SUDDIKSHANA KANNADA NEWS/ DAVANAGERE/ DATE-06-06-2025
ದಾವಣಗೆರೆ: ‘ಅದು ಯಾವುದೇ ಕ್ಲಿಷ್ಟಕರ ಸನ್ನಿವೇಶ ಇರಲಿ, ಯಾರಿಗಾದರೂ ಆರೋಗ್ಯ ಸಮಸ್ಯೆ ಬರಲಿ, ಯಾರದರೂ ಸ್ವರ್ಗಸ್ಥರಾಗಿರಲಿ, ವಾಹನ ಅಪಘಾತವಿರಲಿ, ಅಲ್ಲಿ ಪ್ರತ್ಯಕ್ಷರಾಗಿ ತನ್ನಿಂದಾಗುವ ಎಲ್ಲಾ ರೀತಿಯ ಸಹಾಯ ಮಾಡುತ್ತಾರೆ’ ಅದಕ್ಕೆ ಅವರನ್ನು ‘೧೦೮’ ಶಾಸಕರೆಂದೇ ಕರೆಯುತ್ತಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಶಾಸಕ ಕೆ.ಎಸ್.ಬಸವಂತಪ್ಪ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ನಗರನಹಳ್ಳಿ ಗ್ರಾಮದಲ್ಲಿ ಶುಕ್ರವಾರ 12 ಕೋಟಿ ರೂ. ವೆಚ್ಚದ ಬಾವಿಹಾಳ್-ಕೊಡಗನೂರು ರಸ್ತೆ ಅಭಿವೃದ್ಧಿ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಜನಸಾಮಾನ್ಯರ ಸೇವೆಯನ್ನೇ ತನ್ನುಸಿರು ಎಂದು ಭಾವಿಸಿಕೊಂಡಿರುವ ಶಾಸಕ ಕೆ.ಎಸ್.ಬಸವಂತಪ್ಪ, ಸಮಾಜಮುಖಿ ಕೆಲಸ, ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಸೇವೆ ಮಾಡುತ್ತಿದ್ದಾರೆ. ಹಾಗೆ ನೋಡಿದರೆ ಇವರು ಈ ಕಾರ್ಯ ಮಾಡುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ಕೂಡ ಮಾಡುತ್ತಾ ಬಂದಿದ್ದಾರೆ ಎಂದು ಶಾಸಕರ ಕಾರ್ಯ ವೈಖರಿಗೆ ಶಬ್ಬಾಸ್‌ಗಿರಿ ನೀಡಿದರು.
ಶಾಸಕ ಕೆ.ಎಸ್.ಬಸವಂತಪ್ಪ ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಪ್ರಾಮಾಣಿಕ ಕೆಲಸ ಮಾಡುತ್ತಿದ್ದಾನೆ. ಜನಸಾಮಾನ್ಯರ ನೋವು-ನಲಿವುಗಳಿಗೆ ಸುಲಭವಾಗಿ, ಸರಳವಾಗಿ ಸಿಗುವ ವ್ಯಕ್ತಿ ಯಾರಾದರೂ ಇದ್ದರೆ ಅದು ಕೆ. ಎಸ್. ಬಸವಂತಪ್ಪ ಅವರಾಗಿದ್ದಾರೆ ಎಂದರು.
‘108’ಗೆ ಕರೆ ಮಾಡಿದರೆ ಹೇಗೆ ಆಂಬ್ಯುಲೆನ್ಸ್ ತುರ್ತಾಗಿ ನಿಮ್ಮ ನೆರವಿಗೆ ಧಾವಿಸುತ್ತಿದೆಯೋ ಅದೇ ರೀತಿ ಶಾಸಕ ಕೆ.ಎಸ್.ಬಸವಂತಪ್ಪ, ಜನರ ಬಳಿಗೆ ಧಾವಿಸಿ ನಿಮ್ಮ ಸಮಸ್ಯೆಗಳು, ನಿಮ್ಮ ತೊಂದರೆಗಳಿಗೆ ಪರಿಹಾರ ನೀಡುತ್ತಾರೆ. ಅದಕ್ಕಾಗಿ ಅವರನ್ನು ಜನರ ಕೈಗೆ ಸಿಗುವ ‘108 ಶಾಸಕರು’ ಎಂದೇ ಖ್ಯಾತಿ ಕರೆಯುತ್ತಾರೆ. ಇವರನ್ನು ನೀವು ಬೆಳೆಸಬೇಕು. ಇವರನ್ನು ಕಳೆದುಕೊಂಡರೆ ನಿಮಗೆ ನಷ್ಟ ಹೊರತು ಅವರಿಗಲ್ಲ. ಹೀಗಾಗಿ ಅವರ ಮೇಲೆ ನಿಮ್ಮೆಲ್ಲರ ಆಶೀರ್ವಾದ ಇರಬೇಕೆಂದು ಹೇಳಿದರು.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಹಾಳಾಗಿರುವ ರಸ್ತೆಗಳ ಅಭಿವೃದ್ಧಿಗೆ ಶಾಸಕ ಕೆ.ಎಸ್.ಬಸವಂತಪ್ಪ ಅವರು ಸುಮಾರು 50 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ರಾಜ್ಯದ ರಸ್ತೆಗಳನ್ನು ಅಭಿವೃದ್ಧಿಗೊಳಿಸುವುದು ಲೋಕೋಪಯೋಗಿ ಇಲಾಖೆ ಮೇಲೆ ಭಾರೀ ಜವಾಬ್ದಾರಿ ಇದೆ. ಈ ನಿಟ್ಟಿನಲ್ಲಿ ಹಂತ ಹಂತವಾಗಿ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಲಾಗುವುದು ಎಂದು ತಿಳಿಸಿದರು.
ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಬಾವಿಹಾಳ್-ಕೊಡಗನೂರು ರಸ್ತೆ ಅಭಿವೃದ್ಧಿಗೆ ಸಿರಿಗೆರೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಕಾರ್ಯಕ್ರಮವೊಂದರಲ್ಲಿ ಸೂಚಿಸಿದ್ದರು. ಜಗದ್ಗುರುಗಳ
ನಿರ್ದೇಶನದಂತೆ ಇವತ್ತು 12 ಕೋಟಿ ರೂ. ವೆಚ್ಚದ ಬಾವಿಹಾಳ್-ಕೊಡಗನೂರು ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಭೂಮಿಪೂಜೆ ನೆರವೇರಿಸಿದ್ದಾರೆ ಎಂದು ತಿಳಿಸಿದರು.
ಕ್ಷೇತ್ರದ ವ್ಯಾಪ್ತಿಯಲ್ಲಿ 200ಕ್ಕೂ ಹೆಚ್ಚು ಹಳ್ಳಿಗಳು ಬರುತ್ತವೆ. ಈ ನಿಟ್ಟಿನಲ್ಲಿ ಗ್ರಾಮೀಣ ಅಭಿವೃದ್ಧಿ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ. ಹೀಗಾಗಿ ಸಚಿವ ಸತೀಶ್ ಜಾರಕಿಹೊಳಿ ಅವರು ರಸ್ತೆ ಅಭಿವೃದ್ಧಿಗೆ 5 ಕೋಟಿ ರೂ. ಹೆಚ್ಚಿನ ಅನುದಾನ
ನೀಡಿದ್ದಾರೆ. ಅದರಂತೆ ಮುಖ್ಯಮಂತ್ರಿಗಳ ಬಳಿ ಇನ್ನೂ ನೂರಾರು ಕೋಟಿ ರೂ. ಅನುದಾನ ಕೊಡಿಸುವ ಮೂಲಕ ಮಾಯಕೊಂಡ ಕ್ಷೇತ್ರದ ಅಭಿವೃದ್ಧಿ ಮಾಡಲು ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.
22 ಕೆರೆಗಳ ಏತನೀರಾವರಿ ಯೋಜನೆ ಈ ಭಾಗದ ರೈತರ ಜೀವನಾಡಿಯಾಗಿದೆ. 22 ಕೆರೆಗಳ ಏತನೀರಾವರಿ ಯೋಜನೆಗೆ 18 ಕೋಟಿ ರೂ. ಈಗಾಗಲೇ ಟೆಂಡರ್ ಕರೆಯಲಾಗಿದೆ. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಮತ್ತು ನಾನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಳಿ ಹೋಗಿ ಈ ಯೋಜನೆಗೆ ಹೆಚ್ಚಿನ ಅನುದಾನ ನೀಡುವಂತೆ ಒತ್ತಡ ಹಾಕಿದ್ದು, ಈ ಯೋಜನೆ ಕಾರ್ಯಗತಗೊಂಡರೆ ಈ ಭಾಗದ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ದಾವಣಗೆರೆ-ಹೊಳಲ್ಕೆರೆ ಮಾರ್ಗದಲ್ಲಿ ಅತೀ ಹೆಚ್ಚು ವಾಹನಗಳು ಸಂಚಾರ ಮಾಡುವುದರಿಂದ ಕೊಡಗನೂರು ಕೆರೆ ಏರಿ ಪದೇ ಪದೇ ಹೊಡೆದು ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ. ಹೀಗಾಗಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡಿದರೆ ಹೊಳಲ್ಕೆರೆ-ದಾವಣಗೆರೆ ಮಾರ್ಗದಲ್ಲಿ ವಾಹನಗಳು ಸುಗಮವಾಗಿ ಸಂಚರಿಸಲು ಅನುಕೂಲವಾಗಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರ ಬಳಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಯಕೊಂಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ.ಹನುಮಂತಪ್ಪ, ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ಮುಖಂಡರಾದ ಹೊದಿಗೆರೆ ರಮೇಶ್, ರುದ್ರೇಶಪ್ಪ, ಮೈಲಪ್ಪ, ಅಣ್ಣೇಶಪ್ಪ, ಶಿವಕುಮಾರ್, ಹೂವಣ್ಣ, ಜಯಪ್ಪ, ರಮೇಶಣ್ಣ, ಮಾರುತಿ, ಗ್ರಾಪಂ ಸದಸ್ಯೆ ಕರಿಯಮ್ಮ, ಹೊನ್ನನಾಯಕನಹಳ್ಳಿ ತಿಪ್ಪನಾಯ್ಕ್, ದೇವೇಂದ್ರಪ್ಪ, ಚಂದ್ರಪ್ಪ, ಹನುಮಂತಪ್ಪ, ಗಂಗನಕಟ್ಟೆ ಮರುಳಸಿದ್ದಚಾರಿ, ಸುರೇಶ್‌ನಾಯ್ಕ್, ಶೇಖರ್‌ನಾಯ್ಕ್ ಸೇರಿದಂತೆ ಗ್ರಾಮಸ್ಥರು ಇದ್ದರು.
30 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯಲ್ಲಿ 30 ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಹಾಗೂ ಭೂಮಿಪೂಜೆಯನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನೆರವೇರಿಸಿದರು. 2 ಕೋಟಿ ವೆಚ್ಚದ ಅಣಜಿ ವಾಲ್ಮೀಕಿ ಸಮುದಾಯ ಭವನ ಉದ್ಘಾಟನೆ, 12 ಕೋಟಿ ವೆಚ್ಚದ ಬಾವಿಹಾಳ್-ಕೊಡನಗೂರು ರಸ್ತೆ ಅಭಿವೃದ್ಧಿ, 8 ಕೋಟಿ ವೆಚ್ಚದ ದಾವಣಗೆರೆ-ಲೋಕಿಕೆರೆ ರಸ್ತೆ ಅಭಿವೃದ್ಧಿ, 2 ಕೋಟಿ ವೆಚ್ಚದ ಕಾಟೇಹಳ್ಳಿ ಸಮುದಾಯ ಭವನ ನಿರ್ಮಾಣ ಸೇರಿದಂತೆ 30 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.