SUDDIKSHANA KANNADA NEWS/ DAVANAGERE/ DATE:25-12-2024
ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ಅವರ ಮೇಲೆ ಹಲ್ಲೆ ಮಾಡುವ ಮೂಲಕ ಸರ್ಕಾರ ರಾಜರಾಜೇಶ್ವರಿ ಕ್ಷೇತ್ರದ ಮತದಾರರನ್ನು ಅವಮಾನಿಸುತ್ತಿದೆ. ಅಧಿಕಾರ ಬಲದ ದರ್ಪದಲ್ಲಿ ಒಬ್ಬ ಜನಪ್ರತಿನಿಧಿಯ ಮೇಲೆ ಹಲ್ಲೆ, ದಬ್ಬಾಳಿಕೆ ಮಾಡುತ್ತಿರುವುದು ಖಂಡನೀಯ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಜರಾಜೇಶ್ವರಿ ನಗರ ಶಾಸಕರಾದ ಮುನಿರತ್ನ ಅವರ ಮೇಲೆ ಗೂಂಡಾಗಳು ಹಲ್ಲೆ ನಡೆಸಿರುವುದು ಖಂಡನೀಯ. ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಕಾನೂನು ಸುವ್ಯವಸ್ಥೆ ಪಾತಾಳಕ್ಕೆ ಕುಸಿದಿರುವುದಕ್ಕೆ ದಿನನಿತ್ಯವೂ ವರದಿಯಾಗುತ್ತಿರುವ ಪ್ರಕರಣಗಳೇ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವೇ ದಿನಗಳ ಹಿಂದೆ ಶಕ್ತಿಸೌಧದೊಳಗೆ ರೌಡಿಗಳನ್ನು ಒಳಬಿಟ್ಟು ಪರಿಷತ್ ಸದಸ್ಯರ ಮೇಲೆ ಹಲ್ಲೆ ಮಾಡಿಸಿದ್ದ ಕಾಂಗ್ರೆಸ್ ಸರ್ಕಾರ ಈಗ ಜನಪ್ರತಿನಿಧಿಯೊಬ್ಬರ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡಿಸಿದೆ. ಜನಪ್ರತಿನಿಧಿಗಳಿಗೆ ರಕ್ಷಣೆ ಇಲ್ಲವೆಂದ ಮೇಲೆ ಜನಸಾಮಾನ್ಯರ ಗತಿಯೇನು? ಸರ್ಕಾರಿ ಪ್ರಾಯೋಜಿತ ಹಲ್ಲೆ, ದಾಳಿಗಳ ಮೂಲಕ ದ್ವೇಷದ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ಬಿ. ವೈ. ವಿಜಯೇಂದ್ರ ಗುಡುಗಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಜನಪ್ರತಿನಿಧಿಗಳಿಗೆ ರಕ್ಷಣೆಯಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾನೂನು ಸುವ್ಯವಸ್ಥೆಯನ್ನು ಕೈಗೆತ್ತಿಕೊಂಡಿರುವ ಗೂಂಡಾಗಳು ಬಿಜೆಪಿ ಶಾಸಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಬೆಳಗಾವಿಯ ಸುವರ್ಣಸೌಧದಲ್ಲಿ ಶಾಸಕ ಶ್ರೀ ಸಿ.ಟಿ ರವಿ ಅವರ ಮೇಲೆ ನಡೆದ ಹಲ್ಲೆಯ ಪ್ರಕರಣವನ್ನು ಲಘುವಾಗಿ ತೆಗೆದುಕೊಂಡಿರುವ ಸರ್ಕಾರದ ಧೋರಣೆಯಿಂದ ಪ್ರೇರಣೆ ಪಡೆದಿರುವ ಕಾಂಗ್ರೆಸ್ ಗೂಂಡಾಗಳು ಇಂದು ನಮ್ಮ ಶಾಸಕ ಮುನಿರತ್ನ ಅವರ ಮೇಲೆ ಹಲ್ಲೆ ನಡೆಸಿರುವ ಘಟನೆ ಅತ್ಯಂತ ಹೇಯ ಹಾಗೂ ಖಂಡನೀಯ ಎಂದು ಕಿಡಿಕಾರಿದ್ದಾರೆ.
ಜನರಿಗೆ ರಕ್ಷಣೆ ನೀಡಬೇಕಾದ ಜನಪ್ರತಿನಿಧಿಗಳಿಗೇ ರಕ್ಷಣೆ ಇಲ್ಲವೆಂದರೆ ಸಾಮಾನ್ಯ ಜನರ ಪಾಡೇನು ಎಂಬ ಆತಂಕ ಉಲ್ಬಣಗೊಳ್ಳುತ್ತಿದೆ. ಸಾಮಾಜಿಕ ಸುಭದ್ರತೆಯಿಲ್ಲದ ಅರಾಜಕತೆಯ ರಾಜ್ಯವನ್ನು ನಿರ್ಮಿಸಲು ಕಾಂಗ್ರೆಸ್ ಹೊರಟಂತಿದೆ. ಶಾಸಕ ಮುನಿರತ್ನ ಅವರ ಮೇಲೆ ಆಪಾದನೆಗಳೇನೇ ಇರಲಿ ಅದಕ್ಕೆ ನ್ಯಾಯದ ಪರಿಧಿಯಲ್ಲಿ ಉತ್ತರ ಸಿಗುತ್ತದೆ. ಆದರೆ ಜನರಿಂದ ಆಯ್ಕೆಯಾದ ಶಾಸಕರೊಬ್ಬರನ್ನು ಹಾಡು ಹಗಲಲ್ಲೇ ಹತ್ಯೆ ಮಾಡುವ ಸಂಚುರೂಪಿಸಿ ಹಲ್ಲೆ ನಡೆಸುವ ಪರಿಸ್ಥಿತಿ ಉದ್ಭವಿಸಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ ಎಂದಿದ್ದಾರೆ.
ಕಾನೂನು ಸುವ್ಯವಸ್ಥೆಯು ಸಂಪೂರ್ಣ ಆದೋಗತಿಗೆ ಇಳಿದಿರುವ ಪರಿಸ್ಥಿತಿಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿ ಹೋರಾಟ ಕೈಗೆತ್ತಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮುನಿರತ್ನ ಅವರ ಮೇಲೆ ಹಲ್ಲೆ ನಡೆಸಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೇ ತೇಪೆ ಸಾರಿಸಲು ಪ್ರಯತ್ನಿಸಿದರೆ ತಕ್ಕನಾದ ಉತ್ತರ ಎದುರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಿದ್ಧವಾಗಿರಬೇಕಾಗುತ್ತದೆ ಎಂದು ಎಚ್ಚರಿಸ ಬಯಸುತ್ತೇನೆ ಎಂದು ಗುಡುಗಿದ್ದಾರೆ.