SUDDIKSHANA KANNADA NEWS/ DAVANAGERE/ DATE:05-12-2024
ಹಾಸನ: ನಾವು ವಚನ ಪಾಲಕರು, ವಚನ ಭ್ರಷ್ಟರಲ್ಲ. ಜನರಿಗೆ ಕೊಟ್ಟ ಮಾತುಗಳನ್ನು ನಾವು ಉಳಿಸಿಕೊಂಡಿದ್ದೇವೆ. ಜನರ ಬದುಕಿಗಾಗಿ ನಾವು ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದೇವೆ. ಜನರ ನಂಬಿಕೆ ಹಾಗೂ ವಿಶ್ವಾಸವೇ ನಮಗೆ ಶಕ್ತಿ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ತಿಳಿಸಿದರು.
ಹಾಸನದ ಎಸ್.ಎಂ.ಕೃಷ್ಣ ನಗರದಲ್ಲಿ ಸ್ವಾಭಿಮಾನಿ ಒಕ್ಕೂಟಗಳ ಜಂಟಿ ಆಶ್ರಯದಲ್ಲಿ ಇಂದು ಹಮ್ಮಿಕೊಂಡಿದ್ದ ಜನಕಲ್ಯಾಣ ಸಮಾವೇಶವನ್ನು ಸಿಎಂ ಸಿದ್ದರಾಮಯ್ಯರ ಜೊತೆ ಸೇರಿ ಉದ್ಘಾಟಿಸಿ ಆ ಬಳಿಕ ಸಮಾವೇಶ ಉದ್ದೇಶಿಸಿ ಅವರು
ಮಾತನಾಡಿದರು.
ಈ ದೇಶಕ್ಕೆ ಅಂಬೇಡ್ಕರ್ ಅವರು ನೀಡಿದ ಸಂವಿಧಾನವನ್ನು ನಾವು ಉಳಿಸಿಕೊಳ್ಳಬೇಕು. ಹಾಸನದ ಸ್ವಾಭಿಮಾನ ಉಳಿಸಲು ಈ ಸಮಾವೇಶ ಸಹಕಾರಿಯಾಗಿದೆ. ಜನಪರ ಆಡಳಿತ ನೀಡುತ್ತಿರುವ ಕಾಂಗ್ರೆಸ್ ಸರ್ಕಾರ 2028ರಲ್ಲೂ ಅಧಿಕಾರಕ್ಕೆ ಬರುವುದು
ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದವರೂ ಅಧಿಕಾರಕ್ಕೆ ಬಂದಂತೆ. ನಮ್ಮ ಗ್ಯಾರಂಟಿಗಳ ಶಕ್ತಿಯಿಂದ ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅದ್ವಿತೀಯ ಗೆಲುವು ಸಾಧಿಸಿದೆ. ಇದು ಕೇವಲ ಜನಕಲ್ಯಾಣ ಸಮಾವೇಶವಲ್ಲ, ಗ್ಯಾರಂಟಿಗಳ ಗೆಲುವಿನ ಸಮಾವೇಶವಾಗಿದೆ. ಕಾಂಗ್ರೆಸ್ ಪಕ್ಷ ಭಾವನೆಗಳ ಮೇಲೆ ರಾಜಕಾರಣ ಮಾಡುವುದಿಲ್ಲ, ಜನರ ಬದುಕಿನ ಮೇಲೆ ರಾಜಕಾರಣ ಮಾಡುತ್ತದೆ. ನಮ್ಮ ಸರ್ಕಾರವನ್ನು ಕಿತ್ತೆಸೆಯುತ್ತೇವೆ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ರು, ಇದಕ್ಕೆ ಜನರೇ ಉತ್ತರ ಕೊಟ್ಟಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.