಾಡಿಲ್ಲ. ಗೌರವ ಸಲ್ಲಿಸುವುದು ಬಿಡುವುದು ಸರ್ಕಾರ, ಜಿಲ್ಲಾಡಳಿತಕ್ಕೆ ಬಿಟ್ಟದ್ದು, ಈಗಿನ ರಾಜಕಾರಣಿಗಳು ಕೆಳಗಡೆ ಬಿದ್ದಿದ್ದಾರೆ. ಹಣದ ಹಿಂದೆ ಹೋಗುತ್ತಾರೆ. ತಂದೆಗೆ ಎಲ್ಲೆಡೆ ಗೌರವ, ಮರ್ಯಾದೆ ಸಿಕ್ಕಿದೆ ಎಂದು ಹೇಳಿದರು.

ದೇಶದ ಆಡಳಿತದಲ್ಲಿ ಪ್ರಜಾಪ್ರಭುತ್ವದ ಮೂಲಕ ಯುವಜನತೆ, ರೈತಾಪಿ ವರ್ಗ, ಕಾರ್ಮಿಕ, ಮಹಿಳಾ ವರ್ಗ, ವಕೀಲರು, ಇಂಜಿನಿಯರ್ ಗಳು, ವೈದ್ಯರು, ಪತ್ರಕರ್ತರು, ಸಾಹಿತಿಗಳು, ಕಲಾವಿದರು, ಜನಸಾಮಾನ್ಯರೂ ಸೇರಿದಂತೆ ಸಮಾನ ಮನಸ್ಕರು ಪಾಲ್ಗೊಳ್ಳುವಂತಾಗುವ ವೇದಿಕೆ ರೂಪಿಸಬೇಕು ಎಂಬ ಬಯಕೆ ಜೆಡಿಯುನದ್ದು. ಈ ನಿಟ್ಟಿನಲ್ಲಿ ಜೆಡಿಯು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ವರ್ಗಗಳನ್ನು ಒಳಗೊಂಡ ವೇದಿಕೆಯ ಸಹಕಾರ ಪಡೆದು ಸ್ಪರ್ಧಿಸಲು ನಿಶ್ಚಯಿಸಿದೆ ಎಂದು ಮಾಹಿತಿ ನೀಡಿದರು.

ಮೂರು ದಶಕಗಳ ರಾಜಕಾರಣ ಭಾರತದ ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದಂತೆ ಬೌದ್ಧಿಕ ದಿವಾಳಿತನ ಹುಟ್ಟು ಹಾಕಿದೆ. ಇಂಥ ಪರಿಸ್ಥಿತಿಯಿಂದ ಹೊರಬಂದು ಜಾತಿ, ಮತ, ಬಣ್ಣ, ಪಂಥ ಸೇರಿದಂತೆ ಎಲ್ಲಾ ಅಡೆತಡೆ ದಾಟಿ ಸಂವಿಧಾನ ತತ್ವದ ಆಶಯ, ಸಮಾಜವಾದಿ ಸಿದ್ದಾಂತ, ಜಾತ್ಯಾತೀತತೆ ಉಳಿಸಿಕೊಂಡು ಹೋಗುವುದಲ್ಲದೇ, ಸರ್ವರಿಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಾನತೆ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಕೆಲಸ ಮುಂದುವರಿಯುತ್ತದೆ ಎಂದರು.

ಗೋಷ್ಠಿಯಲ್ಲಿ ಜೆಡಿಯು ಮುಖಂಡರಾದ ಸುನೀತಾ, ಬಸವರಾಜಪ್ಪ, ಚನ್ನಬಸಪ್ಪ, ಸಿದ್ದಪ್ಪ, ಶಂಕರಗೌಡರು ಮತ್ತಿತರರು ಹಾಜರಿದ್ದರು.

Exit mobile version