SUDDIKSHANA KANNADA NEWS/ DAVANAGERE/ DATE:01-02-2025
ದಾವಣಗೆರೆ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡನೆ ಮಾಡಿರುವ ಬಜೆಟ್ ಪ್ರಚಾರಕ್ಕಾಗಿ ಘೋಷಿಸಿದಂತಾಗಿದೆ. ರೈತರ ಸಾಲ ಮನ್ನಾ ಮಾಡದೇ ರೈತಾಪಿ ವರ್ಗದವರನ್ನು ನಿರ್ಲಕ್ಷಿಸಿದೆ ಎಂದು ದಾವಣಗೆರೆ ಜವಾಹರ ಲಾಲ್ ಮಂಚ್ ಜಿಲ್ಲಾಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ಹೇಳಿದ್ದಾರೆ.
ಆಯವ್ಯಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ರೈತರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿಲ್ಲ. ರೈತರ ಪ್ರಮುಖ ಬೇಡಿಕೆಗಳಾದ ಎಂಎಸ್ಪಿ, ಸಾಲ ಮನ್ನಾ ಮುಂತಾದ ವಿಚಾರಗಳ ಬಗ್ಗೆ ಪ್ರಸ್ತಾಪಿಸಿಯೇ ಇಲ್ಲ ಎಂದಿದ್ದಾರೆ.
ಕಡಿಮೆ ಇಳುವರಿ, ಆಧುನಿಕ ಬೆಳೆ ತೀವ್ರತೆ ಮತ್ತು ಸರಾಸರಿಗಿಂತ ಕಡಿಮೆ ಸಾಲದ ನಿಯತಾಂಕಗಳೊಂದಿಗೆ 100 ಜಿಲ್ಲೆಗಳನ್ನು ಒಳಗೊಂಡ ಪ್ರಧಾನಮಂತ್ರಿ ಧನ್ ಧ್ಯಾನ್ ಕೃಷಿ ಯೋಜನೆಯನ್ನು ಘೋಷಿಸಿದ್ದಾರೆ. ಉಳಿದ ಜಿಲ್ಲೆಗಳ ರೈತರ ಪಾಡೇನು? ತೆರಿಗೆ, ನಗರಾಭಿವೃದ್ಧಿ, ಗಣಿಗಾರಿಕೆ, ಹಣಕಾಸು ಕ್ಷೇತ್ರ, ವಿದ್ಯುತ್ ಮತ್ತು ನಿಯಂತ್ರಣ ಚೌಕಟ್ಟಿನ ಆರು ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ಪ್ರಾರಂಭಿಸುತ್ತದೆ ಎಂದು ಸೀತಾರಾಮನ್ ಹೇಳಿದ್ದಾರೆ. ಆದ್ರೆ ಕಳೆದ ಬಜೆಟ್ ನಲ್ಲಿ ಘೋಷಣೆ ಮಾಡಿದ್ದ ಎಷ್ಟು ಯೋಜನೆಗಳು ಕಾರ್ಯಗತವಾಗಿವೆ? ಪ್ರಗತಿ ಎಷ್ಟು ಸಾಧಿಸಲಾಗಿದೆ ಎಂಬ ಕುರಿತಂತೆ ಮಾಹಿತಿ ನೀಡಬೇಕು. ಕೇವಲ ಘೋಷಣೆ ಮಾಡಿದರೆ ಸಾಲದು, ಕಾರ್ಯರೂಪಕ್ಕೆ ಬರಬೇಕು ಎಂದಿದ್ದಾರೆ.
ಪಿಎಂ ಕಿಸಾನ್ ಪಾವತಿಗಳ ಹಣದುಬ್ಬರ ಸೂಚ್ಯಂಕ ಮತ್ತು ಪಿಎಂ ಫಸಲ್ ಬಿಮಾ ಯೋಜನೆ ಸುಧಾರಣೆಗಳ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಮೇಕ್ ಇನ್ ಇಂಡಿಯಾ ಭಾರತದಲ್ಲಿ ಎಲ್ಲವೂ ನಕಲಿಯಾಗಿ ಮಾರ್ಪಟ್ಟಿದೆ. ಆದ್ದರಿಂದ ಇದೊಂದು ಕಣ್ಣೊರೆಸುವ ತಂತ್ರದ ಬಜೆಟ್ ಅಷ್ಟೇ ಎಂದು ಹೇಳಿದ್ದಾರೆ.