SUDDIKSHANA KANNADA NEWS/ DAVANAGERE/ DATE:28-10-2024
ದಾವಣಗೆರೆ: ಹರಿಹರ ತಾಲೂಕಿನ ಕೊಂಡಜ್ಜಿ ಕೆರೆ ಭರ್ತಿಯಾಗಿದ್ದು, ಈ ಹಿನ್ನೆಲೆಯಲ್ಲಿ ದಾವಣಗೆರೆ ಲೋಕಸಭಾ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಕೆರೆಗೆ ಬಾಗೀನ ಅರ್ಪಿಸಿದರು.
ಬಳಿಕ ಏರ್ಪಡಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರ ಕೃಷಿ ಚಟುವಟಿಕೆಗಳಿಗೆ ಜೀವನಾಡಿ ಕೆರೆಗಳು. ಹರಿಹರ ತಾಲ್ಲೂಕಿನ ಕೊಂಡಜ್ಜಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜೀವನಾಡಿಯಾಗಿರುವ ಕೊಂಡಜ್ಜಿ ಕೆರೆಗೆ ಇಂದು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ರೈತರ ಬದುಕು ಹಸನಾಗಲಿ ಎಂದು ಹೇಳಿದರು.
ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಕೆರೆಗಳು ಭರ್ತಿಯಾಗಿವೆ. ಅದರಂತೆ ಭದ್ರಾ ಜಲಾಶಯವು ತುಂಬಿದ್ದು, ರೈತರಲ್ಲಿ ಸಂತಸ ಮೂಡಿದೆ. ರೈತರಿಗೆ ಒಳ್ಳೆಯದಾಗಲಿ ಎಂದು ಗಂಗಾಮಾತೆಯಲ್ಲಿ ಪ್ರಾರ್ಥಿಸಲಾಯಿತು ಎಂದು
ತಿಳಿಸಿದರು.
ಕೆರೆಗಳನ್ನು ಸಂರಕ್ಷಿಸುವುದು ಮಾತ್ರವಲ್ಲ, ಮುಂದಿನ ಪೀಳಿಗೆಗೂ ಎಷ್ಟು ಸಾಧ್ಯವೋ ಅಷ್ಟು ನೀರಿನ ಸಂರಕ್ಷಣೆಯನ್ನು ಕಲಿಸಬೇಕು. ಎಷ್ಟೋ ಹಳ್ಳಿಗಳಲ್ಲಿ ಇಂದಿಗೂ ನೀರಿನ ವ್ಯವಸ್ಥೆ ಇಲ್ಲ. ಜಲಾಶಯದ ನೀರು ಎಲ್ಲಾ ಕಡೆಗಳಲ್ಲಿಯೂ
ಹರಿಸಲು ಆಗದು. ಹಾಗಾಗಿ, ಕೆರೆಗಳು ಜನರ ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗಳಿಗೆ ಆಧಾರ. ಹಾಗಾಗಿ, ಕೆರೆಗಳನ್ನು ಉಳಿಸಬೇಕಾದ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸೋಣ
ಎಂದು ಪ್ರಭಾ ಮಲ್ಲಿಕಾರ್ಜುನ್ ಅವರು ಕರೆ ನೀಡಿದರು.
ಕೊಂಡಜ್ಜಿ ಕೆರೆ ಭರ್ತಿಯಾಗಿದ್ದು ಖುಷಿಯ ವಿಚಾರ. ಹರಿಹರ ತಾಲೂಕಿನಲ್ಲಿ ಸಮಗ್ರ ನೀರಾವರಿ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಈ ಕೆರೆಯು ಹಲವು ಹಳ್ಳಿಗಳ ರೈತರಿಗೆ ವರದಾನ. ಹಾಗಾಗಿ, ಕೆರೆ ತುಂಬಿರುವುದರಿಂದ
ರೈತರಿಗೆ ಬೇಸಿಗೆ ಬೆಳೆ ಬೆಳೆಯಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಹರಿಹರ ಶಾಸಕ ಬಿ. ಪಿ. ಹರೀಶ್, ಮಾಜಿ ಶಾಸಕ ರಾಮಪ್ಪ, ಕೊಂಡಜ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಸಾರ್ವಜನಿಕರು, ಗ್ರಾಮದ ಮುಖಂಡರು ಹಾಜರಿದ್ದರು.