SUDDIKSHANA KANNADA NEWS/ DAVANAGERE/ DATE:01-03-2025
ದಾವಣಗೆರೆ: ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳಾಗಾಬೇಕು. ಗ್ರಾಮ ಪಂಚಾಯತಿಗಳು ನಮ್ಮ ವ್ಯವಸ್ಥೆ ಒಂದು ಭಾಗ ಆದ್ದರಿಂದ ಅಭಿವೃದ್ಧಿ ಕಾರ್ಯಗಳಿಗಾಗಿ ಅನುದಾನ ನೀಡಲಾಗುತ್ತದೆ. ಅದನ್ನು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸರ್ಕಾರದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಪಾರದರ್ಶಕವಾಗಿ ಗ್ರಾಮದ ಸಮಸ್ಯೆಗಳನ್ನು ಅರಿತು ಜೊಡೆತ್ತುಗಳ ರೀತಿ ಕೆಲಸ ಮಾಡಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸಲಹೆ ನೀಡಿದರು.
ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸಮೀಪದ ಕುಂಬಳೂರು ಗ್ರಾಮದಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಹಾಗೂ ಗ್ರಾಮ ಸ್ವರಾಜ್ ಅಭಿಯಾನ ಯೋಜನೆಯಡಿ ನಿರ್ಮಾಣ ಮಾಡಲಾಗಿರುವ ಗ್ರಾಮ ಪಂಚಾಯತ್
ನೂತನ ಕಟ್ಟಡವಾದ ರಾಜೀವ್ ಗಾಂಧಿ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು ಜೊಡೆತ್ತುಗಳು ಅಂದರೆ ಗ್ರಾಮಪಂಚಾಯತ್ ಹಾಗೂ ಪಿಡಿಒಗಳು. ಆದ್ದರಿಂದ ಜೋಡೆತ್ತುಗಳು ಸಮರ್ಪಕವಾಗಿ ಕೆಲಸ ಮಾಡಿದಾಗ ಗ್ರಾಮಗಳ ಅಭಿವೃದ್ಧಿ
ಸಾಧ್ಯ ಆಗ ಮಾಹಾತ್ಮಾ ಗಾಂಧೀಜಿಯವರ ಕಲ್ಪನೆಯಂತೆ ಗ್ರಾಮಗಳ ಅಭಿವೃದ್ಧಿಯಾಗುತ್ತದೆ.ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಿಯಾಯೋಜನೆ ರೂಪಿಸಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ಗ್ರಾಮೀಣಭಾಗದಲ್ಲಿ ಅಭಿವೃದ್ಧಿ ಕಾರ್ಯಗಳ ಪಟ್ಟಿ ಮಾಡಿಕೊಂಡು ಸರ್ಕಾರದ ಅನುದಾನ, ಶಾಸಕರು ಹಾಗೂ ಸಂಸದರ ಅನುದಾನದೊಂದಿಗೆ ಪ್ರಾಮಾಣಿಕವಾಗಿ ಕೆಲಸಮಾಡಬೇಕು ಎಂದರು.
ಕುಂಬಳೂರು ಗ್ರಾಮದ ಅಭಿವೃದ್ಧಿಗೆ ಈಗಾಗಲೇ 15 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಸಮುದಾಯಭವನ ಹಾಗೂ ಹೈಮಾಸ್ಟ್ ದೀಪದ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ ಹರಿಹರ ಕ್ಷೇತ್ರಕ್ಕೆ 65 ಲಕ್ಷ ರೂ ಅನುದಾನ ನೀಡಲಾಗಿದೆ. ಸರ್ಕಾರಿ ಅಧಿಕಾರಿಗಳು ರಾಜ್ಯ ಹಾಗೂ ಕೇಂದ್ರದ ಯೋಜನೆಗಳ ಪಟ್ಟಿ ಮಾಡಿಕೊಂಡು ಫಲಾನುಭವಿಗಳಿಗೆ ಮಾಹಿತಿ ನೀಡಬೇಕು.ಮನೆಮನೆಗೆ ತೆರಳಿ ಜನರಿಗೆ ಯೋಜನೆಗಳ ಬಗ್ಗೆ ಅರಿವು ಮೂಡಿಸಬೇಕೆಂದು ಸಲಹೆ ನೀಡಿದರು.
ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಹಳೇಯ ಪಟ್ಟಿಯಲ್ಲಿರುವವರು ತಮ್ಮಹೆಸರು ಹಿಂಪಡೆಯದ ಕಾರಣ ಹೊಸ ಫಲಾನುಭವಿಗಳ ಹೆಸರು ಸೇರ್ಪಡೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳಿವೆ ಈ ಬಗ್ಗೆ ಜಿ.ಪಂ ಸಿಇಒ ಅವರ ಜೊತೆ ಮಾತನಾಡಲಾಗುವುದು. ಜೊತೆಗೆ ಆವಾಸ್ ಯೋಜನೆಯಿಂದ ಬರುತ್ತಿರುವ ಅನುದಾನ ಕಡಿಮೆ ಇದೆ. ಈ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಮಾತನಾಡಲಾಗುವುದು ಎಂದರು.
ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆರ ವೇತನವನ್ನು ರಾಜ್ಯ ಸರ್ಕಾರ ಹೆಚ್ಚಳ ಮಾಡಿದೆ ಆದರೆ ಕೇಂದ್ರ ಸರ್ಕಾರ ಹೆಚ್ಚಿಸಿಲ್ಲ ಈ ಬಗ್ಗೆ ಸಂಸತ್ತಿನಲ್ಲಿ ದನಿ ಎತ್ತಲಾಗಿದೆ ಎಂದರು.
ಬಹು ಬೇಡಿಕೆಯಿರುವ ಎಸ್ ಹೆಚ್ 25 ಅನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಮನವಿಗಳಿವೆ. ಮರಿಯಮ್ಮನ ಹಳ್ಳಿಯಿಂದ ಶಿವಮೊಗ್ಗ ರಸ್ತೆ ಮೂರು ಜಿಲ್ಲೆಗಳನ್ನು ಹಾದು ಹೋಗುವ ರಸ್ತೆಯಾಗಿದೆ. ವಿಜಯನಗರ,ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿದೆ ಮೂರು ಜಿಲ್ಲೆಯ ಸಂಸದರು ಈಗಾಗಲೇ ಮಾತನಾಡಿದ್ದೇವೆ ಹಾಗೂ ಈ ಬಗ್ಗೆ ಕೇಂದ್ರ ಸಚಿವರಾದ ಗಡ್ಕರಿಯವರ ಬಳಿ ಚರ್ಚೆ ನಡೆಸಿ ಅವಶ್ಯಕತೆಯ ಬಗ್ಗೆ ಗಮನಕ್ಕೆ ತರಲಾಗಿದೆ. ಎಸ್ ಹೆಚ್ 25 ರಾಜ್ಯ ಹೆದ್ದಾರಿಯನ್ನು
ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಮನವಿ ಸಲ್ಲಿಸಲಾಗಿದೆ ಎಂದರು.
ಎಸ್ ಎಸ್ ಕೇರ್ ಟ್ರಸ್ಟ್ ಮೂಲಕ ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಡಯಾಲಿಸಿಸ್ ಸೇವೆ ಒದಗಿಸಲಾಗುತ್ತಿದೆ ಇದರೊಂದಿಗೆ ಉಚಿತ ಹೆರಿಗೆ ಸೇವೆ ಕೂಡ ಸಲ್ಲಿಸಲಾಗುತ್ತಿದೆ.ಆರ್ಥಿಕವಾಗಿ ಹಿಂದುಳಿದವರು ಹಾಗೂ ಬಿಪಿಎಲ್ ಕಾರ್ಡ್ ಹೊಂದಿದವರು ಈ ಸೌಲಭ್ಯ ಪಡೆಯಬಹುದಾಗಿದೆ ಎಂದರು.
ಇದಕ್ಕಾಗಿ ಎಸ್ ಎಸ್ ಕೇರ್ ಟ್ರಸ್ಟ್ ನ ಟ್ರಸ್ಟಿಗಳಾದ ಶಾಮನೂರು ಶಿವಶಂಕರಪ್ಪ ಅವರು 20 ಕೋಟಿ ಮೀಸಲಿಟ್ಟಿದ್ದಾರೆ ಈ ಮೂಲಕ ಜನಸೇವೆ ಮಾಡಲಾಗುತ್ತಿದೆ ಎಂದರು. ದಾವಣಗೆರೆ ಉತ್ತರ ಹಾಗೂ ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿ ಪಿಡಿಒಗಳ ಸಭೆ ಮಾಡಲಾಗಿತ್ತು ಸಭೆಯಲ್ಲಿ ಸ್ತನ ಕ್ಯಾನ್ಸರ್ ಮತ್ತು ಗರ್ಭಕೋಶದ ಕ್ಯಾನ್ಸರ್ ಬಗ್ಗೆ ಕಾರ್ಯಾಗಾರ ಮಾಡುವ ಹಾಗೂ ಆರೋಗ್ಯ ಕಾರ್ಯಾಗಾರ ಮಾಡುವ ಚಿಂತನೆಯಿದೆ ಎಂದರು.ಪ್ರಾಥಮಿಕ ಹಂತದಲ್ಲಿ ಕ್ಯಾನ್ಸರ್ ಗುರುತಿಸಿದರೆ ಆರ್ಥಿಕ ಹೊರೆ ಕಡಿಮೆಯಾಗಲಿದೆ..ಈ ಬಗ್ಗೆ ಮಹಿಳೆಯರಿಗೆ ಅರಿವು ಮೂಡಿಸಬೇಕಿದೆ.ಸ್ವಸಹಾಯ ಸಂಘದ ಮೂಲಕ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದರು.
ಈ ವೇಳೆ ಕುಂಬಳೂರು ನನ್ನ ಸೋದರತ್ತೆಯ ಮನೆ. ಬೇಸಿಗೆ ರಜಾಸಮಯದಲ್ಲಿ ಬಾಲ್ಯದ ದಿನಗಳಲ್ಲಿ ಆಗಮಿಸುತ್ತಿದ್ದ ನೆನಪುಗಳಿವೆ ಎಂದು ಮೆಲುಕು ಹಾಕಿದರು.
ವೇದಿಕೆಯಲ್ಲಿ ಹರಿಹರ ಶಾಸಕ ಬಿ. ಪಿ. ಹರೀಶ್, ಗ್ರಾ.ಪಂ ಅಧ್ಯಕ್ಷೆ ಉಮಾದೇವಿ ಶಿವರಾಮಚಂದ್ರಪ್ಪ,ಗ್ರಾ.ಪಂ ಉಪಾಧ್ಯಕ್ಷ ಹರೀಶ್,ಮುಖಂಡರಾದ ಶ್ರೀನಿವಾಸ್ ನಂದಿಗಾವಿ, ಹನಗವಾಡಿ ಕುಮಾರ್, ಗ್ರಾಮಸ್ಥರು, ಅಧಿಕಾರಿಗಳು ಉಪಸ್ಥಿತರಿದ್ದರು.