SUDDIKSHANA KANNADA NEWS/ DAVANAGERE/ DATE:13-04-2025
ದಾವಣಗೆರೆ: ಯಾವುದೇ ಚಳುವಳಿ ಮಾಡುವಾಗ ಒಗ್ಗಟ್ಟು ಮುಖ್ಯ. ನಮ್ಮಲ್ಲಿ ಸಂಘಟನಾತ್ಮಕ ದೌರ್ಬಲ್ಯ ಇರಬಾರದು. ದೌರ್ಬಲ್ಯ ಇದ್ದರೆ ಸಂಘಟನೆ ಕಟ್ಟಲು ಸಾಧ್ಯವಿಲ್ಲ. ಸಂಘಟನೆಯ ಹಾದಿಯಲ್ಲಿ ಆರ್ಥಿಕ ಸಂಗ್ರಹದ ದೌರ್ಬಲ್ಯ ಇದ್ದರೆ ಸಂಘ ಬೆಳೆಯಲ್ಲ. ಎಲ್ಲದಕ್ಕೂ ಲೆಕ್ಕಾಚಾರ ಇಡಬೇಕಾಗುತ್ತದೆ ಎಂದು ಎಐಟಿಯುಸಿ ಜಿಲ್ಲಾಧ್ಯಕ್ಷ ರಾಘವೇಂದ್ರ ಕೆ.ನಾಯರಿ ಕರೆ ನೀಡಿದರು.
ನಗರದ ಆಶೋಕ ರಸ್ತೆಯಲ್ಲಿನ ಕಾಂ.ಪಂಪಾಪತಿ ಭವನದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡರೇಷನ್ ಜಿಲ್ಲಾ ಸಮಿತಿಯ ಆಯ್ಕೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೆಲವರ ಸ್ವಾರ್ಥಕ್ಕಾಗಿ ಕೆಲವು ಸಂಘಟನೆಗಳು ಬೇರೆಬೇರೆಯಾಗಿವೆ. ನೀವು ಸಂಘನಾತ್ಮಕವಾಗಿ ಬೆಳೆಯಬೇಕಿದೆ. ಯಾವುದೇ ಒಬ್ಬ ವ್ಯಕ್ತಿ ಆಧಾರಿತ ಶಕ್ತಿಯಾಗಿ ಬೆಳೆಯಬಾರದು. ಸಂಘಟನಾತ್ಮಕ ಬದ್ದತೆಯಿಂದ ನಾವು ಮುಂದುವರೆದರೆ ಅದು ನಮ್ಮನ್ನು ಬೆಳೆಸುತ್ತದೆ. ನೀವು ಬೆಳೆಯುವ ಜೊತೆ ನಿಮ್ಮ ಜೊತೆಯಲ್ಲಿ ಇರುವವರನ್ನು ಬೆಳೆಸುತ್ತದೆ ಎಂದು ಕಿವಿಮಾತು ಹೇಳಿದರು.
ನಮ್ಮ ಸಂಘಟನೆ ಯಾವುದೇ ವ್ಯಕ್ತಿ ಆಧಾರಿತವಾಗಿ, ವ್ಯಕ್ತಿಯ ಪೂರಕ ಆಧಾರಿತವಾಗಿ ಹುಟ್ಟಿದ ಸಂಘಟನೆಯಲ್ಲ. ಹೆಚ್. ಕೆ. ರಾಮಚಂದ್ರಪ್ಪ ಅವರು ಕೊನೆಯ ಉಸಿರು ಇರುವವರೆಗೂ ಕಮ್ಯೂನಿಷ್ಟ್ ಪಕ್ಷ ಹಾಗೂ ಎಐಟಿಯುಸಿ ಎಂದುಕೊಂಡೇ
ಇದ್ದವರು. ಅವರು ಆಮಿಷಕ್ಕೆ ಒಳಗಾಗಿ ಬೇರೆ ಸಂಘಟನೆಗೆ ಹೋಗಲಿಲ್ಲ. ಅವರ ಮಾರ್ಗದರ್ಶನದಂತೆ ನಾವೆಲ್ಲರೂ ಮುಂದುವರೆಯೋಣ. ಸಂಘಟನೆ ಸದೃಢವಾಗಿದ್ದರೆ ಯಾರು ಅದನ್ನು ಒಡೆಯಲು ಸಾಧ್ಯವಿಲ್ಲ ಎಂದರು.
ಇದೇ ವೇಳೆ ಜಿಲ್ಲಾ ಸಮಿತಿಯನ್ನು ರಚನೆ ಮಾಡಲಾಯಿತು. ನೂತನ ಜಿಲ್ಲಾಧ್ಯಕ್ಷರಾಗಿ ಎಸ್.ಎಸ್.ಮಲ್ಲಮ್ಮ ಆನಗೋಡು, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಜಿ.ಮಂಜುಳಾ ಹೊಸಳ್ಳಿ, ಖಜಾಂಚಿಯಾಗಿ ಹೆಚ್.ಗೀತಾ ಮಾಯಕೊಂಡ
ಆಯ್ಕೆಯಾದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾಗಿ ಮಮತ ಮಾಯಕೊಂಡ, ಎಂ.ಆರ್.ಕುಸುಮ ಕುರ್ಕಿಬುಳ್ಳಾಪುರ ಕ್ಯಾಂಪ್, ದಾವಣಗೆರೆ ತಾಲ್ಲೂಕು ಉಪಾಧ್ಯಕ್ಷರಾಗಿ ವೇದನ, ಕಾರ್ಯದರ್ಶಿ ಸವಿತಾ ಆಯ್ಕೆಯಾಗಿದ್ದಾರೆ. ಜಗಳೂರು ತಾಲೂಕಿಗೆ ಉಪಾಧ್ಯಕ್ಷೆಯಾಗಿ ಪುಷ್ಪಾ, ಕಾರ್ಯದರ್ಶಿಯಾಗಿ ರತ್ಮಮ್ಮ ಆಯ್ಕೆಯಾಗಿದ್ದಾರೆ. ಹೊನ್ನಾಳಿ ತಾಲೂಕಿಗೆ ಗೌರವ ಅಧ್ಯಕ್ಷೆಯಾಗಿ ಚೆನ್ನಮ್ಮ, ಕಾರ್ಯದರ್ಶಿಯಾಗಿ ರೇಣುಕಮ್ಮ ಆಯ್ಕೆಯಾಗಿದ್ದಾರೆ. ಚನ್ನಗಿರಿ ತಾಲ್ಲೂಕಿಗೆ ಉಪಾಧ್ಯಕ್ಷರಾಗಿ ಲತಾಮಣಿ, ಕಾರ್ಯದರ್ಶಿಯಾಗಿ ನಿರ್ಮಲ, ನ್ಯಾಮತಿ ತಾಲೂಕಿಗೆ ಉಪಾಧ್ಯಕ್ಷರಾಗಿ ಎಸ್.ವನಿತ, ಕಾರ್ಯದರ್ಶಿಯಾಗಿ ಜಿ.ಎಂ. ಮಂಜುಳಾ ಆಯ್ಕೆಯಾದರು.
ಸಭೆಯಲ್ಲಿ ಎಐಟಿಯುಸಿ ರಾಜಾಧ್ಯಕ್ಷ ಬಿ.ಅಮ್ಜದ್, ಪ್ರಧಾನ ಕಾರ್ಯದರ್ಶಿ ಜಯಮ್ಮ, ಆವರಗೆರೆ ಚಂದ್ರು, ಆವರಗೆರೆ ಹೆಚ್.ಜಿ.ಉಮೇಶ್ ಇದ್ದರು.