Site icon Kannada News-suddikshana

ಬಿಎಸ್ ವೈ, ಬೊಮ್ಮಾಯಿ ನಿಲ್ಲಿ ಅಂದ್ರೆ ಸ್ಪರ್ಧಿಸುತ್ತೇನೆ, ಇಲ್ಲದಿದ್ದರೆ ಇಲ್ಲ: ರೇಣುಕಾಚಾರ್ಯ ಈ ಮಾತು ಹೇಳಿದ್ಯಾಕೆ…?

ದಾವಣಗೆರೆ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹೇಳಿದರೆ ಹೊನ್ನಾಳಿಯಿಂದ ಸ್ಪರ್ಧೆ ಮಾಡುತ್ತೇನೆ. ಇಲ್ಲದಿದ್ದರೆ ಕಣಕ್ಕಿಳಿಯಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ (M. P. RENUKACHARYA) ಘೋಷಿಸಿದರು.

ಹೊನ್ನಾಳಿ ಹಾಗೂ ನ್ಯಾಮತಿ ಅವಳಿ ತಾಲ್ಲೂಕಿನ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾವಣೆಗೆ ಟಿಕೆಟ್ ನೀಡದಿದ್ದರೆ ನಾನು ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ನೀವೆಲ್ಲರೂ ಆಶೀರ್ವಾದ ಮಾಡ್ತೀರಾ. ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಅವರು ಇಲ್ಲಿಗೆ ಬಂದಿದ್ದಾರೆ. ಅವರು ನಿಲ್ಲಿ ಅಂದ್ರೆ ನಿಲ್ತೀನಿ. ಇಲ್ಲಾಂದ್ರೆ ನಿಲ್ಲಲ್ಲ. ಕಾರ್ಯಕರ್ತನಾಗಿ ಕ್ಷೇತ್ರದಲ್ಲಿ ದುಡಿಯುತ್ತೇನೆ. ನಾನು ಬೀದಿ ನಾಟಕ ಮಾಡಿಲ್ಲ, ಮಾಡುವುದೂ ಇಲ್ಲ. ನಿಮ್ಮಂಥ ಜನರನ್ನು ಪಡೆದಿದ್ದು ನನ್ನ ಪುಣ್ಯ. ಯಡಿಯೂರಪ್ಪ, ಬೊಮ್ಮಾಯಿ ಅವರಷ್ಟೇ ನಿಮ್ಮ ಆಶೀರ್ವಾದವೂ ಮುಖ್ಯ. ಯಡಿಯೂರಪ್ಪ ತಂದೆ ಸಮಾನ, ಬೊಮ್ಮಾಯಿ ಅಣ್ಣನ ಸಮಾನ. ಪಾರ್ಟಿ ತಾಯಿ ಸಮಾನ ಎಂದು ಹೇಳಿದರು.

ಕಾಂಗ್ರೆಸ್ ನವರು ಹಳ್ಳಿಗಳಲ್ಲಿ ಬೋಗಸ್ ಕಾರ್ಡ್ (BOGAS CARD) ಹಂಚುತ್ತಿದ್ದಾರೆ. 1947 ರಿಂದ ದೇಶ, ರಾಜ್ಯ ಆಳಿದವರು ಮನೆ ಬಾಗಿಲಿಗೆ ಯಾಕೆ 2 ಸಾವಿರ ರೂಪಾಯಿ, ಉಚಿತ ವಿದ್ಯುತ್ ಕೊಡಲಿಲ್ಲ ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಅವರು, ಸೇವಾಲಾಲ್, ವಾಲ್ಮೀಕಿ, ಕನಕ ಜಯಂತಿಗೆ ರಜೆ ಘೋಷಿಸಿದರು. ಬೊಮ್ಮಾಯಿ ಅವರು ಎಸ್ಸಿ, ಎಸ್ಟಿಗೆ ಮೀಸಲಾತಿ ಹೆಚ್ಚಳ ಮಾಡಿದರು ಎಂದ ಅವರು, ಹೊನ್ನಾಳಿ – ನ್ಯಾಮತಿ ವಿಧಾನಸಭಾ ಕ್ಷೇತ್ರದಿಂದ 25ರಿಂದ 30 ಸಾವಿರ ಮತಗಳ ಅಂತರದಿಂದ ಗೆದ್ದೇ ಗೆಲ್ತೇನೆ ಎಂದು ಹೇಳಿದ ಅವರು, ಯಾವುದೇ ಕಾರಣಕ್ಕೂ ಕಾಂಗ್ರೆಸ್ ನಂಬಬೇಡಿ. ಬಿಜೆಪಿ ಬೆಂಬಲಿಸಿ. ಅಭಿವೃದ್ಧಿ ಬೇಕಿದ್ದರೆ ಭಾರತೀಯ ಜನತಾ ಪಾರ್ಟಿ ಮತ್ತೆ ಅಧಿಕಾರಕ್ಕೆ ಬರಬೇಕು
ಎಂದು ರೇಣುಕಾಚಾರ್ಯ ಹೇಳಿದರು.

ಟೈಂ ಆಯ್ತು ಮಾತು ನಿಲ್ಲಿಸಿ

ಹೊನ್ನಾಳಿಯಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಎಂ. ಪಿ. ರೇಣುಕಾಚಾರ್ಯ ಭಾಷಣ ಮಾಡುತ್ತಿದ್ದರು. ಈ ವೇಳೆ ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿ ಅವರು ಬೇಗನೇ ಮಾತು ಮುಗಿಸುವಂತೆ ಸೂಚಿಸಿದರು. ಆಗ ಸ್ವಲ್ಪ ಹೊತ್ತಾದರೂ ಮಾತು ಮುಂದುವರಿಸಿದರು. ಆಗಲೂ ಬೇಗ ನಿಲ್ಲಿಸಿ ಎಂದ್ರು. ಆದ್ರೂ ಮಾತು ಮುಂದುವರಿಸಿದ ರೇಣುಕಾಚಾರ್ಯರಿಗೆ ಯಡಿಯೂರಪ್ಪರ ಸೂಚನೆ ಬಂದ ಬಳಕ ಮಾತು ಮುಗಿಸಿದರು.

Exit mobile version