SUDDIKSHANA KANNADA NEWS/ DAVANAGERE/ DATE:28-02-2025
ದಾವಣಗೆರೆ: ನ್ಯಾಮತಿ ತಾಲೂಕಿನ ಗೋವಿನಕೋವಿ ಗ್ರಾಮದ ಶ್ರೀ ಹಾಲಸ್ವಾಮೀಜಿ ಬೃಹನ್ಮಠದ ಹಾಲಸ್ವಾಮೀಜಿಗಳ ಮುಳ್ಳುಗದ್ದುಗೆ ಉತ್ಸವ ಗುರುವಾರ ರಾತ್ರಿ ವಿಜೃಂಣೆಯಿಂದ ನಡೆಯಿತು.
ಶ್ರೀ ಸ್ವಾಮಿಯ ಸೇವಾರ್ಥಿಗಳು ಹಾಗೂ ಬಾಬುದಾರರು ಗುರುವಾರ ಬೆಳಗ್ಗೆ ಶ್ರದ್ಧಾಭಕ್ತಿಯಿಂದ ಮೆರವಣಿಗೆ ಮೂಲಕ ಮುಳ್ಳನ್ನು ತಂದು ಗದ್ದುಗೆಯಲ್ಲಿ ಹಾಸಿ ಅಲಂಕರಿಸಲಾಗಿತ್ತು. ಉಪವಾಸ ವ್ರತದ ಬಳಿಕ ಮಠದ ಪರಂಪರೆಯಂತೆ ಬೃಹನ್ಮಠದ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮೀಜಿಯವರು ಧಾರ್ಮಿಕ ವಿಧಿವಿಧಾನಗಳ ಪೂಜಾ ಕೈಂಕರ್ಯಗಳನ್ನು ಪೂರೈಸಿ ಅಗ್ನಿಕುಂಡ ಪ್ರವೇಶಿಸಿ, ಮುಳ್ಳುಗದ್ದುಗೆಯನ್ನು ಏರಿದರು.
ಇದಕ್ಕೂ ಮೊದಲು ಶ್ರೀಮಠದ ಸೇವಾ ಪರಂಪರೆ ಮುಂದುವರಿಸಿಕೊಂಡು ಬಂದಿರುವ ಮುಳ್ಳುಗದ್ದಿಗೆ ಉತ್ಸವು ತೇಜಿ (ಮಠದ ಕುದುರೆ) ಗ್ರಾಮದ ಪ್ರತಿಯೊಂದು ಮನೆಗಳಿಗೆ ಹೋಗಿ ಪೂಜೆ ಸಲ್ಲಿಸಿಕೊಂಡು ಬಂದ ನಂತರ ಮಠದ ಆವರಣದಲ್ಲಿ ಮುಳ್ಳಿನ ಗದ್ದುಗೆಗೆ ಪೂಜೆ ನೇರವೇರಿಸಿದ ನಂತರ ಹಾಲಸ್ವಾಮೀಜಿ ಮುಳ್ಳುಗದ್ದಿಗೆಯ ಮೇಲೆ ಬಾಳೇ ಎಲೆಯಿಂದ ಮಾಡಿದ ಕೌಪೀನ ಧರಿಸಿದ ಜಾಲಿಮುಳ್ಳಿನ ಗದ್ದುಗೆಯ ಮೇಲೆ ಹಾರಿ ಹಾರಿ ಕುಣಿಯುವ ದೃಶ್ಯ ನೋಡುಗರ ಮೈನವಿರೇಳಿಸಿತು,
ಗ್ರಾಮದ ಪ್ರಮುಖ ರಾಜ ಬೀದಿಗಳಲ್ಲಿ ಮುಳ್ಳುಗದ್ದುಗೆ ಉತ್ಸವದಲ್ಲಿ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಶ್ರೀ ಮಠದ ಮೂಲ ಶ್ರೀ ಹಾಲಸ್ವಾಮೀಜಿಯ ಪಾದುಕೆ, ಗ್ರಾಮ ದೇವತೆಗಳಾದ ಶ್ರೀ ಲಕ್ಷ್ಮಿನರಸಿಂಹಸ್ವಾಮಿ, ಶ್ರೀ ಆಂಜನೇಯ ಸ್ವಾಮಿ, ಶ್ರೀ ಶಕ್ತಿ ಕಾಳಿಕಾಂಬದೇವಿ ಉತ್ಸವ ಮೂರ್ತಿಗಳ ಮೆರವಣಿಗೆಯಲ್ಲಿ ವೀರಗಾಸೆ, ಡೊಳ್ಳು, ತಮಟೆವಾದ್ಯ ಸೇರಿದಂತೆ ಹಲವು ಹತ್ತು ಮೇಳಗಳೊಂದಿಗೆ ವಿಜೃಂಭಣೆಯಿಂದ ಸಾಗಿತು.
ರಾತ್ರಿ 10.30ಕ್ಕೆ ಪ್ರಾರಂಭವಾದ ಉತ್ಸವ ಶುಕ್ರವಾರ ಬೆಳಗಿನ ಜಾವ ಶ್ರೀಮಠವನ್ನು ತಲುಪಿತು. ಹಸಿಜಾಲಿಮುಳ್ಳುಗಳಿಂದ ನಿರ್ಮಾಣವಾದ ಮುಳ್ಳುಗದ್ದುಗೆಯ ಮಂಟಪದಲ್ಲಿ ವಿರಾಜಮಾನವಾಗುವ ಸ್ವಾಮೀಜಿಯ ಭವ್ಯ ಮೆರವಣಿಗೆಯಲ್ಲಿ ದಾವಣಗೆರೆ, ಶಿವಮೊಗ್ಗ , ಹಾವೇರಿ ಜಿಲ್ಲೆಗಳಿಂದ ಭಕ್ತ ಸಾಗರ ಸಾಕ್ಷೀಭೂತರಾದರು.
ಮಹಿಳೆಯರು ಶ್ರೀಮಠದ ಇತಿಹಾಸ, ಪವಾಡಗಳನ್ನು ತಮ್ಮದೇ ಆದ ಜನಪದ ಶೈಲಿಯ ಹಾಡುಗಳ ರೂಪದಲ್ಲಿ ವರ್ಣಿಸುತ್ತ ಮೆರವಣಿಗೆ ಮೂಲಕ ಸಾಗಿ ಗಮನ ಸೆಳೆದರು.