SUDDIKSHANA KANNADA NEWS/ DAVANAGERE/ DATE:13-04-2025
ದಾವಣಗೆರೆ: ರಾಜ್ಯದಲ್ಲಿ ಮತ್ತೊಂದು ಅಮಾನುಶ ಘಟನೆ ನಡೆದಿದ್ದು, ಸಾರ್ವಜನಿಕವಾಗಿ ಮಹಿಳೆ ಮೇಲೆ ಅಮಾನುಶವಾಗಿ ಥಳಿಸಿ ಕೊಲೆ ಮಾಡಲು ಯತ್ನಿಸಿದ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಾವರಕೆರೆ ಗ್ರಾಮದ ಚಾಲಕ ವೃತ್ತಿ ಕೆಲಸ ಮಾಡುತ್ತಿದ್ದ ಮೊಹಮದ್ ನಯಾಜ್ (32), ಗುಜರಿ ಅಂಗಡಿ ವ್ಯಾಪಾರಿ ಮೊಹಮದ್ ಗೌಸ್‌ಪೀರ್ (45), ಕಬ್ಬಿನ ಜ್ಯೂಸ್ ಅಂಗಡಿ ವ್ಯಾಪಾರಿ ಚಾಂದ್‌ಭಾಷಾ (35), ಇನಾಯತ್ ಉಲ್ಲಾ (51), ಬೈಕ್ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ದಸ್ತಗಿರ್ (24), ಬುಕ್ಕಾಂಬೂದಿ ಕೆರೆಯಲ್ಲಿ ಮೀನುಗಾರಿಕೆ ಕೆಲಸ ಮಾಡುತ್ತಿದ್ದ ರಸೂಲ್ ಟಿ. ಆರ್. (42) ಬಂಧಿತ ಆರೋಪಿಗಳು.
ಘಟನೆ ಹಿನ್ನೆಲೆ:
ಕಳೆದ 11ನೇ ತಾರೀಖಿನಂದು ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬರಿಗೆ ಗುಂಪುಗೂಡಿ ಹಲ್ಲೆ ಮಾಡುತ್ತಿರುವ ವೀಡಿಯೋ ಕಂಡು ಬಂದಿತ್ತು. ಈ ವಿಡಿಯೋ ಬಗ್ಗೆ ಪರಿಶೀಲಿಸಲಾಗಿದ್ದು, ವಿಡಿಯೋದಲ್ಲಿ ಹಲ್ಲೆಗೊಳಗಾದ ಸಂತ್ರಸ್ತೆ ಹಾಗೂ ಘಟನಾ ಸ್ಥಳವನ್ನು ಪತ್ತೆ ಹಚ್ಚಲಾಗಿದೆ.
ವಿಡಿಯೋದಲ್ಲಿ ಹಲ್ಲೆ ದೃಶ್ಯ ಸೆರೆ!
ಚನ್ನಗಿರಿ ತಾಲ್ಲೂಕು ತಾವರಕೆರೆ ಗ್ರಾಮದ ವಾಸಿಯಾದ ಶಭಿನಾ ಬಾನು (38) ಮನೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಈಕೆಯು ಸಂಬಂಧಿಯಾದ ನಸ್ರೀನ್ ಎಂಬುವವರು ಏಪ್ರಿಲ್ 7ರಂದು ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಶಬೀನಾಬಾನು ಮನೆಗೆ ಬಂದಿದ್ದರು. ಶಭೀನಾಬಾನು ಮಕ್ಕಳು ಹಾಗೂ ನಸ್ರೀನ್ ಅವರೊಂದಿಗೆ ಬುಕ್ಕಾಂಬೂದಿಯ ಗಿರಿ ನೋಡಿಕೊಂಡು ಬರಲು ಹೋಗಿದ್ದರೆ. ಸುಮಾರು 3 ಗಂಟೆಗೆ ಮನೆಗೆ ವಾಪಸ್ ಬಂದಿದ್ದರು,
ನಂತರ ಶಭಿನಾಬಾನು ಅವರು ವೈದ್ಯರ ಸಲಹೆಯಂತೆ ಆರೋಗ್ಯದ ದೃಷ್ಠಿಯಿಂದ ಮಾತ್ರೆಗಳನ್ನು ನುಂಗಿ ಮಲಗಿದ್ದಾರೆ. ನಂತರ ನಸ್ರೀನ್ ಊರಿಗೆ ಹೋಗುತ್ತೇನೆ ಎಂದು ಹೇಳಿದ್ದವಳು ಹೋಗದೇ ಶಬೀನಾ ಬಾನು ಇವರ ಮನೆಯಲ್ಲೇ ಉಳಿದುಕೊಂಡಿದ್ದಳು. ಈ ವೇಳೆ ಫಯಾಜ್ ಎಂಬುವವನು ಶಭೀನಾ ಬಾನು ಅವರ ಮನೆಗೆ ಬಂದಿದ್ದ, ಮನೆಯಲ್ಲಿದ್ದ ಸಮಯದಲ್ಲಿ ಶಭೀನಾಬಾನು ಗಂಡನಾದ ಜಮೀಲ್ ಅಹಮದ್ ಮನೆಗೆ ಬಂದಾಗ ಫಯಾಜ್ ಮತ್ತು ನಸ್ರೀನ್ ತನ್ನ ಮನೆಯಲ್ಲಿ ಇದ್ದಿದ್ದನ್ನು ನೋಡಿದ್ದಾನೆ. ಜಮೀಲ್ ಅಹಮ್ಮದ್ ಅಲಿಯಾಸ್ ಶಮೀರನು ನಸ್ರೀನ್ ಮತ್ತು ಫಯಾಜ್ ಮೇಲೆ ಕೋಪಗೊಂಡು ತಾವರೆಕೆರೆಯ ಜಾಮೀಯ ಮಸೀದಿಗೆ ಹೋಗಿ ಅರ್ಜಿಯನ್ನು ಕೊಟ್ಟು ಬಂದಿದ್ದ.
ನಂತರ 9ರಂದು ಮಧ್ಯಾಹ್ನ 2.30 ರ ಸಮಯದಲ್ಲಿ ತಾವರೆಕೆರೆ ಗ್ರಾಮದ ಜಾಮೀಯ ಮಸೀದಿಯ ಮುಂಬಾಗದ ಶಭೀನಾ ಬಾನು ಮತ್ತು ಅವರ ಸಂಬಂಧಿಯಾದ ನಸ್ರೀನ್ ಹಾಗೂ ಫಯಾಜ್ ನನ್ನು ಮಸೀದಿಗೆ ಕರೆಸಿಕೊಳ್ಳಲಾಗಿತ್ತು. ಈ ವೇಳೆ ಮಸೀದಿಯ ಮುಂಭಾಗದಲ್ಲಿ ಮೊಹಮದ್ ನಯಾಜ್, ಮೊಹಮದ್ ಗೌಸ್‌ಪೀರ್, ಚಾಂದ್‌ಭಾಷಾ, ಇನಾಯತ್ ಉಲ್ಲಾ, ದಸ್ತಗಿರ್, ರಸೂಲ್ ಟಿಆರ್ ಹಾಗೂ ಇತರರು ಸೇರಿಕೊಂಡು ಶಭಿನಾ ಬಾನು ಅವರನ್ನು ಸಾರ್ವಜನಿಕವಾಗಿ ಅಮಾನುಷವಾಗಿ
ಥಳಿಸಿದ್ದರು. ಕೊಲೆ ಮಾಡುವ ಉದ್ದೇಶದಿಂದ ಕಣ್ಣಿಗೆ ಪೈಪು, ಕೋಲುಗಳಿಂದ ಹೊಡೆದು ಕಲ್ಲು ಎತ್ತಿ ಹಾಕಲು ಹೋಗಿ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ವಿಡಿಯೋ ಸಂಬಂಧ ಪಿರ್ಯಾದಿ ಸಂತ್ರಸ್ಥೆ ಶಭೀನಾ ಬಾನು ಏಪ್ರಿಲ್ 14ರಂದು ನೀಡಿದ ದೂರಿನ ಮೇರೆಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಠಾಣಾ ಗುನ್ನೆ ನಂ-202/2025 ಕಲಂ- 109(1), 189(2), 190(2), 191(3), 115(2), 118(1), 76, 352, 351(2) ಜೊತೆ 190 ಬಿಎನ್‌ಎಸ್ ರೀತ್ಯಾ ಪ್ರಕರಣವು ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು.
ಈ ಪ್ರಕರಣದ ಆರೋಪಿತರ ಪತ್ತೆ ಕಾರ್ಯಕ್ಕೆ ದಾವಣಗೆರೆ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಹಾಗೂ ಹೆಚ್ಚುವರಿ ಅಧೀಕ್ಷಕರಾದ ಸಂತೋಷ್ ವಿಜಯ್ ಕುಮಾರ್ ಹಾಗೂ ಮಂಜುನಾಥ ಮತ್ತು ಚನ್ನಗಿರಿ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್ ಅವರ ಮಾರ್ಗದರ್ಶನಲ್ಲಿ ಚನ್ನಗಿರಿ ಪೊಲೀಸ್ ನಿರೀಕ್ಷಕ ರವೀಶ್ ನೇತೃತ್ವದಲ್ಲಿ ಚನ್ನಗಿರಿ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡವನ್ನು ರಚನೆ ಮಾಡಲಾಗಿತ್ತು. ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈವರೆಗಿನ ತನಿಖೆಯಿಂದ ಆರೋಪಿತರು ಮಹಿಳೆ ಮೇಲೆ ಅಮಾನವೀಯ ಕೃತ್ಯ ಎಸಗಿರುವುದು ಕಂಡು ಬಂದಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.