SUDDIKSHANA KANNADA NEWS/ DAVANAGERE/ DATE:20-08-2024
ದಾವಣಗೆರೆ: ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ತರಳಬಾಳು ಬೃಹನ್ಮಠದ ವಿರುದ್ಧ ಸುಳ್ಳು ಆರೋಪ, ವದಂತಿ ಹಬ್ಬಿಸುವವರು ಹಾಗೂ ಆರೋಪ ಮಾಡುವ ಬಂಡವಾಳಶಾಹಿಗಳ ವಿರುದ್ಧ ತಾಲೂಕಿನ ಹೆಮ್ಮನಬೇತೂರು ಗ್ರಾಮದ ಸದ್ಭಕ್ತರು ತೊಡೆತಟ್ಟಿದ್ದಾರೆ. ಮಾತ್ರವಲ್ಲ, ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರೇ ಪೀಠಾಧಿಪತಿಗಳಾಗಿ ಮುಂದುವರಿಯಬೇಕು ಎಂದು ಒತ್ತಾಯಿಸಿ ರಕ್ತದಲ್ಲಿ ಸಹಿ ಚಳವಳಿ ನಡೆಸುವ ಮೂಲಕ ಮಠದ ವಿರೋಧಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ತಾಲೂಕಿನ ಹೆಮ್ಮನಬೇತೂರು ಗ್ರಾಮದ ಮಠದ ಸದ್ಭಕ್ತರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರೇ ಪೀಠದಲ್ಲಿ ಮುಂದುವರಿಯಬೇಕೆಂದು ಒಮ್ಮತದಿಂದ ನಿರ್ಣಯ ತೆಗೆದುಕೊಂಡು ರಕ್ತದಲ್ಲಿ ಸಹಿ ಮಾಡುವ ಮೂಲಕ ಮಠಕ್ಕೆ ಪತ್ರ ಕಳುಹಿಸಿಕೊಟ್ಟಿದ್ದಾರೆ.
ಯಾರ ಒತ್ತಡಕ್ಕೂ ಮಣಿಯದೇ ಸ್ವಯಂಪ್ರೇರಿತರಾಗಿ ನಾವೆಲ್ಲರೂ ಸಭೆ ನಡೆಸಿ ನಿರ್ಧಾರಕ್ಕೆ ಬಂದಿದ್ದೇವೆ. ಶ್ರೀಗಳ ವಿರುದ್ಧ ನಡೆಸುತ್ತಿರುವ ಪಿತೂರಿ ವಿರುದ್ದ ಹೋರಾಟಕ್ಕೆ ಸಿದ್ಧರಿದ್ದೇವೆ. ಸಮಾಜದಲ್ಲಿ ವಿನಾಕಾರಣ ಸುಳ್ಳು ಹೇಳುತ್ತಾ ಮಠದ ಹೆಸರು ಕೆಡಿಸಲು ಯತ್ನಿಸುತ್ತಿರುವವರು ಸುಮ್ಮನಿದ್ದರೆ ಒಳಿತು. ಇಲ್ಲದಿದ್ದರೆ ನಾವೂ ತಿರುಗೇಟು ನೀಡುವ ಕಾಲ ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು.
ಇಂದು ಹಳ್ಳಿ ಹಳ್ಳಿಗಳಲ್ಲಿ ಎಲ್ಲಾ ಜನಸಾಮಾನ್ಯರು, ಪ್ರಜ್ಞಾವಂತ ಭಕ್ತರು ಪೂಜ್ಯರ ಮುಂದಾಳತ್ವದಲ್ಲಿ ಬಲಿಷ್ಠ ಸಮ ಸಮಾಜದ ಬೇಡಿಕೆಯನ್ನು ಇಟ್ಟು, ಯಾವ ಅಪಪ್ರಚಾರಕ್ಕೆ ಬಗ್ಗದೇ ಪರಮಪೂಜ್ಯರು ಆಶೀರ್ವಾದಪೂರ್ವಕ ಮಾರ್ಗದರ್ಶನ ನೀಡುತ್ತಿದ್ದಾರೆ. ಇದರ ವಿರುದ್ಧ ಪಿತೂರಿ ನಡೆಸುವವರ ಬಗ್ಗೆ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ. ಇಷ್ಟು ದಿನ ಇಲ್ಲದ ಗೊಂದಲ, ಸುಳ್ಳು ಆರೋಪ, ಪಿತೂರಿ ಈಗ ಹೆಚ್ಚಾಗಿ ನಡೆಯುತ್ತಿದೆ. ನಾವೆಲ್ಲರೂ ಶ್ರೀಗಳ ಪರ ನಿಲ್ಲುವ ಮೂಲಕ ಸರಿಯಾದ ಉತ್ತರ ನೀಡೋಣ ಎಂದು ಗ್ರಾಮಸ್ಥರು ತಿಳಿಸಿದರು.
ಗ್ರಾಮದ ದೇವಾಲಯದಲ್ಲಿ ಗ್ರಾಮದ ಮುಖಂಡರು, ಭಕ್ತರೆಲ್ಲರೂ ಸೇರಿ ಶ್ರೀ ತರಳಬಾಳು ಬೃಹನ್ಮಠದ ಮೇಲೆ ಸುಳ್ಳು ಸುದ್ದಿ ಪಿತೂರಿ ಆರೋಪ ಮಾಡುವ ಬಂಡವಾಳಶಾಹಿಗಳ ವಿರುದ್ಧ ತೊಡೆ ತಟ್ಟಿ ನಿಲ್ಲೋಣ. ಜಗದ್ಗುರುಗಳವರ ದಿವ್ಯ ನೇತೃತ್ವದಲ್ಲಿ ಸಮಾಜ ಮುಂದುವರೆಯಲೆಂಬ ಆಶಯದೊಂದಿಗೆ ರಕ್ತದಲ್ಲಿ ಸಹಿ ಮಾಡಿ ನಿರ್ಣಯ ಕೈಗೊಂಡಿದ್ದೇವೆ. ಎಲ್ಲರೂ ಸಮ್ಮತಿಸಿ, ಒಮ್ಮತದಿಂದ ತೀರ್ಮಾನಿಸಿದ್ದೇವೆ ಎಂದು ಹೇಳಿದರು.
ನಿಜಕ್ಕೂ ಹೆಮ್ಮೆನ ತೂರಿನ ಪವಿತ್ರ ದೇವಾಲಯದ ನಿರ್ಣಯವು, ರೆಸಾರ್ಟ್ ಪಟಲಾಂನ ಬಂಡವಾಳ ಶಾಹಿಗಳ ವಿರುದ್ಧವಾಗಿರುತ್ತದೆ. ನಾವೆಲ್ಲರೂ ಮಠದ ನಿಷ್ಠಾವಂತ ಭಕ್ತರು. ಹೊಟೇಲ್, ರೆಸಾರ್ಟ್ ನಲ್ಲಿ ಸಭೆ ನಡೆಸುವುದಕ್ಕೂ ದೇವಾಲಯದಲ್ಲಿ ನಡೆಯುವ ಸಭೆಗೂ ಎಷ್ಟು ವ್ಯತ್ಯಾಸ ಎಂಬುದು ಗೊತ್ತಾಗಲಿ ಎಂದು ತಿರುಗೇಟು ನೀಡಿದರು.
ಸಿರಿಗೆರೆ ಮಠವು ಬೇರೆ ಮಠಗಳಂತೆ ಆಗಬಾರದು. ರಕ್ತದಲ್ಲಿ ಸಹಿ ಮಾಡಿ ಸ್ವಾಮೀಜಿಗಳು ಕೊನೆ ಉಸಿರು ಇರುವವರೆಗೂ ಮುಂದುವರಿಯಬೇಕು. ಹೆಮ್ಮಬೇತೂರು ಗ್ರಾಮ ಮಾತ್ರವಲ್ಲ, ಸುತ್ತಮುತ್ತಲಿನ ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿದ ಆಧುನಿಕ ಭಗೀರಥರು. ಎಷ್ಟೋ ಹಳ್ಳಿಗಳಲ್ಲಿ ಇಂದಿಗೂ ನೀರಾವರಿ ಸೌಲಭ್ಯ ಕಂಡಿದೆ ಅದು ಸಿರಿಗೆರೆ ಶ್ರೀಗಳಿಂದ ಆಗಿರುವ ಕಾರ್ಯದಿಂದ ಮಾತ್ರ. ಹಾಗಾಗಿ, ಶ್ರೀಗಳ ಬದಲಾವಣೆ ಮಾಡಬಾರದು ಎಂಬ ನಿರ್ಣಯ ತೆಗೆದುಕೊಂಡು ಶ್ರೀಗಳ ವಿರುದ್ಧ ಇರುವವರ ಷಡ್ಯಂತ್ರಕ್ಕೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಗುಡುಗಿದರು.
ಪರಮಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಕರಣಧಾರತ್ವದಲ್ಲಿ ಕಾರ್ಯಗತಗೊಂಡಿರುವ 20 ಕ್ಕೂ ಹೆಚ್ಚು ಏತನೀರಾವರಿ ಯೋಜನೆಗಳ ಅಡಿಯಲ್ಲಿ ಸಾವಿರಾರು ಕೆರೆಗಳಿಗೆ ನೀರು ತುಂಬಿಸುವ ಸುಕಾರ್ಯ ಮಾಡಿದ್ದಾರೆ. ಸಮಾಜಮುಖಿ ನಿಸ್ವಾರ್ಥ ಮುಂದಾಳತ್ವ ಎಷ್ಟು ಅವಶ್ಯಕ, ಅದರಲ್ಲೂ ಸರಕಾರ ಕೈಗೊಳ್ಳುವ ಜನಪರ ಯೋಜನೆಗಳು ಪರಿಣಾಮಕಾರಿ ಅನುಷ್ಠಾನ ವಿಚಾರದಲ್ಲಿ ಪರಮಪೂಜ್ಯರು ಮತ್ತು ಶ್ರೀ ಮಠದ ಕಾರ್ಯವೈಖರಿ ಒಂದು ಜಲ್ವಂತ ಉದಾಹರಣೆ ಎಂದು ಹೇಳಿದರು.
ಸಭೆಯಲ್ಲಿ ಎಸ್. ಆರ್. ಪ್ರಕಾಶ್, ನಾಗರಾಜಪ್ಪ, ಎಸ್. ಎನ್. ಕಲ್ಲೇಶಪ್ಪ, ಎನ್. ಎಂ. ಪ್ರಸನ್ನ, ಎಸ್. ಬಸವರಾಜ್, ಬಿ. ಎಸ್. ಸಚಿನ್, ಪಂಪಣ್ಣ, ಸಿ. ಎಸ್. ಪ್ರಕಾಶ, ಹೆಚ್. ಆರ್. ಶಿವಕುಮಾರ, ಇ. ರಮೇಶ, ಕರಿಬಸಣ್ಣ, ಎಸ್. ಎಸ್. ಸೋಮಶೇಖರ್, ಯು. ಆರ್. ಎಸ್. ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.