SUDDIKSHANA KANNADA NEWS/ DAVANAGERE/ DATE:24-02-2024
ದಾವಣಗೆರೆ: ಹೊನ್ನಾಳಿ – ನ್ಯಾಮತಿ ಅವಳಿ ತಾಲೂಕಿನ ರಾಂಪುರದ ಪುಣ್ಯಕ್ಷೇತ್ರದ ಶ್ರೀ ಹಾಲಸ್ವಾಮಿ ಮಹಾರಥೋತ್ಸವ ಫೆ. 27ಕ್ಕೆ ನಡೆಯಲಿದೆ. ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆದ್ರೆ, ಈಗ ಭಕ್ತರಲ್ಲಿ ಭಯ ಕಾಡಲಾರಂಭಿಸಿದೆ.
ನ್ಯಾಮತಿ ಸಮೀಪದ ಗೋವಿನಕೋವಿ ಗ್ರಾಮದಿಂದ ಹೊಲೆ ದಾಟಿ ಹೋಗಿ ಬರುವ ಭಕ್ತರು ಹಾಗೂ ಸಾರ್ವಜನಿಕರಲ್ಲಿ ಭಯ ಹುಟ್ಟಿದ್ದು, ಹೇಗೆ ರಥೋತ್ಸವಕ್ಕೆ ಹೋಗಬೇಕೆಂಬ ಭಯ ಕಾಡಲಾರಂಭಿಸಿದೆ. ಇದಕ್ಕೆ ಕಾರಣ ತುಂಗಾಭದ್ರಾ ನದಿಯಲ್ಲಿ ಕಾಣಿಸಿಕೊಡಿರುವ ಮೊಸಳೆ.
ಶ್ರೀ ಹಾಲಸ್ವಾಮೀಜಿ ಮಹಾರಥೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬರುತ್ತಾರೆ. ಗೆಡ್ಡೆ ರಾಮೇಶ್ವರದ ದೇಗುಲ, ಶ್ರೀ ಸದ್ಗುರು ಶಿವಯೋಗಿ ಹಾಲಸಿದ್ದೇಶ್ವರ ಗವಿಗೆ ಬರುತ್ತಾರೆ. ಹಲವಾರು ನದಿಯಲ್ಲೇ ಸ್ನಾನ ಮಾಡಿ, ಇಲ್ಲಿನ ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರ ಸಲ್ಲಿಸುತ್ತಾರೆ. ಹಲವರು ನದಿಯಲ್ಲೇ ಸ್ನಾನ ಮಾಡುತ್ತಾರೆ, ಬಟ್ಟೆ ತೊಳೆಯುತ್ತಾರೆ, ದನಕರುಗಳಿಗೆ ನೀರು ಕುಡಿಸುತ್ತಾರೆ. ಅಲ್ಲಿಯೇ ಸ್ನಾನ ಮಾಡಿಸುತ್ತಾರೆ. ಆದ್ರೆ, ಈಗ ಮೊಸಳೆ ಕಾಣಿಸಿಕೊಂಡಿರುವ ಆತಂಕ ಮತ್ತಷ್ಟು ಹೆಚ್ಚಾಗಲು
ಕಾರಣವಾಗಿದೆ.
ನದಿ ತಟದ ಬಳಿ ಮೊಸಳೆಗಳು ಕಾಣಿಸಿಕೊಂಡಿರುವುದರಿಂದ ಜನರು ಭಯಭೀತರಾಗಿದ್ದಾರೆ. ವಿಷಯ ತಿಳಿದ ನಂತರ ಯಾರೂ ನದಿಗೆ ಇಳಿದಿಲ್ಲ. ಮೊಸಳೆ ಕಾಣಿಸಿಕೊಂಡಿರುವ ಹಿನ್ನೆಲೆ ಸ್ನಾನಕ್ಕೆ ಬರುವವರು, ಮೀನುಗಾರಿಕೆ, ದನಗಳ ಮೈ ತೊಳೆಯುವುದು, ವಾಹನಗಳನ್ನು ಸ್ವಚ್ಛಗೊಳಿಸುವುದು, ಬಟ್ಟೆ ಒಗೆಯಲು ಬರುವವರು ಹೊಳೆಗೆ ಇಳಿಯುವಾಗ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಅರಣ್ಯ ಇಲಾಖೆಯ ಬರಕತ್ ಅಲಿ ತಿಳಿಸಿದ್ದಾರೆ.
ನ್ಯಾಮತಿ ತಾಲೂಕಿನ ಕುರುವ ಗೆಡ್ಡೆ , ಗೋವಿನಕೋವಿ ಮತ್ತು ರಾಂಪುರ ಗ್ರಾಮದ ಹರಿಯುವ ತುಂಗಾ ಭದ್ರಾ ನದಿಯಲ್ಲಿ ಮೊಳಸೆಯೊಂದು ಕಾಣಿಸಿಕೊಂಡಿದ್ದು, ಜನರಲ್ಲಿ ಭೀತಿ ಮೂಡಿಸಿದೆ. ಹೊಳೆ ದಂಡೆ ಮೇಲೆ ಮೊಸಳೆಯೊಂದು ಬಹುಹೊತ್ತು ಕುಳಿತಿತ್ತು. ಸ್ಥಳೀಯರು ಇದರ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೊ ವೈರಲ್ ಆಗಿದೆ. ಜಲಾಶಯದಿಂದ ಮೈಲಾರ ಜಾತ್ರೆಗೆ ನೀರು ಬಿಟ್ಟಿದ್ದರಿಂದ ಮೊಸಳೆ ನೀರಿನ ಜೊತೆಗೆ ತೇಲಿ ಬಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ತಾಲೂಕಿನ ಮಳಲಿ, ಚೀಲೂರು ಕೋಟೆಹಾಳ್, ಕುರುವ, ಗೋವಿನಕೋವಿ, ಹೊನ್ನಾಳಿ ತಾಲೂಕಿನ ದಿಡಗೂರು ಹರಳಹಳ್ಳಿ, ರಾಂಪುರ, ಹೊಟ್ಯಾಪುರ, ಹಿರೇಬಾಸೂರು
ಸುತ್ತಮುತ್ತ ಹೊಳೆ ದಂಡೆ ಮೇಲಿರುವ ಹಲವು ಗ್ರಾಮಸ್ಥರಲ್ಲಿ ಮೊಸಳೆಗಳು ಆತಂಕ ಮೂಡಿಸಿವೆ.
ಸ್ಥಳೀಯ ಕೆಲವರ ಮಾಹಿತಿ ಪ್ರಕಾರ ಮಾವಿನ ಹೊಂಡ , ಇತರೆ ಭಾಗಗಳಲ್ಲಿ ಮೊಸಳೆ ಕಾಣಿಸಿಕೊಳ್ಳುತ್ತದೆ. ಜನರು ಹೆಚ್ಚಾದಾಗ ಮತ್ತೆ ನೀರಿನಲ್ಲಿ ಹೋಗಿ ಬಿಡುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.