SUDDIKSHANA KANNADA NEWS/ DAVANAGERE/ DATE:22-03-2024
ದಾವಣಗೆರೆ: ತೀವ್ರ ಬರದಿಂದ ಒಂದೆಡೆ ಕುಡಿಯುವ ನೀರಿನ ಕೊರತೆಯಾದರೆ, ಮತ್ತೊಂದೆಡೆ ಪೂರೈಕೆಯಾಗುತ್ತಿರುವ ನೀರು ಶುದ್ಧವಾಗಿಲ್ಲ. ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಮಾಹಿತಿ ಪ್ರಕಾರ ರಾಜ್ಯಾದ್ಯಂತ ಒಟ್ಟು 18893 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ 1980 ಘಟಕಗಳು ಕೆಟ್ಟು ಬಂದ್ ಆಗಿವೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸತೀಶ್ ಕೊಳೇನಹಳ್ಳಿ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಯಲ್ಲಿ 600 ಶುದ್ಧ ನೀರಿನ ಘಟಕಗಳು ಇದ್ದು, ಇವುಗಳಲ್ಲಿ 100 ಕ್ಕೂ ಹೆಚ್ಚು ಘಟಕಗಳು ಸ್ಥಗಿತಗೊಂಡಿವೆ. ಮನೆ ಮನೆಗೆ ನಳ ಸಂಪರ್ಕ ಕಲ್ಪಿಸಿ, ನೀರು ಪೂರೈಸುವ ಮೂಲಕ ಜನರ ಬದುಕನ್ನು ಹಸನಾಗಿಸುವ ನರೇಂದ್ರ ಮೋದಿಯವರ ಕೇಂದ್ರದ ಬಿಜೆಪಿ ಸರ್ಕಾರ ಮನೆ ಮನೆಗೆ ಗಂಗೆ ಹರ್ ಘರ್ ಜಲ್ ಎಂಬ ವಿಶೇಷ ಯೋಜನೆ ಜಾರಿ ಮಾಡಿದೆ. ನೀರಾವರಿ ಸಚಿವಾಲಯದ ಜಲಶಕ್ತಿ ಅಭಿಯಾನದಡಿಯಲ್ಲಿ ಜಲ ಜೀವನ ಮಿಷನ್ ಯೋಜನೆಯಡಿ 2019-20ನೇ ಸಾಲಿನಿಂದ ಇಲ್ಲಿಯವರೆಗೆ ದೇಶದ 11.84 ಕೋಟಿ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎಂದರು.
ಕರ್ನಾಟಕದಲ್ಲಿ 64 ಲಕ್ಷ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿರುವ 691 ಹಳ್ಳಿಗಳ ಪೈಕಿ 302 ಹಳ್ಳಿಗಳ ಎಲ್ಲಾ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಿದ್ದು, ಈ ಹಳ್ಳಿಗಳಲ್ಲಿ ಹರ್ ಘರ್ ಜಲ್ ಎಂದು ಘೋಷಿಸಲಾಗಿದೆ. ಆದರೆ ರಾಜ್ಯ ಸರ್ಕಾರ ಕುಡಿಯುವ ನೀರಿನ ಪೂರೈಕೆ ಸರಿಯಾಗಿ ಮಾಡುತ್ತಿಲ್ಲ ಮತ್ತು ನೀರಿನ ಸಮಸ್ಯೆಯಾಗದಂತೆ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ದೂರಿದರು.
ನಲ್ಲಿ (ನಳ) ಇದೆ ನೀರಿಲ್ಲ ನೀರಿಲ್ಲ ಏನಿಲ್ಲ ಏನಿಲ್ಲ ಎಂಬಂತೆ ಆಗಿದೆ. ಊರಿಗೆ ಬಂದ ಸೊಸೆ ನೀರಿಗೆ ಬರದಂಗೆ ಇರುತ್ತಾಳ ಎಂಬ ಹಳ್ಳಿ ಗಾದೆಯೇ ಹೇಳುವಂತೆ ದೂರದಿಂದ ನಿತ್ಯ ತಲೆಯ ಮೇಲೆ ಕೊಡ ಹೊತ್ತು ಮನೆಗೆ ನೀರು ತರುವ ಜವಾಬ್ದಾರಿ ನಮ್ಮ ಗ್ರಾಮೀಣ ಕುಟುಂಬಗಳ ಬಾಲಕಿಯರದು ಮತ್ತು ಮಹಿಳೆಯರದು. ಮನೆ ಮನೆಗೆ ನಲ್ಲಿ ನೀರು ಒದಗಿಸುವ ಮೂಲಕ ಮನೆ ಬಾಲಕಿಯರ ಮತ್ತು ಮಹಿಳೆಯರ ದೈನಂದಿನ ಕೆಲಸದ ಒತ್ತಡ ಅಥವಾ ಕರ್ತವ್ಯ ಬಾರ ಕಡಿಮೆ ಮಾಡಿ ಅವರನ್ನು ಸಬಲಗೊಳಿಸಲು ಈ ಯೋಜನೆಯನ್ನು
ನರೇಂದ್ರ ಮೋದಿಯವರು ಜಾರಿ ಮಾಡಿದ್ದಾರೆ. ಆದರೆ ರಾಜ್ಯದ ಎಡಬಿಡಂಗಿ ಕಾಂಗ್ರೆಸ್ ಸರ್ಕಾರ ನಲ್ಲಿ (ನಳ) ಇದ್ದರೂ ನೀರು ಪೂರೈಕೆ ಮಾಡಲಾಗದೆ ಯೋಜನೆ ಉದ್ದೇಶವನ್ನು ಹಳಿ ತಪ್ಪಿಸಿದೆ ಎಂದು ವಿವರಿಸಿದರು.
ನಮ್ಮ ಜಿಲ್ಲೆಯಲ್ಲಿ ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳ ನೀರು ಮೂಲ ಆಧಾರವಾಗಿದೆ. ಭದ್ರಾ ಜಲಾಶಯದ ನೀರು ನಮ್ಮ ಜಿಲ್ಲೆಯ ಜೀವನಾಡಿಯಾಗಿದೆ. ಭದ್ರಾ ನೀರು ಕೊನೆ ಭಾಗದವರಿಗೆ ಹರಿದಿಲ್ಲವಾದ್ದರಿಂದ ಕೊಳವೆ ಬಾವಿಗಳ ನೀರು ಕಡಿಮೆಯಾಗಿ, ಪಾತಾಳಕ್ಕೆ ಹೋಗಿದೆ. ಅಂದ್ರೆ ಅಂತರ್ಜಲ ಮಟ್ಟ ಕುಸಿದಿದೆ. ಇದರಿಂದ ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರವಾಗಿದೆ. ನೀರು ಅಮೂಲ್ಯವಾದದ್ದು, ಪ್ರತಿ ಹನಿ ನೀರಿಗೂ ಬೆಲೆ ತೆರಬೇಕಾಗುತ್ತದೆ ಎಂಬ ಅರಿವು ಇಲ್ಲದ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನರವರು ನಿರ್ಲಕ್ಷ್ಯ ಧೋರಣೆಯಿಂದ ಮತ್ತು ದೂರದೃಷ್ಟಿ ಕೊರತೆಯಿಂದ ಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಗೆ ಗೈರು ಹಾಜರಾಗಿದ್ದಾರೆ ಎಂದರು.
ಈಗ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭದ್ರಾ ನೀರನ್ನು ಕೊನೆ ಭಾಗಕ್ಕೆ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ಹೇಳಿರುವುದು ಅವಿವೇಕದ ಪರಮಾವಧಿಯಾಗಿದೆ. ಐಸಿಸಿ ಸಭೆಯ ನೀರು ಬಿಡುವ ವೇಳಾಪಟ್ಟಿ ಅವೈಜ್ಞಾನಿಕವಾಗಿದೆ. ಒಂದು ಸಲ 12 ದಿನ ಇನ್ನೊಂದು ಸಲ 13 ದಿನ ನೀರು ಬಿಡುವ ಬದಲು ಒಂದೇ ಸಲ 20 ದಿನ ನೀರು ಹರಿಸಿದ್ರೆ ಕೊನೆಯ ಭಾಗಕ್ಕೆ ನೀರು ತಲುಪುತ್ತದೆ. ಇದನ್ನು ಐಸಿಸಿ ಸಭೆಯಲ್ಲಿ ಭಾಗವಹಿಸಿ, ಮಾತನಾಡಬೇಕಾದ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನರವರು ನೀರಾವರಿ ಇಲಾಖೆ ಇಂಜಿನಿಯರ್ ಗಳು ಭಾಗವಹಿಸದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿರುವುದು ಮೂರ್ಖತನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್, ಪಾಲಿಕೆ ಸದಸ್ಯ ಶಿವಾನಂದ್ ಮತ್ತಿತರರು ಹಾಜರಿದ್ದರು.