SUDDIKSHANA KANNADA NEWS/DAVANAGERE/DATE:08_10_2025
ದಾವಣಗೆರೆ: ಕೆಎಸ್ ಆರ್ ಟಿಸಿಯಿಂದ ನೂತನವಾಗಿ 900 ಬಸ್ ಖರೀದಿಸಲಾಗುತ್ತಿದೆ. ಅದರಲ್ಲಿ ಜಿಲ್ಲೆಗೆ ಅವಶ್ಯವಿರುವ ಹೆಚ್ಚುವರಿ ಬಸ್ ಗಳನ್ನು ನೀಡುವಂತೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಮಾಡಿದರು.
READ ALSO THIS STORY: ದಾವಣಗೆರೆ ನೂತನ ಕೆಎಸ್ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಪಂಪಾಪತಿ ಹೆಸರು: ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಮಹತ್ವದ ಘೋಷಣೆ
ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ಜಿಲ್ಲೆ ವತಿಯಿಂದ ಏರ್ಪಡಿಸಿದ್ದ ಚನ್ನಗಿರಿಯ ಅಜ್ಜಿಹಳ್ಳಿ ಬಳಿ ನೂತನವಾಗಿ ನಿರ್ಮಾಣ ಮಾಡಿರುವ ಬಸ್ ಘಟಕ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಮಾತನಾಡಿ ನಾಲ್ಕು ಎಕರೆ ಜಮೀನಿನಲ್ಲಿ ಎಂಟು ಕೋಟಿ ರೂ ವೆಚ್ಚದಲ್ಲಿ ಚನ್ನಗಿರಿ ತಾಲೂಕು ಬಸ್ ಘಟಕ ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿ ಅತಿ ದೊಡ್ಡ ಬಸ್ ನಿಲ್ದಾಣ ವೆಂದರೆ ಬೆಂಗಳೂರು ಬಸ್ ನಿಲ್ದಾಣ, ಅದನ್ನು ಹೊರತುಪಡಿಸಿದರೆ ಎಲ್ಲಾ ಸೌಕರ್ಯ ಗಳೊಂದಿಗೆ ನಿರ್ಮಾಣ ಮಾಡಿರುವ ವಿಶಾಲವಾದ ಬಸ್ ನಿಲ್ದಾಣ ದಾವಣಗೆರೆಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಶಕ್ತಿ ಯೋಜನೆಯಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ರಾಜ್ಯದಲ್ಲಿ ಶೇ 23 ರಷ್ಟು ಉದ್ಯೋಗಾವಕಾಶ ಕಲ್ಪಿಸಿದೆ ಎಂದು ಹೇಳಿದರು.
ಶಾಸಕ ಬಸವರಾಜ ವಿ. ಶಿವಗಂಗಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಬಸ್ ಘಟಕ ನಿರ್ಮಾಣಕ್ಕೆ ನಿವೇಶನ ಸಮಸ್ಯೆ ಇತ್ತು, ಅದನ್ನು ಬಗೆ ಹರಿಸಲಾಗಿದೆ. ಹೊಸ ಬಸ್ ನಿಲ್ದಾಣಕ್ಕೆ ಎರಡು ಎಕರೆ ನಿವೇಶನ ಗುರುತಿಸಲಾಗಿದೆ. ಇನ್ನು ಎರಡು ತಿಂಗಳಲ್ಲಿ ಬಸ್ ನಿಲ್ದಾಣಕ್ಕೆ ಗುದ್ದಲಿ ಪೂಜೆ ಮಾಡಲಾಗುವುದು ಎಂದ ಅವರು ಚನ್ನಗಿರಿಯಿಂದ ಯಾತ್ರಾ ಸ್ಥಳಗಳಿಗೆ ಬಸ್ ಸೇವೆ ಒದಗಿಸಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನೆ ಪಡೆದುಕೊಳ್ಳುವಂತೆ ತಿಳಿಸಿದರು.
ಬಸ್ ಘಟಕಕ್ಕೆ ಅವಶ್ಯವಿರುವ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಸಹ ಈಗಾಗಲೇ ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಎಸ್. ಬಸವಂತಪ್ಪ, ಕರ್ನಾಟಕ ಜೀವ ವೈವಿಧ್ಯ ನಿಗಮ ಮಂಡಳಿ ಅಧ್ಯಕ್ಷರಾದ ವಡ್ನಾಳ್ ಜಗದೀಶ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಟಿ. ಬಸವರಾಜ್ , ಅಜ್ಜಿಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗೋವಿಂದರಾಜ್ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ ಪಾಶ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲ್ ರಾವ್ , ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಎಸ್.ಶಿವಕುಮಾರಯ್ಯ ಹಾಗೂ ಇತರರು ಉಪಸ್ಥಿತರಿದ್ದರು.





