SUDDIKSHANA KANNADA NEWS/ DAVANAGERE/ DATE:17-11-2024
ದಾವಣಗೆರೆ: ಲೋಕಸಭೆ ಚುನಾವಣೆಯ ವೇಳೆ ನನ್ನ ವಿರುದ್ಧ ಅಪಪ್ರಚಾರ, ವದಂತಿ, ಸುಳ್ಳು ಸುದ್ದಿಗಳನ್ನೇ ಸೃಷ್ಟಿಸಿದರು. ಆದರೂ ನಾನು ಇಟ್ಟ ಹೆಜ್ಜೆ ಹಿಂದಕ್ಕೆ ಇಡಲಿಲ್ಲ. ದಾವಣಗೆರೆಯಲ್ಲಿ ಪಾದಯಾತ್ರೆ ನಡೆಸಿದಾಗ ಹೆಚ್ಚು ದಿನಇರಲ್ಲ, ಇಲ್ಲಿಂದ ಹೋಗುತ್ತೇನೆಂದು ಭಾವಿಸಿದವರು, ಕುಹುಕವಾಡಿದವರೇ ಹೆಚ್ಚು. ಹೊಂದಾಣಿಕೆ ಮಾಡಿಕೊಳ್ಳುವ ವ್ಯಕ್ತಿ ನಾನಲ್ಲ ಎಂದು ಸ್ವಾಭಿಮಾನಿ ಬಳಗದ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ತಿಳಿಸಿದರು.
ಎಸ್. ಎಸ್. ಬಡಾವಣೆಯ ಎ. ಬ್ಲಾಕ್ ನಲ್ಲಿ ಏರ್ಪಡಿಸಿದ್ದ ಸ್ವಾಭಿಮಾನಿ ಬಳಗದ ಉದ್ಘಾಟನೆ, ವೆಬ್ ಸೈಟ್ ಲೋಕಾರ್ಪಣೆ, ಸಾಧಕರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲಕ್ಷಾಂತರ ಮಂದಿ ಹತ್ತು ತಿಂಗಳಲ್ಲಿ ಬಂದರು. ಚುನಾವಣೆ ಹತ್ತಿರ ಬರುತ್ತಿದ್ದಂತೆ ಯಾವ್ಯಾವುದೋ ಕಾರಣಕ್ಕೆ ಹಿಂದೆ ಸರಿದರು. ಸ್ವಾಭಿಮಾನಿಗಳು, ಪ್ರಾಮಾಣಿಕತೆ ಇದ್ದವರು ಜೊತೆಯಲ್ಲೇ ಉಳಿದರು. 42097 ಮತಗಳು ಬಂದವು. ನಿರೀಕ್ಷೆಗೆ ತಕ್ಕಂತೆ ಮತಗಳು ಬಾರದಿರುವುದು ನನಗಷ್ಟೇ ಅಲ್ಲ, ಜಿಲ್ಲೆಯ ಜನರಿಗೂ ಬೇಸರ ತರಿಸಿತು ಎಂದು ಹೇಳಿದರು.
ಹೋರಾಡೋಣ, ಗೆಲ್ಲೋಣ:
ಯಾವುದೇ ರಾಜಕೀಯ ಹಿನ್ನೆಲೆಯಿಂದ ಬಂದ ನಾನು ಜಿಲ್ಲೆಯಾದ್ಯಂತ ಪಾದಯಾತ್ರೆ ನಡೆಸಿದೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನಿರ್ಧರಿಸಿದ್ದು ರಿಸ್ಕ್ ಎಂಬುದು ಆಮೇಲೆ ಗೊತ್ತಾಯ್ತು. ಎಷ್ಟೇ ಒತ್ತಡ ಬಂದರೂ ಮೆಟ್ಟಿ ನಿಂತೆ. ಹೋರಾಡಿದೆ. ಇಡೀ ರಾಜ್ಯದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು ತೆಗೆದುಕೊಂಡ ಮತಗಳ ಪೈಕಿ ಅತಿ ಹೆಚ್ಚು ಮತಗಳನ್ನು ಪಡೆದೆ. ಇದು ಕೇವಲ ಎಂಟು ತಿಂಗಳ ಕಾಲ ಸುತ್ತಾಡಿದೆ. ತುಂಬಾನೇ ನಿರೀಕ್ಷೆ ಇಟ್ಟುಕೊಂಡಿದ್ದ ಜನರ ಮನಸ್ಸಿಗೂ ಲೋಕಸಭೆ ಫಲಿತಾಂಶ ಬೇಸರ ತರಿಸಿತು. ಹಳ್ಳಿ ಹಳ್ಳಿ ಸುತ್ತಾಡಿ ಪ್ರಜಾಪ್ರಭುತ್ವದಲ್ಲಿ ಬದಲಾವಣೆ ತಂದು ತೋರಿಸಬಹುದು ಎಂಬುದನ್ನು ಸಾಬೀತುಪಡಿಸಬಹದು ಎಂಬುದಕ್ಕೆ ನನ್ನ ಹೋರಾಟವೇ ಸಾಕ್ಷಿ. ಇದು ಖುಷಿಯ ವಿಚಾರ ಎಂದು ವಿನಯ್ ಕುಮಾರ್ ಹೇಳಿದರು.
ನಿರಾಸೆ ಆಯ್ತು. ನನ್ನ ನಿರೀಕ್ಷೆಗೆ ತಕ್ಕಂತೆ ಮತಗಳು ಬರಲಿಲ್ಲ. ಸುಮ್ಮನೆ ಕೂರಬಹುದಿತ್ತು. ನಿರಾಶನಾಗಿ ಇರಬಹುದಿತ್ತು. ಜನರಿಗೆ ದುಡ್ಡು, ಆಸೆ ಆಮೀಷವೊಡ್ಡಿದರೆ ಮಾತ್ರ ಬರುತ್ತಾರೆ ಎಂದುಕೊಳ್ಳಬಹುದಿತ್ತು. ಆದ್ರೆ, ನಾನು ಈ ರೀತಿ ಮಾಡಲಿಲ್ಲ. ಫಲಿತಾಂಶಕ್ಕೂ ಮುನ್ನ ಹಿತೈಷಿಗಳು, ಅಭಿಮಾನಿಗಳು, ಸ್ನೇಹಿತರ ಕಾರ್ಯಕ್ರಮ ಮಾಡಿದೆ. ನಾವು ಅಂದುಕೊಂಡದ್ದಕ್ಕಿಂತ ದುಪ್ಪಟ್ಟು ಜನರು ಬಂದಿದ್ದರು. ಅವರು ತೋರಿದ ಪ್ರೀತಿ, ವಿಶ್ವಾಸ, ಆತ್ಮವಿಶ್ವಾಶ ತುಂಬಿದ್ದು ಗಟ್ಟಿ ನಿರ್ಧಾರಕ್ಕೆ ಬರುವಂತೆ ಮಾಡಿತು ಎಂದು ನೆನಪು ಮಾಡಿಕೊಂಡರು.
ಪ್ರಾಮಾಣಿಕರ ಬೆಂಬಲಿಸಿ:
ಪ್ರಾಮಾಣಿಕ, ಒಳ್ಳೆಯ ಉದ್ದೇಶವಿಟ್ಟುಕೊಂಡು ಹೋರಾಡುವವರಿಗೆ ಪ್ರತಿಯೊಬ್ಬರೂ ಬೆಂಬಲ ನೀಡಬೇಕು ಎಂಬುದು ನನ್ನ ಅಪೇಕ್ಷೆ. ಸ್ವಾಭಿಮಾನಿ ಬಳಗ ಹುಟ್ಟಿದ್ದೇ ಆಕಸ್ಮಿಕ. ನಾನು ದಾವಣಗೆರೆಗೆ ಬಂದಾಗ ಕುಟುಂಬಸ್ಥರು, ನಾಲ್ಕೈದು ಮಂದಿ ಬಿಟ್ಟರೆ ಬೇರೆಯವರ ಪರಿಚಯ ಇರಲಿಲ್ಲ. ಹಳ್ಳಿ ಜನರ ಜೀವನಾಡಿ ಅರಿತುಕೊಳ್ಳಲು ಹೆಚ್ಚು ಸಮಯ ಹಿಡಿಯಲಿಲ್ಲ ಎಂದು ತಿಳಿಸಿದರು.
ಇನ್ ಸೈಟ್ಸ್ ಸಂಸ್ಥೆ ಹುಟ್ಟುಹಾಕುವಾಗ ಎದುರಿಸಿದ್ದ ಸಮಸ್ಯೆಗಳು ಲೋಕಸಭೆ ಚುನಾವಣೆ ವೇಳೆಯೂ ಬಂತು. ಆದ್ರೆ, ಜನರಿಗೆ ಕೊಟ್ಟ ಮಾತು ಉಳಿಸಿಕೊಂಡೆ. ಕರ್ನಾಟಕ ಅರ್ಧ ಜಿಲ್ಲೆಗಳಲ್ಲಿ ನನ್ನ ವಿದ್ಯಾರ್ಥಿಗಳು ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳಿದ್ದಾರೆ. ಕೋಚಿಂಗ್ ದುಡ್ಡು ಮಾಡಿಕೊಂಡು ರಾಷ್ಟ್ರ, ವಿದೇಶ ಸುತ್ತಾಡಿಕೊಂಡು ಖುಷಿಖುಷಿಯಾಗಿ ಲೈಫ್ ಎಂಜಾಯ್ ಮಾಡುತ್ತಾ ಇರಬಹುದಿತ್ತು. ಆದ್ರೆ, ನನಗೆ ಜನಸೇವೆ ನನ್ನಲ್ಲಿ ತುಡಿತ ಹೆಚ್ಚಾಗುವಂತೆ ಮಾಡಿತು ಎಂದು
ವಿನಯ್ ಕುಮಾರ್ ಹೇಳಿದರು.
ಉಜ್ವಲ ಅವಕಾಶಗಳಿಂದ ವಂಚಿತ:
ಪುಸ್ತಕಗಳ ಸಾಂಗತ್ಯದೊಂದಿಗೆ ಓದಿ ಜ್ಞಾನದ ಆಧಾರದ ಮೇಲೆ ಬೆಳೆದು ಬಂದೆ. ಶೈಕ್ಷಣಿಕ ಅಸಮಾನತೆ ಹೆಚ್ಚಿದೆ. ನವೋದಯ ಶಾಲೆಯಲ್ಲಿ ಓದದಿದ್ದರೆ ನಾನು ದನ ಕಾಯುತ್ತಾ ಇರಬೇಕು. ನನಗೆ ಸಿಕ್ಕ ಶಿಕ್ಷಣ ನಿಮಗೂ ಸಿಕ್ಕಿದ್ದರೆ ಎಂಜಿನಿಯರ್, ಡಾಕ್ಟರ್, ಐಎಎಸ್, ಐಪಿಎಸ್ ನಂಥ ಉನ್ನತ ಹುದ್ದೆಗಳಲ್ಲಿ ಇಲ್ಲವೇ ವಿದೇಶಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಹುದಿತ್ತು. ಆದ್ರೆ, ಇಂದಿನ ದಿನಮಾನಗಳಲ್ಲಿ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿ ಸಿಗುತ್ತಿಲ್ಲ. ಎಷ್ಟೋ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಸಿಗದ ಕಾರಣ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉಜ್ವಲ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ರಾಜು ಮೌರ್ಯ ಪ್ರಾಸ್ತಾವಿಕವಾಗಿ ಸ್ವಾಭಿಮಾನಿ ಬಳಗದ ಧ್ಯೇಯೋದ್ದೇಶಗಳ ಕುರಿತಂತೆ ಮಾಹಿತಿ ನೀಡಿದರು. ಟಿವಿ9 ವರದಿಗಾರ ಬಸವರಾಜ್ ದೊಡ್ಮನಿ ವೆಬ್ ಸೈಟ್ ಲೋಕಾರ್ಪಣೆಗೊಳಿಸಿ ಮಾತನಾಡಿದರು. ವೇದಿಕೆಯಲ್ಲಿ ತಂಜೀಮ್ ಉಲೇಮಾ ಅಹಲೇ ಸುನ್ನತ್ ಅಧ್ಯಕ್ಷ ಮೌಲಾನಾ ಖಾಜಿ ಮಹಮ್ಮದ್ ಇಲಿಯಾಜ್ ಖಾದ್ರಿ, ಬಾಸ್ಕೋ ಡಾನ್ ನ ಫಾದರ್ ರೆಜಿ ಜೇಕಬ್ ಇದ್ದರು. ಇದೇ ವೇಳೆ ಮಹರ್ಷಿ ವಾಲ್ಮೀಕಿ, ವೀರವನಿತೆ ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ಭಕ್ತಕನಕದಾಸರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.