SUDDIKSHANA KANNADA NEWS/ DAVANAGERE/ DATE:13-02-2025
ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಬದಲಾವಣೆ ಖಚಿತ. ಈ ವಿಚಾರಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸ್ಫೋಟಕ ಮಾಹಿತಿ ನೀಡಿದ್ದಾರೆ. ಈಗಾಗಲೇ ಕೆಲ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷರ ನಿಯುಕ್ತಿಗೊಳಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಎರಡು ರಾಜ್ಯಗಳ ಅಧ್ಯಕ್ಷರೂ ಬದಲಾಗಲಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ. ಇದು ಕರ್ನಾಟಕದಲ್ಲಿಯೂ ಆಗುತ್ತದೆಯಾ ಎಂಬ ಚರ್ಚೆ ಶುರುವಾಗಿದೆ.
ಹಾಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಡಿಸಿಎಂ ಕೂಡ ಹೌದು. ಎರಡು ಹುದ್ದೆಗಳಲ್ಲಿ ಅಧಿಕಾರ ಅನುಭವಿಸುತ್ತಿದ್ದು, ಸಿಎಂ ಸಿದ್ದರಾಮಯ್ಯ ಬಣ ಕಣ್ಣು ಕೆಂಪಾಗಿಸಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಸತೀಶ್ ಜಾರಕಿಹೊಳಿ, ಕೆ. ಎನ್. ರಾಜಣ್ಣ, ಎಂ. ಬಿ. ಪಾಟೀಲ್, ಹೆಚ್. ಕೆ. ಪಾಟೀಲ್, ಡಿ. ಕೆ. ಸುರೇಶ್ ಸೇರಿದಂತೆ ಹಲವರು ಆಕಾಂಕ್ಷಿಗಳಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಸತೀಶ್ ಜಾರಕಿಹೊಳಿ ಇಲ್ಲವೇ ಎಂ. ಬಿ. ಪಾಟೀಲ್ ಅವರ ಪೈಕಿ ಒಬ್ಬರು ಕಾಂಗ್ರೆಸ್ ಸಾರಥಿಯಾಗುವುದು ಫಿಕ್ಸ್.
ಇನ್ನು ಡಿ. ಕೆ. ಶಿವಕುಮಾರ್ ಹೆಚ್ಚಿನ ಒಲವು ಇರುವುದು ಸಹೋದರ ಡಿ. ಕೆ. ಸುರೇಶ್ ಮೇಲೆ. ಲೋಕಸಭೆ ಚುನಾವಣೆಯಲ್ಲಿ ಸೋತಿರುವ ಕಾರಣ ಈ ಪಟ್ಟ ಸಿಗುವುದು ಅನುಮಾನ. ಸಿಎಂ ಸ್ಥಾನ ಪಡೆಯಲು ಹಗಲಿರುಳು ಶ್ರಮಿಸುತ್ತಿರುವ ಡಿ. ಕೆ. ಶಿವಕುಮಾರ್ ಕುಟುಂಬ ಸಮೇತರಾಗಿ ಕುಂಭಮೇಳಕ್ಕೂ ಹೋಗಿ ಬಂದಿದ್ದಾರೆ. ದೇವಸ್ಥಾನಗಳಿಗೂ ಭೇಟಿ ಕೊಟ್ಟಿದ್ದಾರೆ. ತೆರೆಮರೆಯಲ್ಲಿ ತಂತ್ರಗಾರಿಕೆ ರೂಪಿಸಿದ್ದಾರೆ. ಇತ್ತ ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದುವರಿಸಲು ರಣತಂತ್ರ ಹೆಣೆಯಲಾಗಿದೆ. ಒಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಯಾರ ಬಣದ ಪಾಲಾಗುತ್ತೆ ಎಂಬುದರ ಮೇಲೆ ಸಿದ್ದರಾಮಯ್ಯರ ಸಿಎಂ ಪಟ್ಟ ಇರಲಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ.