SUDDIKSHANA KANNADA NEWS/ DAVANAGERE/ DATE:15-01-2024
ದಾವಣಗೆರೆ: ಲೋಕಸಭೆ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿವೆ. ಹೊಸ ವರ್ಷದಲ್ಲಿ ಬಿಜೆಪಿಗೆ ನೂತನ ಸಾರಥಿ ನೇಮಕವಾಗಲಿದ್ದಾರೆ. ಇನ್ನೊಂದು ವಾರದೊಳಗೆ ಬಿಜೆಪಿ ಜಿಲ್ಲಾಧ್ಯಕ್ಷರ ಹೆಸರು ಘೋಷಣೆಯಾಗುತ್ತದೆ. ಆದ್ರೆ, ದಾವಣಗೆರೆ ಭಾರತೀಯ ಜನತಾ ಪಕ್ಷಕ್ಕೆ ಹೆಚ್ಚಾಗಿ ಕೇಳಿ ಬಂದಿದ್ದು ಹರಿಹರ ಶಾಸಕ ಬಿ. ಪಿ. ಹರೀಶ್ ಅವರ ಹೆಸರು. ಆದ್ರೆ, ಈಗ ಅವರು ಕಣದಿಂದ ಹಿಂದೆ ಸರಿದಿದ್ದಾರೆ. ತಾನು ಬಿಜೆಪಿ ಜಿಲ್ಲಾಧ್ಯಕ್ಷ ಆಗುವುದಿಲ್ಲ ಎಂಬುದನ್ನು ಸ್ವತಃ ಅವರೇ ಖಚಿತಪಡಿಸಿದ್ದಾರೆ.
ನಗರದ ಜಿಎಂಐಟಿ ವಸತಿ ಗೃಹದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ನಾನು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದು ನಿಜ. ಅಧ್ಯಕ್ಷ ಸ್ಥಾನ ನೀಡಿದರೆ ನಿಭಾಯಿಸುತ್ತೇನೆ ಎಂದು ಹೇಳಿದ್ದೆ. ಆದ್ರೆ, ಬೆಂಗಳೂರಿನಲ್ಲಿ ನಡೆದ ಬಿಜೆಪಿ ಸಭೆಯಲ್ಲಿಯೂ ಈ ವಿಷಯ ಪ್ರಸ್ತಾಪವಾಗಿತ್ತು. ಅಂತಿಮವಾಗಿ ನಾನು ಕಣದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ತಿಳಿಸಿದರು.
ಬಿಜೆಪಿ ಪಕ್ಷದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ನೀಡುತ್ತಿಲ್ಲ. ನನಗೆ ಈಗ 62 ವರ್ಷ. ಈ ಕಾರಣದಿಂದ ಜಿಲ್ಲಾಧ್ಯಕ್ಷ ಸ್ಥಾನ ನೀಡುವುದಿಲ್ಲ ಎಂದು ಪಕ್ಷದ ರಾಜ್ಯ ನಾಯಕರು ಹೇಳಿದರು. ಇದಕ್ಕೆ ನಾನು ಸಹ ಒಪ್ಪಿದೆ. ಪಕ್ಷ ಯಾವ ನಿರ್ಣಯ ತೆಗೆದುಕೊಂಡರೂ ಬದ್ದನಿದ್ದೇನೆ ಎಂದು ಹೇಳಿದರು.
ದಾವಣಗೆರೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರು ಚರ್ಚೆಯಾಗಿದ್ದು ನಿಜ. ಇದರಲ್ಲಿ ಎರಡು ಮಾತಿಲ್ಲ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಗೆಲ್ಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗಬೇಕು ಎಂಬ ಕನಸಿನೊಂದಿಗೆ ಹೋರಾಡಲಿದ್ದೇವೆ. ಪಕ್ಷದ ಅಭ್ಯರ್ಥಿ ಗೆಲ್ಲಿಸಬೇಕಿದೆ. ಯಾರೇ ಅಧ್ಯಕ್ಷರಾದರೂ ನನ್ನ ಸಂಪೂರ್ಣ ಸಹಕಾರ ಇರುತ್ತದೆ. ಇದರಲ್ಲಿ ಎರಡು ಮಾತಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಹರಿಹರ ಶಾಸಕನಿದ್ದೇನೆ. ಜಿಲ್ಲೆಯಲ್ಲಿ ಬಿಜೆಪಿಯ ನಾನೊಬ್ಬನೇ ಶಾಸಕನಿರುವುದು. ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಬೇಕು. 60 ವರ್ಷ ಮೇಲ್ಪಟ್ಟವರು ಎಂಬ ಕಾರಣಕ್ಕೆ ಮಾತ್ರ ಜಿಲ್ಲಾಧ್ಯಕ್ಷ ಸ್ಥಾನ ನೀಡುತ್ತಿಲ್ಲ. ನನಗೂ ಎಲ್ಲಾ ಅರ್ಹತೆ ಇದ್ದು, ಪಕ್ಷದ ನಿರ್ಣಯಕ್ಕೆ ತಲೆಬಾಗುತ್ತೇನೆ ಎಂದು ಹೇಳಿದರು.
ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರು ಜಿಎಂಐಟಿಯಲ್ಲಿ ಕರೆದಿದ್ದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಹರೀಶ್ ಅವರು, ಈ ವಿಚಾರ ಕುರಿತಂತೆ ಡಾ. ಜಿ. ಎಂ. ಸಿದ್ದೇಶ್ವರ ಅವರ ಜೊತೆ ಚರ್ಚೆ ನಡೆಸಿದರು. ಮಾತ್ರವಲ್ಲ, ಈ ಬಾರಿ ಯಾರೇ ಜಿಲ್ಲಾಧ್ಯಕ್ಷರಾದರೂ ಸಹಕಾರ ನೀಡುತ್ತೇವೆ. ಬಿಜೆಪಿ ಗೆಲುವಿಗೆ ಶ್ರಮಿಸುತ್ತೇನೆ ಎಂದು ಸಿದ್ದೇಶ್ವರ ಅವರಿಗೆ ತಿಳಿಸಿದರು.