SUDDIKSHANA KANNADA NEWS/ DAVANAGERE/ DATE:24-10-2024
ದಾವಣಗೆರೆ: ಜಲಸಿರಿ ಯೋಜನೆಯಡಿ ಈಗಾಗಲೇ ನೀರು ಪಡೆಯುತ್ತಿರುವವರು ಬಿಲ್ ಪಾವತಿಸಲೇಬೇಕು. ಕಳೆದ ಮೂರು ತಿಂಗಳಿನಿಂದ ಕೆಲ ವಾರ್ಡ್ ಗಳಲ್ಲಿ ಜಲಸಿರಿ ಯೋಜನೆಯಡಿ ನೀರು ಬರುತ್ತಿದ್ದು, ವಿನಾಯಿತಿ ಪ್ರಶ್ನೆಯೇ ಇಲ್ಲ. ಪೂರ್ಣ ಪ್ರಮಾಣದ ಬಿಲ್ ಪಾವತಿಸಲೇಬೇಕು ಎಂದು ಮಹಾನಗರ ಪಾಲಿಕೆ ಮೇಯರ್ ಕೆ. ಚಮನ್ ಸಾಬ್ ಹಾಗೂ ಆಯುಕ್ತೆ ರೇಣುಕಾ ಸ್ಪಷ್ಟಪಡಿಸಿದರು.
ಜಲಸಿರಿ ಯೋಜನೆಯಡಿ ಬಿಲ್ ಪಾವತಿ ಮಾಡುವುದು ಬೇಡ ಎಂಬುದಾಗಿ ಈ ಹಿಂದೆ ಕಾಂಗ್ರೆಸ್ ಮುಖಂಡರೇ ಹೇಳಿದ್ದರು. ಆದ್ರೆ, ಈಗ ಮೇಯರ್ ಹಾಗೂ ಆಯುಕ್ತರು ನೀರಿನ ಸಂಪರ್ಕ ಪಡೆದವರು ಹಣ ಕಟ್ಟಲೇಬೇಕು
ಎಂದು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲಸಿರಿ ಯೋಜನೆಯು 14 ವಲಯಗಳಲ್ಲಿ ಪ್ರಾರಂಭವಾಗಿದೆ. ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು. ಹೆಚ್ಚಿನ ಬಿಲ್ ಬಂದಲ್ಲಿ, ನಳ ಸಂಪರ್ಕ ಮತ್ತು ಇತ್ಯಾದಿ ತೊಂದರೆಯಾದರೆ 9036544419 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು ಎಂದು ತಿಳಿಸಿದರು.
ಕೆ. ಚಮನ್ ಸಾಬ್ ಮಾತನಾಡಿ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಮೇಯರ್ ಕಚೇರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಮಹಾನಗರ ಪಾಲಿಕೆಯಲ್ಲಿ ಹೆಲ್ಪ್ ಲೈನ್ ಡೆಸ್ಕ್ ಆರಂಭಿಸುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸದ್ಯದಲ್ಲಿಯೇ ಶುರು ಮಾಡಲಾಗುವುದು. ಇದಕ್ಕಾಗಿ ಓರ್ವ ಸಿಬ್ಬಂದಿ ನಿಯೋಜಿಸಲಾಗಿದೆ. ಹೆಲ್ಪ್ ಲೈನ್ ನಂಬರ್ ಸಹ ನೀಡಲಾಗುವುದು. ಸಾರ್ವಜನಿಕರು ಏನಾದರೂ ಸಮಸ್ಯೆ ಇದ್ದರೆ ಇಲ್ಲಿಗೆ ಬಂದು ಮಾಹಿತಿ ಪಡೆದು ನಂತರ ಯಾವ ಕೆಲಸಕ್ಕೆ ಬಂದಿದ್ದಾರೋ ಅಂಥ ಅಧಿಕಾರಿಗಳನ್ನು ಭೇಟಿ ಮಾಡುವ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಮಾಹಿತಿ ನೀಡಿದರು.
ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ ಮಳೆಯಿಂದಾಗಿ ಅನೇಕ ಮನೆಗಳು ಬಿದ್ದಿವೆ. ಪರಿಹಾರ ನೀಡಲಾಗಿದೆ. ಕೆಲ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ 165 ಕಿಲೋಮೀಟರ್ ರಾಜಕಾಲುವೆ ಇದ್ದು, ಸ್ವಚ್ಛಗೊಳಿಸುವ ಕಾರ್ಯ ಮಾಡಲಾಗಿದೆ. ಈ ಬಾರಿ ಭಾರೀ ಮಳೆಯಾಗಿದ್ದರೂ ದಾವಣಗೆರೆಯಲ್ಲಿ ಮಳೆಯಿಂದಾಗಿ ಭಾರೀ ಹಾನಿ ಆಗಿಲ್ಲ. ಹೆಚ್ಚಿನ ಮನೆಗಳಿಗೆ ನೀರು ನುಗ್ಗಿಲ್ಲ. ಬಡಾವಣೆಗಳಲ್ಲಿ ಪ್ರವಾಹದ ಸ್ಥಿತಿ ತಲೆದೋರಿಲ್ಲ. ಟೆಂಡರ್ ಮೂಲಕ ಆವರಗೆರೆಯಿಂದ ಬಸಾಪುರ ವಾರ್ಡ್ ವರೆಗೆ ಕ್ಲೀನ್ ಮಾಡಿಸಲಾಗಿದೆ. ಹಾಗಾಗಿ, ಇಷ್ಟೊಂದು ಮಳೆಯಾದರೂ ಯಾವುದೇ ಸಮಸ್ಯೆಯಾಗಿಲ್ಲ ಎಂದು ತಿಳಿಸಿದರು.
ಬೀದಿ ನಾಯಿಗಳ ಹಾವಳಿ ಹೆಚ್ಚಾದ ಬಗ್ಗೆ ದೂರು ಬರುತ್ತಿದೆ. ಈ ಬಗ್ಗೆ ಪಾಲಿಕೆಯಿಂದ ಕ್ರಮಕೈಗೊಂಡಿದ್ದೇವೆ ಈಗಾಗಲೇ 7500 ಬೀದಿನಾಯಿಗಳ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ನಗರದಲ್ಲಿ ಹಂದಿಗಳನ್ನು ಬಿಡುತ್ತಿದ್ದಾರೆಂಬ ದೂರು ಬಂದಿದೆ. ಈ ಹಿನ್ನೆಲೆಯಲ್ಲಿ ಹಂದಿ ಸಾಕಾಣಿಕೆದಾರರಿಗೆ ಜನರಿಗೆ ತೊಂದರೆಯಾಗದಂತೆ ಸೂಚನೆ ನೀಡಲಾಗುವುದು ಎಂದು ಹೇಳಿದರು.
ರೋಗ ಬಂದಿರುವ ನಾಯಿಗಳ ಸಂಹಾರಕ್ಕೆ ಅವಕಾಶ ಇದೆ. ಕೆಲ ನಾಯಿಗಳು ಜನರ ಮೈಮೇಲೆ ಎರಗುತ್ತಿವೆ. ಈ ಕಾರಣಕ್ಕಾಗಿ ರೋಗಪೀಡಿತ ನಾಯಿಗಳ ಹಾವಳಿ ಬಗ್ಗೆ ಜನರಿಂದ ದೂರು ಬಂದರೆ ನಾಯಿಗಳ ಸಂಹಾರಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ. ಮಾತ್ರವಲ್ಲ, 6500 ನಾಯಿಗಳಿಗೆ ರೇಬಿಸ್ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.
ಪ್ರತಿ ದಿನ ಕಸ ಸಂಗ್ರಹಣೆಗೆ 108 ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇನ್ನೂ 30 ವಾಹನಗಳು ಬೇಕಿವೆ. ಈ ಕಾರಣಕ್ಕಾಗಿ ಪ್ರತಿದಿನ ಎಲ್ಲಾ ವಾರ್ಡ್ ಗಳಿಗೂ ಹೋಗಿ ಕಸ ಸಂಗ್ರಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ದೊಡ್ಡದಾದ 10 ವಾರ್ಡ್ ಗಳಲ್ಲಿ ಸಮಸ್ಯೆ ಇರುವುದು ನಿಜ. ಮುಂಬರುವ ದಿನಗಳಲ್ಲಿ ಸರ್ಕಾರದಿಂದ ಅನುದಾನ ಪಡೆದು ವಾಹನಗಳ ಸಂಖ್ಯೆ ಹೆಚ್ಚಿಸಿ ಪರಿಹಾರ ನೀಡಲಾಗುವುದು ಎಂದು ಹೇಳಿದರು.
ಮಳೆಯಿಂದಾಗಿ ದಾವಣಗೆರೆ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚು ಅನಾಹುತ ಸಂಭವಿಸಿಲ್ಲ. ಗುಂಡಿಗಳನ್ನು ಮುಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಬಾರಿ ಮಳೆ ಜಾಸ್ತಿ ಬಂದಿದೆ. ಹಾಗಾಗಿ, ಕೆಲವೊಂದು ಕಡೆ ಸಮಸ್ಯೆಯಾಗಿರುವುದು ನಿಜ. ಗ್ಯಾಸ್ ಲೈನ್, ಜಲಸಿರಿ, ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಸಹಜವಾಗಿಯೇ ಅಲ್ಲಲ್ಲಿ ಗುಂಡಿಗಳನ್ನು ಅಗೆಯಲಾಗಿದೆ. 2 ಕೋಟಿ ರೂಪಾಯಿ ಟೆಂಡರ್ ಪಡೆದು ಗುಂಡಿ ಮುಚ್ಚಿಸುವ ಕೆಲಸ ಮಾಡಲಾಗುತಿತ್ತು. ಕಳೆದ ತಿಂಗಳು ಗುತ್ತಿಗೆದಾರರು ಮೃತಪಟ್ಟ ಕಾರಣಕ್ಕೆ ಸ್ವಲ್ಪ ತಡವಾಗಿದೆ. ಈಗಾಗಲೇ ಶೇಕಡಾ 50ರಷ್ಟು ಕೆಲಸ ಆಗಿದೆ. ವಲಯವಾರು ಟೆಂಡರ್ ಕರೆದು ರಸ್ತೆ ದುರಸ್ತಿಪಡಿಸಲಾಗುವುದು ಎಂದು ಆಯುಕ್ತೆ ರೇಣುಕಾ ತಿಳಿಸಿದರು.
ಗೋಷ್ಠಿಯಲ್ಲಿ ಉಪಮೇಯರ್ ಸೋಗಿ ಶಾಂತಕುಮಾರ್ ಹಾಜರಿದ್ದರು.