SUDDIKSHANA KANNADA NEWS/ DAVANAGERE/ DATE:02-02-2024
ದಾವಣಗೆರೆ: ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಲಾಗಿದ್ದ ಉಚಿತ ಪ್ರಯಾಣದ ಶಕ್ತಿ, 200 ಯುನಿಟ್ವರೆಗೆ ಉಚಿತ ಕರೆಂಟ್ ಗೃಹಜ್ಯೋತಿ, ಮನೆ ಯಜಮಾನಿಗೆ ತಿಂಗಳಿಗೆ ಎರಡು ಸಾವಿರ ನೀಡುವ ಗೃಹಲಕ್ಷ್ಮಿ, 10 ಕೆ.ಜಿ.ಅಕ್ಕಿ ನೀಡುವ ಅನ್ನಭಾಗ್ಯ, ಪದವೀಧರ, ಡಿಪ್ಲೊಮಾ ಉತ್ತೀರ್ಣರಾದವರಿಗೆ ಎರಡು ವರ್ಷಗಳ ವರೆಗೆ ನಿರುದ್ಯೋಗ ಭತ್ಯೆ ನೀಡುವ ಗ್ಯಾರಂಟಿ ಯೋಜನೆಗಳನ್ನು ಚಾಚು ತಪ್ಪದೇ ಜಾರಿಗೆ ತರುವ ಮೂಲಕ ನುಡಿದಂತೆ ನಡೆದಿದೆ. ಇದು ಜನಪರ ಸರ್ಕಾರವಾಗಿದ್ದು ಜನರು ಸಹ ಸರ್ಕಾರದ ಪರವಾಗಿರಬೇಕೆಂದು ಕಾಂಗ್ರೆಸ್ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ತಿಳಿಸಿದರು.
ಅವರು ದಾವಣಗೆರೆ ತಾಲೂಕಿನ ಕುಕ್ಕುವಾಡ ಗ್ರಾಮದಲ್ಲಿ ಏರ್ಪಡಿಸಲಾದ ಗ್ಯಾರಂಟಿ ಯೋಜನೆಗಳ ಗ್ರಾಮ ಮಟ್ಟದ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರ ಜನರಿಗೆ ನೀಡಿದ ಆಶ್ವಾಸನೆಯಂತೆ ನಿಗದಿತ ಸಮಯದಲ್ಲಿಯೇ ಯೋಜನೆಗಳನ್ನು ಜಾರಿಗೆ ತಂದು ಜನರಿಗೆ ಅನುಕೂಲ ಕಲ್ಪಿಸಿದೆ. ಗ್ಯಾರಂಟಿ ಯೋಜನೆಗಳಿಂದ ಕುಟುಂಬದಲ್ಲಿ ಆರ್ಥಿಕ ಬಲ ಬಂದಿದ್ದು ಜೀವನ ಮಟ್ಟ ಸುಧಾರಣೆ ಹಾಗೂ ನಿರ್ವಹಣೆಯು ಸುಲಭವಾಗಿದೆ. ಬಡವರು, ಮಧ್ಯಮ ವರ್ಗದವರಿಗೆ ಗ್ಯಾರಂಟಿ ಯೋಜನೆಗಳಿಂದ ಬಹಳ ಅನುಕೂಲವಾಗಿದೆ ಎಂದರು.
ಕೆಲವೊಂದು ತಾಂತ್ರಿಕ ಕಾರಣಗಳಿಂದ ಗೃಹಲಕ್ಷ್ಮಿ ಯೋಜನೆಯ ರೂ.2000 ಮತ್ತು ಅನ್ನಭಾಗ್ಯ ಯೋಜನೆಯಡಿ ಐದು ಕೆ.ಜಿ.ಅಕ್ಕಿ ಬದಲಿಗೆ ನೀಡಲಾಗುವ ಹಣವು ಆಧಾರ್ ಜೋಡಣೆ, ಪಡಿತರ ಚೀಟಿಯ ತಿದ್ದುಪಡಿ, ಆಧಾರ್ ತಿದ್ದುಪಡಿಯ
ಕಾರಣದಿಂದ ಬಾರದೆ ಇರಬಹುದು. ಅಧಿಕಾರಿಗಳು ಇರುವ ಎಲ್ಲಾ ಅಡೆತಡೆಗಳನ್ನು ನಿವಾರಣೆ ಮಾಡಿ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸುವರು, ಯಾವುದೇ ಆತಂಕ ಬೇಡ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಮಾತನಾಡಿ ಸರ್ಕಾರ ಜನರ ಕಲ್ಯಾಣಕ್ಕಾಗಿ ಅದರಲ್ಲಿಯೂ ಮಹಿಳೆಯರ ಕಲ್ಯಾಣಕ್ಕಾಗಿ 5 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿ ಯಶಸ್ವಿಯಾಗಿ ಅನುಷ್ಟಾನ ಮಾಡಲಾಗಿದೆ. ಈ ಐದು ಗ್ಯಾರಂಟಿ ಯೋಜನೆಗಳ ಉಪಯೋಗ ಪಡೆಯದೇ ಇರುವವರ ಸಂಖ್ಯೆ ತೀರಾ ವಿರಳವಾಗಿದೆ. ಪ್ರತಿ ಕುಟುಂಬವು ಇದರ ಫಲಾನುಭವಿಗಳಾಗಿದ್ದು ಕೆಲವರು ಎಲ್ಲಾ ಯೋಜನೆಗಳ ಲಾಭ ಪಡೆದಿದ್ದರೆ, ಇನ್ನುಳಿದವರು ಒಂದೆರಡು ಯೋಜನೆಗಳ ಉಪಯೋವನ್ನು ಪಡೆದೇ ಇರುತ್ತಾರೆ ಎಂದು ಹೇಳಿದರು.
ಈ ಯೋಜನೆಗಳಿಂದ ಕುಟುಂಬದ ಬಡತನ ನಿರ್ಮೂಲನೆ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಮೇಲೆತ್ತುವ ಮೂಲಕ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಸರ್ಕಾರ ಯೋಜನೆಗಳನ್ನು ಜಾರಿಗೆ ತಂದಿದೆ. ಈಗ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಕೈಗೊಳ್ಳುವ ಮೂಲಕ ಜನರಿಗೆ ಮತ್ತಷ್ಟು ಜಾಗೃತಿ ಮೂಡಿಸುವ ಮೂಲಕ ತಾಂತ್ರಿಕ ಕಾರಣದಿಂದ ಯೋಜನೆ ಪಡೆಯಲು ಸಾಧ್ಯವಾಗದ ಫಲಾನುಭವಿಗಳಿಗೆ ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ. ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯಡಿ ಕೆಲವರಿಗೆ ಹಣ ಬಂದಿಲ್ಲ ಎಂದು ಹೇಳುತ್ತಾರೆ. ಇದಕ್ಕೆ ಅವರ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಯಲ್ಲಿನ ಹೆಸರು ವ್ಯತ್ಯಾಸ ಮತ್ತು ಇನ್ನಿತರೆ ಕಾರಣಗಳಿಂದ ಬಾರದೇ ಇರಬಹುದು. ಈ ತೊಂದರೆಗಳನ್ನು ನಿವಾರಿಸುವ ಕೆಲಸ ಮಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಮಟ್ಟದಿಂದ ಫಲಾನುಭವಿಗಳ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ ನೊಂದಣಿಯಾದ ಮಹಿಳೆಯರಿಗೆ ಹಣ ಬಾರದ ತಾಂತ್ರಿಕ ಸಮಸ್ಯೆ ನಿವಾರಣೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೂಲಕ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ದುರ್ಗಶ್ರೀ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ತಹಶೀಲ್ದಾರ್ ಅಶ್ವಥ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀನಿವಾಸ್, ತಾ.ಪಂ.ಸಹಾಯಕ ನಿರ್ದೇಶಕ ಅಭಿಜೀತ್, ಸಿಡಿಪಿಓ ಅಭಿಕುಮಾರ್, ಪಿಡಿಓ ಲಕ್ಷ್ಮಿದೇವಿ ಹಾಗೂ ಕೆಎಸ್ಆರ್ಟಿಸಿ ಡಿಪೋ ಮ್ಯಾನೇಜರ್ ಉಪಸ್ಥಿತರಿದ್ದರು.