SUDDIKSHANA KANNADA NEWS/ DAVANAGERE/ DATE:27-01-2025
ದಾವಣಗೆರೆ: ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಇತ್ಯರ್ಥಗೊಳಿಸಬೇಕು. ಅರ್ಜಿ ವಿಲೇವಾರಿಯಾಗದ ಹೊರತು ಅರ್ಜಿದಾರರನ್ನು ಒಕ್ಕಲೆಬ್ಬಿಸಬಾರದು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದಿಂದ ನಗರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಧರಣಿ ನಡೆಸಲಾಯಿತು.
ನಗರದ ಗಾಂಧಿವೃತ್ತದಿಂದ ಬೈಕ್ ರ್ಯಾಲಿ ಮೂಲಕ ಸಾಗಿದ ರೈತರು ಘೋಷಣೆಗಳನ್ನು ಕೂಗುತ್ತ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ ಕುಳಿತರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್,ಜಗಳೂರು ತಾಲೂಕಿನ ಗೌಡಗೊಂಡನಹಳ್ಳಿಯಲ್ಲಿ ಅರಣ್ಯ ಭೂಮಿ ಸಾಗುವಳಿದಾರರ ಮೇಲೆ ದೌರ್ಜನ್ಯ ನಡೆಸಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು, ಗ್ರಾಮದ ಅರಣ್ಯ ಭೂಮಿ ಸಾಗುವಳಿದಾರರ ಅರ್ಜಿ ವಿಲೇವಾರಿ ಆಗುವವರೆಗೂ ಜಮೀನು ಬಿಡಿಸುವ ಪ್ರಯತ್ನ ಮಾಡಬಾರದು ಎಂದರು.
ಚನ್ನಗಿರಿ ತಾಲ್ಲೂಕಿನಲ್ಲಿ 9 ಸಾವಿರ, ಜಗಳೂರು ತಾಲ್ಲೂಕಿನಲ್ಲಿ 6 ಸಾವಿರ ಮತ್ತು ದಾವಣಗೆರೆ ತಾಲ್ಲೂಕಿನಲ್ಲಿ 7 ಸಾವಿರಕ್ಕೂ ಅಧಿಕ ಬಗರ್ ಹುಕುಂ ಸಾಗುವಳಿದಾರರು ಫಾರಂ ನಂ53 ಮತ್ತು 57 ರಲ್ಲಿ ಅರ್ಜಿ ಸಲ್ಲಿಸಿದ್ದು, ಈ ಎಲ್ಲ ಅರ್ಜಿಗಳನ್ನು ಪುರಸ್ಕರಿಸಬೇಕು, ಈ ಹಿಂದೆ ತಾಲ್ಲೂಕಿನ ನಲ್ಲೂರು ಗ್ರಾಮದಿಂದ ಸುಡುಬಿಸಿಲನ್ನೂ ಲೆಕ್ಕಿಸದೇ ಪಾದಯಾತ್ರೆಯನ್ನು ಜಿಲ್ಲಾಧಿಕಾರಿಗಳ ಕಛೇರಿವರೆಗೆ ಮಾಡಲಾಗಿತ್ತು. ಜಿಲ್ಲಾಧಿಕಾರಿಗಳು ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಿದ ಮೇರೆಗೆ ಮುಷ್ಕರವನ್ನು ಹಿಂತೆಗೆದುಕೊಂಡಿದ್ದವು. ಆದರೆ ಇದುವೆರಗೂ ಬಂದ ಎಲ್ಲ ಜಿಲ್ಲಾಧಿಕಾರಿಗಳು ಕೊಟ್ಟ ಮಾತು ಮರೆತಿದ್ದಾರೆ ಎಂದು ಆರೋಪಿಸಿದರು.
ಚನ್ನಗಿರಿ ತಾಲೂಕಿನ ಶಿವಗಂಗೆಹಾಳ, ಅಸ್ತಾಪನಾಹಳ್ಳಿ, ಮಧುರನಾಯಕನಹಳ್ಳಿ, ಬಸವಾಪುರ, ಮಲ್ಲನಾಯಕನಹಳ್ಳಿ, ಬಿ.ಆರ್.ಟಿ. ಕಾಲೋನಿ, ಹೊನ್ನನಾಯಕನಹಳ್ಳಿ ಬೆಟ್ಟಕಡೂರು. ಜೋಳದಹಾಳ್, ಚಿಕ್ಕಕೋಗಳೂರು, ಪರೋಸಾಗರ, ಗರಗ, ಅಗರಬನ್ನಿಹಟ್ಟಿ, ಸಂಡಿಗೇನಹಳ್ಳಿ, ಎರೆಹಳ್ಳಿ, ಮಲ್ಲಿಗೇನಹಳ್ಳಿ, ಎನ್.ಗಾಣದಕಟ್ಟೆ, ಇನ್ನೂ ಅನೇಕ ಗ್ರಾಮಗಳಲ್ಲಿ ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವ ರೈತರ ಅರ್ಜಿಗಳು ಬಾಕಿ ಉಳಿದಿವೆ. ಉಪ ವಿಭಾಗಾಧಿಕಾರಿಗಳು ಸರಿಯಾಗಿ ಈ ಕಾಯ್ದೆಯನ್ನು ಜಾರಿಗೆ ತರುತ್ತಿಲ್ಲ. ಇದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳ ದೌರ್ಜನ್ಯ ಜಾಸ್ತಿಯಾಗಿದೆ. ಅರಣ್ಯ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.
ಅರಣ್ಯ ಇಲಾಖೆ ಜಗಳೂರು ತಾಲ್ಲೂಕಿನ ಗೌಡಗೊಂಡನಹಳ್ಳಿಯ 23 ಕುಟುಂಬಗಳನ್ನು ಒಕ್ಕಲೆಬ್ಬಿಸಿ ಈ ಭೂಮಿಯಲ್ಲಿ ಕಂದಕಗಳನ್ನು ನಿರ್ಮಾಣ ಮಾಡಿ ಸಸಿಗಳನ್ನು ನೆಡಲಾಗುತ್ತಿದೆ. ಕೂಡಲೇ ಜಿಲ್ಲಾಡಳಿತ ಮಧ್ಯ ಪ್ರವೇಶ ಮಾಡಿ ಈ 23 ಕುಟುಂಬಗಳಿಗೆ ಸಾಗುವಳಿ ಚೀಟಿ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಲೋಕೇಶ್, ಜಿಲ್ಲಾಧಿಕಾರಿ ಡಾ.ಗಂಗಾಧರ ಸ್ವಾಮಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಫೆಬ್ರವರಿ 20 ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಂಬಂಧಿಸಿದ ಎಲ್ಲ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂಬ ಭರವಸೆ ಹಿನ್ನೆಲೆಯಲ್ಲಿ ಧರಣಿ ಕೈ ಬಿಡಲಾಯಿತು.
ಪ್ರತಿಭಟನೆಯಲ್ಲಿ ಎಲೋದಹಳ್ಳಿ ರವಿಕುಮಾರ್, ಹಸ್ತಪನಹಳ್ಳಿ ಗಂಡುಗಲಿ, ಕೋಗಲೂರು ಕುಮಾರ್, ಚಿಕ್ಕಮಲ್ಲನಹೊಳೆ ಚಿರಂಜೀವಿ, ರಾಜನಹಟ್ಟಿ ರಾಜು, ಗೌಡಗೊಂಡನಹಳ್ಳಿ ಸತೀಶ್, ಚಿನ್ನಸಮುದ್ರ ಭೀಮಾನಾಯ್ಕ್, ಆನಗೋಡು ಭೀಮಣ್ಣ, ಚಿನ್ನಸಮುದ್ರ ಸುರೇಶ್ ನಾಯ್ಕ, ಹುಚ್ವವ್ವನಹಳ್ಳಿ ಪ್ರಕಾಶ್, ಆಲೂರು ಪರಶುರಾಮ್, ಕೊಡಗನೂರು ತಿಪ್ಪಣ್ಣ, ಗುಮ್ಮನೂರು ರುದ್ರೇಶ್, ಶರಣಮ್ಮ, ಭರಮಸಾಗರ ಸೂರಪ್ಪ ಕಾನಕಟ್ಟೆ ಅನಿಲ, ಹೂವಿನಮಡು ನಾಗರಾಜ್
ಭಾಗವಹಿಸಿದ್ದರು.