SUDDIKSHANA KANNADA NEWS/ DAVANAGERE/ DATE:30-11-2024
ದಾವಣಗೆರೆ: ಬಸವಣ್ಣ ಅವರಿಗೆ ಅಪಮಾನ ಮಾಡಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯದ ಜನರ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ನಡೆಸಬೇಕಾಗಬಹುದು ಎಂದು ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯದರ್ಶಿ ಮಹಾಂತೇಶ್ ಅಂಗಡಿ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಕೆಲ ದಿನಗಳ ಹಿಂದೆ ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್ ಕನ್ನಡ ನೆಲದ ಅಸ್ಮಿತೆ ಹಾಗೂ ತನ್ನ ಸಕಲ ಜೀವಾತ್ಮರಿಗೂ ಲೇಸನ್ನು ಬಯಸಿ, ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ 12ನೇ
ಶತಮಾನದಲ್ಲಿಯೇ ನುಡಿದಂತೆ ನಡೆದ ವಿಶ್ವಗುರು ಸಾಂಸ್ಕೃತಿಕ ನಾಯಕ ಬಸವಣ್ಣನವರಿಗೆ ಅಪಮಾನಗೊಳಿಸುವ ನಿಟ್ಟಿನಲ್ಲಿ ನೀಡಿರುವ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.
ಯತ್ನಾಳ್ ಬಹಿರಂಗವಾಗಿ ತನ್ನ ಹೇಳಿಕೆಗೆ ಕ್ಷಮೆ ಕೇಳದೇ ಹೋದರೆ ನಾವು ಕಾನೂನು ಹೋರಾಟಕ್ಕೂ ಮುಂದಾಗುತ್ತೇವೆ ಎಂಬುದನ್ನು ಗಮನಕ್ಕೆ ತರುತ್ತೇವೆ ಎಂದು ಎಚ್ಚರಿಸಿದರು.
ಭಾರತದ ಕಾನೂನಿನ ಮುಂದೆ ಯಾವುದೇ ಮಠಾಧೀಶರಾಗಲಿ, ರಾಜಕಾರಣಿಗಳಾಗಲಿ, ಬಂಡವಾಳಶಾಹಿಗಳಾಗಲಿ, ಶ್ರೀಮಂತರಾಗಲಿ ದೊಡ್ಡವರಲ್ಲ. ನಮ್ಮ ಸಂವಿಧಾನ ಎಲ್ಲರಿಗೂ ಒಂದೇ ಮೌಲ್ಯ ಕಲ್ಪಿಸಿಕೊಟ್ಟಿದೆ. ಹೀಗಾಗಿ ಸಮಾಜದ ಶಾಂತಿಗೆ, ಸಂವಿಧಾನದ ಆಶಯಗಳಿಗೆ ಧಕ್ಕೆ ತರುವ ರೀತಿಯಲ್ಲಿ ಯಾರೇ ನಡೆದುಕೊಂಡರು ನಾವು ಅದನ್ನು ಸೈದ್ಧಾಂತಿಕ ನೆಲೆಯಲ್ಲಿ ಖಂಡಿಸುತ್ತೇವೆ. ಸಂವಿಧಾನಕ್ಕೆ ಅವಮಾನವಾಗುವ ನಿಟ್ಟಿನಲ್ಲಿ ಯಾರೇ ಹೇಳಿಕೆ ನೀಡಿದರೂ ದೇಶದ್ರೋಹದ ಅಡಿಯಲ್ಲಿ ಬಂಧಿಸುವ ಕಾಯ್ದೆಯನ್ನು ಜಾರಿಗೆ ತರಬೇಕು ಎಂಬುದಾಗಿ ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದು ಹೇಳಿದರು.
ಗೋಷ್ಠಿಯಲ್ಲಿ, ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಎಸ್.ಬಿ. ರುದ್ರಗೌಡ ಗೋಪನಾಳ್, ಜಾಗೃತ ಭಾರತ ವಿಚಾರ ವೇದಿಕೆ ಸಂಚಾಲಕ ಕೆ.ಎ. ಓಬಳೇಶ್, ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಕುಸುಮ ಲೋಕೇಶ್, ಉಪಾಧ್ಯಕ್ಷೆ ಉಪಾಧ್ಯಕ್ಷೆ ವಿನೋದ ಅಜಗಣ್ಣನವರ, ಹಡಪದ ಅಪ್ಪಣ್ಣ ಸಮಾಜ ಜಿಲ್ಲಾಧ್ಯಕ್ಷ ಶಶಿಧರ್ ಬಸಾಪುರ ಉಪಸ್ಥಿತರಿದ್ದರು.