SUDDIKSHANA KANNADA NEWS/ DAVANAGERE/ DATE:30-11-2024
ದಾವಣಗೆರೆ: ಉಡುಪಿಯ ಪೇಜಾವರ ಶ್ರೀ, ಒಕ್ಕಲಿಗ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಹಾಗೂ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗಳನ್ನು ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್ತು ಹಾಗೂ ಜಾಗೃತ ಭಾರತ ವಿಚಾರ ವೇದಿಕೆ ಖಂಡಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಾಗೃತ ಭಾರತ ವಿಚಾರ ವೇದಿಕೆ ಸಂಚಾಲಕ ಡಾ. ಕೆ.ಎ. ಓಬಳೇಶ್ ಅವರು, ಭಾರತದ ಸಂವಿಧಾನ ಸರ್ವರನ್ನು ಸಮಾನವಾಗಿ ಪರಿಗಣಿಸಿ, ಸಾವಿರಾರು ವರ್ಷಗಳಿಂದ ಸಮಾನತೆಯಿಂದ ವಂಚಿತವಾಗಿದ್ದ ಸಮುದಾಯಗಳಿಗೆ ಸ್ವಾಭಿಮಾನ ಹಾಗೂ ಸ್ವಾವಲಂಬನೆಯಿಂದ ಬದುಕುವಂತೆ ಮಾಡಿರುವುದಾಗಿದೆ. ಹೀಗಾಗಿಯೇ ನವೆಂಬರ್ 26ನೇ ದಿನವನ್ನು ‘ಸಂವಿಧಾನ ದಿನ’ವನ್ನಾಗಿ ಆಚರಿಸುತ್ತಿದೆ. ಇಂತಹ ಸಂಭ್ರಮದ ನಡುವೆ ನಾಡಿನ ಪ್ರಸಿದ್ಧ ಮಠಾಧೀಶರಲ್ಲಿ ಒಬ್ಬರಾದ ಉಡುಪಿಯ ಪೇಜಾವರ ಶ್ರೀಗಳು ‘ಈ ಸಂವಿಧಾನದಿಂದ ನಮಗೆ ಗೌರವ ನೀಡುತ್ತಿಲ್ಲ. ಇಂತಹ ಸಂವಿಧಾನ ನಮಗೆ ಬೇಡ’ ಎಂಬುದಾಗಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ತಮ್ಮ ಸಂವಿಧಾನ ವಿರೋಧಿ ಧೋರಣೆಯನ್ನು ಹೊರಹಾಕಿದ್ದಾರೆ ಎಂದರು.
ಶ್ರೀಗಳ ಹೇಳಿಕೆ ಭಾರತೀಯರೆಲ್ಲರಿಗೂ ಮಾಡಿದ ಅಪಮಾನ, ಅಷ್ಟೆ ಅಲ್ಲದೆ ಈ ನೆಲದ ಗೌರವಯುತ ಸಂವಿಧಾನಕ್ಕೆ, ಸಂವಿಧಾನದ ಅಡಿಯಲ್ಲಿ ಸ್ವಾಭಿಮಾನದಿಂದ ಬದುಕುವ ಬಹುಸಂಖ್ಯಾತ ವರ್ಗಕ್ಕೆ ಮಾಡಿದ ಅವಮಾನ. ಪೇಜಾವರ ಶ್ರೀಗಳು ತಮಗೆ ಈ ನೆಲದ ಸಂವಿಧಾನದಿಂದ ಯಾವ ರೀತಿಯ ಅಗೌರವ ಮತ್ತು ಅವಮಾನವಾಗಿದೆ ಎಂಬುದನ್ನು ಬಹಿರಂಗವಾಗಿ ಹೇಳಿಕೆ ನೀಡಬೇಕು. ಈ ನಿಮ್ಮ ಆಂತರ್ಯದ ತುಡಿತ ಈ ನೆಲದ ಬಹುಸಂಖ್ಯಾತ ವರ್ಗಕ್ಕೆ ಅರ್ಥವಾಗಬೇಕು ಎಂಬುದಾಗಿ ಆಗ್ರಹಿಸುತ್ತೇವೆ ಎಂದರು.
ಪೇಜಾವರ ಶ್ರೀಗಳ ಈ ಹೇಳಿಕೆಯನ್ನು ನಾವು ಸಂಪೂರ್ಣವಾಗಿ ಖಂಡಿಸುತ್ತೇವೆ. ಈ ನೆಲದ ಸಂವಿಧಾನದ ಮೌಲ್ಯಗಳಿಗೆ ಅಪಚಾರವೆಸಗಿದ ಶ್ರೀಗಳು ಕೂಡಲೇ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಇಲ್ಲದೆ ಹೋದಲ್ಲಿ ಪೇಜಾವರ ಶ್ರೀಗಳ ಮೇಲೆ ದೇಶದ್ರೋಹದ ಅಡಿಯಲ್ಲಿ ಕಾನೂನು ಹೋರಾಟಕ್ಕೂ ಮುಂದಾಗಲಾವುದು ಎಂಬ ಎಚ್ಚರಿಕೆಯನ್ನು ನೀಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ಸಂವಿಧಾನದ ಆಶಯಗಳಿಗೆ ವಿರುದ್ಧವಾದ ನೆಲೆಯಲ್ಲಿ ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ‘ಮುಸ್ಲಿಮರಿಗೆ ನೀಡಿರುವ ಮತದಾನದ ಹಕ್ಕನ್ನು ಹಿಂಪಡೆಯಬೇಕು’ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಧರ್ಮದ ಆಶಯಗಳ ಮೂಲಕ ಶಾಂತಿಯ ಸಂದೇಶ ಸಾರಬೇಕಾದ ಸ್ವಾಮಿಗಳೇ ಈ ರೀತಿಯ ಕೋಮುದ್ವೇಷಕ್ಕೆ ಪ್ರಚೋದನೆ ನೀಡುವ ಹೇಳಿಕೆ ನೀಡಿರುವುದು ಅತ್ಯಂತ ವಿಷಾದನೀಯ. ಈಗಾಗಲೇ ಅವರು ಬಹಿರಂಗವಾಗಿ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಇದು ಮರುಕಳಿಸಿದರೆ ಇವರ ವಿರುದ್ಧವೂ ಕಾನೂನು ಹೋರಾಟ ನಡೆಸಲಾಗುವುದು ಎಂಬ ಎಚ್ಚರಿಕೆಯನ್ನು ನೀಡುತ್ತೇವೆ ಎಂದು ಹೇಳಿದರು.