SUDDIKSHANA KANNADA NEWS/ DAVANAGERE/ DATE:25-03-2025
ಔರೈಯಾ: ವಿವಾಹವಾದ ಎರಡು ವಾರಗಳ ನಂತರ, 22 ವರ್ಷದ ಮಹಿಳೆಯೊಬ್ಬರು ತನ್ನ ಪ್ರಿಯಕರನೊಂದಿಗೆ ಸೇರಿ ತನ್ನ ಗಂಡನನ್ನು ಕೊಲ್ಲಲು ಸುಫಾರಿ ಕೊಟ್ಟ ಘಟನೆ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಕಾರ, ಇಬ್ಬರು ಆರೋಪಿಗಳಾದ ಉತ್ತರ ಪ್ರದೇಶದ ಪ್ರಗತಿ ಯಾದವ್ ಮತ್ತು ಅನುರಾಗ್ ಯಾದವ್ ಬಂಧಿತ ಆರೋಪಿಗಳು. ಇಬ್ಬರು ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು, ದೈಹಿಕ ಸಂಬಂಧವನ್ನೂ ಹೊಂದಿದ್ದರು. ಆದರೆ, ಅವರ ಪೋಷಕರು ಅವರ ಸಂಬಂಧ ಒಪ್ಪಲಿಲ್ಲ. ಮಾರ್ಚ್ 5 ರಂದು ಪ್ರಗತಿಯನ್ನು ದಿಲೀಪ್ ಜೊತೆ ಬಲವಂತವಾಗಿ ಮದುವೆ ಮಾಡಿದರು.
ಮಾರ್ಚ್ 19 ರಂದು, ದಿಲೀಪ್ ಹೊಲದಲ್ಲಿ ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡು ಬಿದ್ದಿದ್ದ. ಚಿಕಿತ್ಸೆಗಾಗಿ ಬಿಧುನಾದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದಾಗ್ಯೂ, ಅವರ ಸ್ಥಿತಿ ಹದಗೆಟ್ಟ ಕಾರಣ, ಸೈಫೈ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಮಧ್ಯಪ್ರದೇಶದ ಗ್ವಾಲಿಯರ್ಗೆ ಸ್ಥಳಾಂತರಿಸಲಾಯಿತು. ನಂತರ 25 ವರ್ಷದ ದಿಲೀಪ್ ನನ್ನು ಮಾರ್ಚ್ 20 ರಂದು ಔರೈಯಾದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಬಳಿಕ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಈ ಸಂಬಂಧ ಮೃತನ ಸಹೋದರ ಸಹಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನಿಖೆಯ ನಂತರ, ದಿಲೀಪ್ ಪತ್ನಿ ಮತ್ತು ಆಕೆಯ ಪ್ರೇಮಿ ಮದುವೆಯ ನಂತರ ಭೇಟಿಯಾಗಲು ಸಾಧ್ಯವಾಗದ ಕಾರಣ, ಅವರು ಪತಿಯನ್ನು ಕೊಲ್ಲಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ನಂತರ ಇಬ್ಬರೂ ದಿಲೀಪ್ನನ್ನು ಕೊಲೆ ಮಾಡಲು ರಾಮಾಜಿ ಚೌಧರಿ ಎಂಬ ಸುಫಾರಿ ಕಿಲ್ಲರ್ ಗೆ ಹೇಳಿದ್ದಾರೆ. ಆತನಿಗೆ 2 ಲಕ್ಷ ರೂ. ಗಳನ್ನು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ರಾಮಾಜಿ ಮತ್ತು ಇತರ ಕೆಲವರು ದಿಲೀಪ್ ಅವರನ್ನು ಬೈಕ್ನಲ್ಲಿ ಹೊಲಕ್ಕೆ ಕರೆದುಕೊಂಡು ಹೋಗಿದ್ದಾರೆ. ಸ್ಥಳಕ್ಕೆ ತಲುಪಿದ ಕೂಡಲೇ ಆತನನ್ನು ಥಳಿಸಿದ್ದಾರೆ. ಬಳಿಕ ಗುಂಡು ಹಾರಿಸಿದ್ದಾರೆ. ರಕ್ತಸಿಕ್ತವಾಗಿದ್ದ ದಿಲೀಪ್ ನನ್ನು ಬಿಟ್ಟು ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಮೂವರು ಆರೋಪಿಗಳನ್ನು ಗುರುತಿಸಲಾಗಿದ್ದು, ಬಂಧಿಸಲಾಗಿದೆ. ಆರೋಪಿಗಳಿಂದ ಎರಡು ಪಿಸ್ತೂಲ್ಗಳು, ನಾಲ್ಕು ಲೈವ್ ಕಾರ್ಟ್ರಿಡ್ಜ್ಗಳು, ಒಂದು ಬೈಕ್, ಎರಡು ಮೊಬೈಲ್ ಫೋನ್ಗಳು, ಒಂದು ಪರ್ಸ್, ಆಧಾರ್ ಕಾರ್ಡ್ ಮತ್ತು 3,000 ರೂ.ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಪರಾಧದಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ.