SUDDIKSHANA KANNADA NEWS/ DAVANAGERE/ DATE:22-03-2025
ದಾವಣಗೆರೆ: ದಾವಣಗೆರೆ ಜಿಲ್ಲೆಯ ಹರಿಹರ ನಗರದಲ್ಲಿ ನಡೆಯುತ್ತಿರುವ ಗ್ರಾಮದೇವತೆ ಉತ್ಸವದಲ್ಲಿ ಕೋಣ ಬಲಿ ನೀಡಿರುವ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಿಸಿಕೊಳ್ಳಲಾಗಿದೆ.
ದೇವರ ಹೆಸರಲ್ಲಿ ಕೋಣವನ್ನು ಬಲಿ ನೀಡುತ್ತಿರುವ ಬಗ್ಗೆ ಒಂದು ವೀಡಿಯೋ ಹರಿದಾಡುತ್ತಿರುವುದನ್ನು ಪರಿಶೀಲಿಸಿ ಭಾರತೀಯ ನ್ಯಾಯ ಸಂಹಿತೆ-2023 (ಬಿಎನ್ಎಸ್) ರ ಕಲಂ 325 ಹಾಗೂ 190 ಮತ್ತು ಕರ್ನಾಟಕ ಪ್ರಾಣಿ ಬಲಿಗಳ ಪ್ರತಿಬಂಧಕ ಅಧಿನಿಯಮ-1959ರಡಿ ದೂರು ದಾಖಲಿಸಿಕೊಳ್ಳಲಾಗಿದೆ.
ಸುಮಾರು 15 ರಿಂದ 20 ಜನರು ಸೇರಿಕೊಂಡು ಯಾವುದೋ ಒಂದು ಸ್ಥಳದಲ್ಲಿ ಒಂದು ಪ್ರಾಯದ ಕೋಣವನ್ನು ನೆಲಕ್ಕೆ ಕೆಡವಿ ವಧೆ ಮಾಡುತ್ತಿರುವ 30 ಸೆಕೆಂಡ್ ಅವಧಿಯ ವಿಡಿಯೋ ದೃಶ್ಯಾವಳಿಯಲ್ಲಿ ಕಂಡು ಬಂದಿರುವುದನ್ನು ಆಧರಿಸಿ ದೂರು ದಾಖಲಿಸಿಕೊಳ್ಳಲಾಗಿದೆ.
ಪ್ರಾಣಿ ಬಲಿ ನಿಷೇಧ ಕಾನೂನನ್ನು ಉಲ್ಲಂಘಿಸಿ ಉದ್ದೇಶ ಪೂರ್ವಕವಾಗಿ ಮೇಲ್ಕಂಡ ಕೋಣವನ್ನು ವಧೆ ಮಾಡಿದ ಈ ವಿಡಿಯೋ ದೃಶ್ಯಾವಳಿಗಳಲ್ಲಿರುವ ಎಲ್ಲಾ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹರಿಹರದ ದೇವಿ ಜಾತ್ರಾಮಹೋತ್ಸವದಲ್ಲಿ ಕೋಣ ಬಲಿ ನೀಡಿದ ಆರೋಪಿತರನ್ನು ಶೀಘ್ರವೆ ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷರಾದ ದಯಾನಂದ ಸ್ವಾಮೀಜಿ ದೂರು ದಾಖಲಿಸಿದ್ದರು.