SUDDIKSHANA KANNADA NEWS/ DAVANAGERE/ DATE:15-12-2024
ದಾವಣಗೆರೆ: 2025ರ ಫೆಬ್ರವರಿ 27ಕ್ಕೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರ ಜನುಮದಿನಾಚರಣೆ ವಿಜೃಂಭಣೆಯಿಂದ ಆಚರಿಸಲಾಗುವುದು. ಈ ಕಾರ್ಯಕ್ರಮದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ 20 ಲಕ್ಷ ಜನರು ಸೇರಬೇಕು ಎಂಬ ಅಪೇಕ್ಷೆ ಇದ್ದು ಈ ಐತಿಹಾಸಿಕ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು. ಕೇಂದ್ರದ ವರಿಷ್ಠರು ಹಾಗೂ ನಾಡಿನ ಮಠಾಧೀಶರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ.
ನಗರದ ಸಾಯಿ ಇಂಟರ್ ನ್ಯಾಷನಲ್ ನಲ್ಲಿ ಸೇರಿದ್ದ ಬಿಜೆಪಿಯ 55ಕ್ಕೂ ಹೆಚ್ಚು ಮಾಜಿ ಸಚಿವರು, ಶಾಸಕರು ಹಾಗೂ ಮುಖಂಡರ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ ಸೇರಿದಂತೆ ಬಿಜೆಪಿ ನಾಯಕರು, ನಾಡಿನ ಎಲ್ಲಾ ಮಠಾಧೀಶರು, ಎಲ್ಲಾ ಪಕ್ಷದ ಪ್ರಮುಖರಿಗೆ ರಾಜಕೀಯರಹಿತ, ಪಕ್ಷಾತೀತವಾಗಿ ಆಹ್ವಾನಿಸಲಾಗುವುದು. ಈ ಕಾರ್ಯಕ್ರಮಕ್ಕೆಂದು ಯಡಿಯೂರಪ್ಪ ಅಭಿಮಾನಿಗಳ ಬಳಗ ಎಂಬ ಹೆಸರು ನಾಮಕರಣ ಮಾಡಿ ಆಯೋಜನೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಎಸ್. ಎ. ರವೀಂದ್ರನಾಥ್ ಪ್ರಕಟಿಸಿದರು.
ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ ಹಿರಿಯ ನಾಯಕರು. ಮಾರ್ಗದರ್ಶನ ಎಲ್ಲರಿಗೂ ಅವಶ್ಯಕತೆ ಇದೆ. ನಾಡಿನ ಮುಖ್ಯಮಂತ್ರಿಯಾಗಿ ಜನಪ್ರಿಯ ಆಡಳಿತ ನೀಡಿದವರು. ಅವರ ಸಾಧನೆ, ಹೋರಾಟದ ಗುಣ ಸ್ಮರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಧೀಮಂತ ನಾಯಕರನ್ನು ಗುರುತಿಸುವ, ಗೌರವಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಸಭೆಯಲ್ಲಿ ಮಾಜಿ ಸಚಿವರಾದ ಎಂ.ಪಿ ರೇಣುಕಾಚಾರ್ಯ, ಹರತಾಳು ಹಾಲಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮಾಜಿ ಶಾಸಕರಾದ ಎಸ್ ವಿ ರಾಮಚಂದ್ರಪ್ಪ , ಬ್ಯಾಡಗಿ ವಿರುಪಾಕ್ಷಪ್ಪ, ರಾಣೆಬೆನ್ನೂರು ಅರುಣ್ ಕುಮಾರ್, ಮಾಜಿ ಸಚಿವ ಕೊಳ್ಳೆಗಾಲ ಮಹೇಶ್, ಮಾನ್ವಿ ಗಂಗಾಧರ ನಾಯ್ಕ್, ಶಿವಮೊಗ್ಗ ಕುಮಾರಸ್ವಾಮಿ,
ಸೀಮಾ ಮಸೂತಿ, ಬಸವರಾಜ್ ನಾಯ್ಕ್, ಮೊಳಕಾಲ್ಮುರು ತಿಪ್ಪೇಸ್ವಾಮಿ, ಕಡೂರು ಬೆಳ್ಳಿ ಪ್ರಕಾಶ್, ರಾಜಶೇಖರ್ ಶೀಲವಂತ್, ಮಸ್ಕಿ ಪ್ರತಾಪ್ ಗೌಡ್ರು, ಮೈಸೂರು ನಾಗೇಂದ್ರ, ಗುಂಡ್ಲುಪೇಟೆ ನಿರಂಜನ್, ಜಗದೀಶ್ ಮೆಟ್ ಗುಡ್, ಸುರೇಶ್ ಮಾರಿಹಾಳ್. ವಿಶ್ವನಾಥ್ ಪಟೇಲ್, ಮಾಡಾಳ್ ಮಲ್ಲಿಕಾರ್ಜುನ್, ಅಜಯ್ ಕುಮಾರ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.