SUDDIKSHANA KANNADA NEWS/ DAVANAGERE/ DATE:31-10-2024
ಮಧ್ಯ ಕರ್ನಾಟಕದ ಹೆಬ್ಬಗಿಲು ದಾವಣಗೆರೆ: ರಾಜಧಾನಿಯಾಗಬೇಕಿದ್ದ ದಾವಣಗೆರೆ ಯಾಕೆ ಆಗಲಿಲ್ಲ ಎಂಬ ಕುತೂಹಲ ಪ್ರತಿಯೊಬ್ಬರಲ್ಲಿಯೂ ಇದೆ. ಹಾಗಾಗಿ, ಕರ್ನಾಟಕಕ್ಕೆ ರಾಜಧಾನಿ ಆಗಬೇಕಿದ್ದ ದಾವಣಗೆರೆಗೆ ತಪ್ಪಿದ್ದು ಹೇಗೆ ಎಂಬ ಕುರಿತ ಸ್ಪೆಷಲ್ ರಿಪೋರ್ಟ್.
ರಾಜಕೀಯ ಏಕೀಕರಣ ಸಾಧಿಸುವ ಉದ್ಧೇಶದಿಂದ 1917ರಲ್ಲಿ ಸಭೆಗಳು ನಡೆದವು. 1946ರಲ್ಲಿ ದಾವಣಗೆರೆಯಲ್ಲಿ ಪಾಟೀಲ್ ಪುಟ್ಟಪ್ಪ ಮತ್ತು ಎಂ. ರುದ್ರಪ್ಪನವರ ಹಿರಿತನದಲ್ಲಿ ನಡೆದ ಸಭೆಗೆ ನೇತಾಜಿ ಸುಭಾಷ್‌ಚಂದ್ರ ಬೋಸ್‌ರವರ ಅಣ್ಣ ಶರಶ್ಚಂದ್ರ ಬೋಸ್ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿದ್ದರು. 1947ರಲ್ಲಿ ಭಾರತ ಸ್ವತಂತ್ರವಾಯಿತು. ರಾಜ್ಯದಲ್ಲಿ ಕೆ.ಸಿ. ರೆಡ್ಡಿ ನೇತೃತ್ವದಲ್ಲಿ ಜವಾಬ್ದಾರಿ ಸರ್ಕಾರ ಏರ್ಪಟ್ಟಿತು. ಕೈಗೆ ಅಧಿಕಾರ ಬರುವವರಿಗೆ ಮೈಸೂರಿನ ಮುಖಂಡರಿಗೆ ಕರ್ನಾಟಕ ಏಕೀಕರಣದ ಬಗ್ಗೆ ಆಸಕ್ತಿ ಇತ್ತು.
1952ರಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂತು ಕೆಂಗಲ್ ಹನುಮಂತಯ್ಯ ರಾಜ್ಯದ ಮುಖ್ಯಮಂತ್ರಿಯದರು. ಕರ್ನಾಟಕ ರಾಜ್ಯ ಆಗುವುದಕ್ಕೆ ಕೆಂಗಲ್ ಸಂಪುಟದಲ್ಲಿಯೇ ವಿರೋಧ ಇತ್ತು. ಮೈಸೂರು ಕಡೆಯವರು ಒಪ್ಪಲಿಲ್ಲ. ಕಡಿದಾಳ ಮಂಜಪ್ಪನವರು ‘ಎರಡು’ ಕರ್ನಾಟಕ ಆಗಬೇಕೆಂದರು. ಕೆಲವರು ಸರ್ಕಾರದ ಹೊರಗೆ ಇದ್ದು ಏಕೀಕರಣ ಆಗುವುದಕ್ಕೆ ವಿರೋಧಿಸಿದರು. ‘ಕೆಂಗಲ್’ ಸಂಪುಟ ಅವರನ್ನು ವಿರೋಧಿಸಿ ಮುಖ್ಯಮಂತ್ರಿ ಹುದ್ದೆಯಿಂದ ಇಳಿಸಿದರು. ನಂತರ ಕಡಿದಾಳು ಮಂಜಪ್ಪನವರು ಮುಖ್ಯಮಂತ್ರಿಯಾದರು.
ಫಜಲ್‌ಅಲಿ ಆಯೋಗ ರಚನೆ:
ಡಿಸೆಂಬರ್ 29 – 1953ರಲ್ಲಿ ಫಜಲ್‌ಅಲಿ ಆಯೋಗ ನೇಮಕಗೊಂಡಿತು. ಆಗ ಮುಖ್ಯಮಂತ್ರಿ ಕಡಿದಾಳ ಮಂಜಪ್ಪನವರಿದ್ದರು. ಆಯೋಗವು 104 ಸ್ಥಳ ಸಂದರ್ಶಿಸಿ, 9 ಸಾವಿರಕ್ಕೂ ಹೆಚ್ಚು ಜನರನ್ನು ಭೇಟಿ ಮಾಡಿ 21 ತಿಂಗಳು ನಿರಂತರವಾಗಿ ಶ್ರಮವಹಿಸಿ 1955 ಸೆಪ್ಟಂಬರ್ 30ರಂದು ಸರ್ಕರಕ್ಕೆ ವರದಿ ಸಲ್ಲಿಸಿತು. ಹೋರಾಟ ನಡೆದದ್ದು ಕರ್ನಾಟಕರಾಜ್ಯಕ್ಕೋಸ್ಕರ ಆದರೆ ರಾಜ್ಯದ ಹೆಸರು ‘ಮೈಸೂರು’ ಆಗಬೇಕೆಂದು ಮೈಸೂರಿನ ರಾಜಕಾರಣಿಗಳು ಆಗ್ರಹತೊಟ್ಟರು. ರಾಜಧಾನಿ ಬೆಂಗಳೂರು ಆಗಲಿ ಎಂಬ ತಿರ್ಮಾನಕ್ಕೆ ಬಂದರು.
ದಾವಣಗೆರೆ ರಾಜಧಾನಿಗೆ ಬೇಡಿಕೆ ಇತ್ತು:
ನೂತನ ರಾಜ್ಯದ ಹೆಸರು ಕರ್ನಾಟಕ ಎಂದಾದರೆ ರಾಜ್ಯದ ರಾಜಧಾನಿ ‘ದಾವಣಗೆರೆ’ ಆಗಬೇಕೆಂಬ ಕೂಗು ಪ್ರಬಲವಾಗಿತ್ತು. ಆದರೆ ನವಂಬರ್ 1 – 1956ರಂದು ‘ಮೈಸೂರು’ ಎಂದು ರಾಜ್ಯದ ನಾಮಕರಣವಾಯಿತು. ರಾಜಧಾನಿ ಬೆಂಗಳೂರು ಆಗಿ ದಾವಣಗೆರೆ ರಾಜಧಾನಿಯಾಗಬೇಕೆಂಬ ಕನಸು ಕಂಡಿದ್ದ ಹೋರಾಟಗಾರರಿಗೆ ನಿರಾಸೆಯಾಯಿತು. ಕಾಲಾನಂತರ 1972ರಲ್ಲಿ ಶಾಸಕರಾಗಿದ್ದ ಎಂ. ರುದ್ರಪ್ಪನವರ ಪ್ರಯತ್ನದಿಂದ ರಾಜ್ಯದಲ್ಲಿ ದೇವರಾಜ್ ಅರಸು ಮುಖ್ಯಮಂತ್ರಿಯಿದ್ದಾಗ ನವೆಂಬರ್ 1 – 1973ರಲ್ಲಿ ಮೈಸೂರು ರಾಜ್ಯಕ್ಕೆ ಹೊಸ ನಾಮಕರಣವಾಗಿ ‘ಕರ್ನಾಟಕರಾಜ್ಯ’ ಎಂದು ಹೆಸರಿಸಲಾಯಿತು.
ಬೆಂಗಳೂರು ರಾಜಧಾನಿಯಾಗಿಯೇ ಉಳಿಯಿತು. ಮಧ್ಯ ಕರ್ನಾಟಕ ದಾವಣಗೆರೆ ರಾಜಧಾನಿ ಆಗುವ ಪ್ರಯತ್ನಕ್ಕೆ ಹಿನ್ನಡೆ ಆಯ್ತು. ದಕ್ಷಿಣ ಕರ್ನಾಟಕದ ಜನಪ್ರತಿನಿಧಿಗಳು ಅಡ್ಡಿಮಾಡಿದರು. ಇಲ್ಲಿಯ ಜನತೆಯ ಬಿರುಸಿನ ಹೋರಾಟ ಇಲ್ಲದ್ದು ಒಂದು ಕಾರಣವಾಯ್ತು.
ಭಾಷಾವಾರು ಪ್ರಾಂತಕ್ಕೆ ಬುನಾದಿ:
ಈಸ್ಟ್ ಇಂಡಿಯಾ ಕಂಪನಿಯ ಆಡಳಿತಗಾರ ‘ಥಾಮಸ್ ಮನ್ರೋ’ ಕನ್ನಡ ಮಾತನಾಡುವ ಪ್ರದೇಶಗಳೆಲ್ಲ ಒಂದುಗೂಡಬೇಕೆನ್ನುವ ವಿಚಾರದಲ್ಲಿ ಪ್ರಥಮರು. 1858ರಲ್ಲಿ ಕಂಪನಿ ಸರ್ಕಾರ ಬ್ರಿಟೀಷ್ ಪ್ರಭುತ್ವದ ಭಾರತ ಸರಕಾರವಾಗಿ ರಚಿಸಬೇಕೆನ್ನುವ ಮಸೂದೆಯಲ್ಲಿ ‘ಜಾನ್‌ಬ್ರೆಂಟ್’ ಎಂಬುವವರು ಭಾರತದಲ್ಲಿ ಪ್ರಾಂತಗಳ ರಚನೆಗೆ
ಭಾಷೆಗಳು ತಳಹದಿಯಾಗಬೇಕೆಂದು ಸೂಚಿಸಿದ್ದರು. ನಂತರ 1917ರಲ್ಲಿ ಈ ಕುರಿತು ಸಭೆಗಳು ಆರಂಭಗೊಂಡವು.
ಕನ್ನಡ ಕೆಲಸಕ್ಕೆ ದುಡಿದ ಮಹನೀಯರು:
ಧಾರವಾಡದ ಡೆಪ್ಯೂಟಿ ಚೆನ್ನಬಸ್ಸಪ್ಪ ಎಂಬುವವರು 1856ರಲ್ಲಿ ಶಿಕ್ಷಕರ ತರಬೇತಿ ಶಾಲೆಯ ಪ್ರಿನ್ಸಿಪಾಲ್ ಆಗಿದ್ದವರು. ಪ್ರತಿ ಹಳ್ಳಿ ಹಳ್ಳಿಗೆ ಸುತ್ತಿ ಕನ್ನಡ ಶಾಲೆಗಳನ್ನು ಆರಂಭಿಸಿದ ಕೀರ್ತಿ ಇವರದು. ರಾಮಚಂದ್ರ ದೇಶಪಾಂಡೆ ಎಂಬುವವರು ಮುಂಬೈನಿಂದ ಎಂ.ಎ. ಪದವಿ ಮುಗಿಸಿ ಧಾರವಾಡಕ್ಕೆ ಬಂದಾಗ ಅವರನ್ನು ಆನೆಯ ಮೇಲೆ ಕುಳ್ಳಿರಿಸಿ ಮೆರವಣಿಗೆ ಮಾಡಲಾಯಿತು. ಜುಲೈ 20 – 1890ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಆರಂಭವಾಗಿ ಅನೇಕ ಕನ್ನಡಪರ ಕೆಲಸಗಳನ್ನು ಆರಂಭಿಸಿತು. ವರದರಾಜಹುಯಿಲ್‌ಗೋಳ್, ಡಾ. ಶ್ರೀನಿವಾಸ್ ಕೆ. ಹಾವನೂರು, ಡಾ. ಆರ್.ಸಿ. ಹಿರೇಮಠ, ಪ್ರೊ.ನಂದಿಮಠ, ರಾ.ಯ. ಧಾರವಾಡಕರ್, ಎಂ.ಎಂ. ಕಲಬುರ್ಗಿ, ಪಾಟೀಲ್ ಪುಟ್ಟಪ್ಪ, ಚಂದ್ರಶೇಖರ ಪಾಟೀಲ್, ಗಿರಡ್ಡಿ ಗೋವಿಂದರಾಜ್ ಹೀಗೆ ಅಸಂಖ್ಯ ರೀತಿಯಲ್ಲಿ ಕನ್ನಡಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ.
ಕನ್ನಡದ ಅಕ್ಷರ ದಾಸೋಹ ಸಂಸ್ಥೆಗಳು:
ಕರ್ನಾಟಕ ಸರ್ಕಾರ ನೀಡುವ ಶಿಕ್ಷಣ ವ್ಯವಸ್ಥೆಯ ಜೊತೆಗೆ ಕನ್ನಡ ನಾಡಿನಲ್ಲಿ ಅಕ್ಷರ ದಾಸೋಹ ನೀಡಿ ಕನ್ನಡಿಗರಿಗೆ ಬದುಕು ನಿರ್ಮಿಸಿಕೊಟ್ಟ ಸಂಸ್ಥೆಗಳೆಂದರೆ ತುಮಕೂರಿನ ಸಿದ್ಧಗಂಗಾಮಠ. ಮೈಸೂರು ಸುತ್ತೂರುಮಠ, ಆದಿಚುಂಚನಗಿರಿ ಸಂಸ್ಥೆ, ಧರ್ಮಸ್ಥಳದ ಶಿಕ್ಷಣ ಸಂಸ್ಥೆಗಳು, ಸಿರಿಗೆರೆಯ ಬೃಹನ್ಮಠ, ಧಾರವಾಡದ ಮುರಘಾಮಠ, ಕಲ್ಬುರ್ಗಿಯ ಶರಣಬಸವೇಶ್ವರ ಸಂಸ್ಥಾನ, ಬಾಲ್ಕಿಯ ಹಿರೇಮಠ ಸಂಸ್ಥಾನ, ಬೆಳಗಾವಿಯ ಕೆ.ಎಲ್.ಇ. ಸಂಸ್ಥೆ, ಕಲ್ಬುಗಿರ್ಯ ಹೆಚ್.ಕೆ.ಇ. ಸಂಸ್ಥೆ, ಬಿಜಾಪೂರದ ಬಿ.ಎಲ್.ಡಿ. ಸಂಸ್ಥೆ, ಚಿತ್ರದುರ್ಗದ ಮುರುಘಾಮಠ, ದಾವಣಗೆರೆಯ ಬಾಪೂಜಿ ವಿದ್ಯಾಸಂಸ್ಥೆ, ಬಾಗಲಕೋಟೆ ಬಸವೇಶ್ವರ ವಿದ್ಯಾ ಸಂಸ್ಥೆ ಹೀಗೆ ರಾಜ್ಯಾದ್ಯಂತ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಕನ್ನಡಭಾಷೆ, ಸಂಸ್ಕೃತಿ ಮತ್ತು ಅಕ್ಷರ ಜ್ಞಾನಕ್ಕೆ ತಮ್ಮದೇ ಆದ ಕೊಡುಗೆ ನೀಡಿವೆ.
ವಿಶೇಷ ಲೇಖನ: ಡಾ. ಗಂಗಾಧರಯ್ಯ ಹಿರೇಮಠ, ವಿಶ್ರಾಂತ ಪ್ರಾಧ್ಯಾಪಕರು, ದಾವಣಗೆರೆ