SUDDIKSHANA KANNADA NEWS/ DAVANAGERE/ DATE:04-04-2025
ದಾವಣಗೆರೆ: ಕೇಂದ್ರ ಸರ್ಕಾರವು ಮುಸ್ಲಿಂ ಸಮುದಾಯ ಗುರಿಯಾಗಿಟ್ಟುಕೊಂಡು ವಕ್ಫ್ ತಿದ್ದುಪಡಿ ಮಸೂದೆ ಅಂಗೀಕರಿಸಿರುವುದು ಸಂವಿಧಾನ ಬಾಹಿರ ಎಂದು ಜವಾಹರ ಬಾಲ್ ಮಂಚ್ ಜಿಲ್ಲಾಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ಹೇಳಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ರಾಜಕೀಯ ಮಾಡುತ್ತಿದೆ. ಈ ಮೂಲಕ ಜನರಲ್ಲಿ ಗೊಂದಲದ ವಾತಾವರಣ ಸೃಷ್ಟಿಸಲಾಗುತ್ತಿದೆ. ವಕ್ಫ್ ಮಸೂದೆ ತಿದ್ದುಪಡಿ ಮಾಡಿ ಮೋದಿ ಸರ್ಕಾರವು ಸಾಂವಿಧಾನಿಕ ತತ್ವಗಳನ್ನು ಉಲ್ಲಂಘಿಸಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರವು ಹಲವಾರು ರಾಜಕೀಯ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದರೂ ಮಂಡನೆ ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಮುಸ್ಲಿಂ ವಿರೋಧಿ ಮಾತ್ರವಲ್ಲ, ಅಸಂವಿಧಾನಿಕ ಆಗಿದೆ. ಮುಸ್ಲಿಂ ಧರ್ಮದ ಮೇಲೆ ದಾಳಿ ನಡೆಸುತ್ತಲೇ ಬರುತ್ತಿರುವ ಬಿಜೆಪಿಯು ಈಗಲೂ ಮುಂದುವರಿಸಿದೆ. ಮುಂಬರುವ ದಿನಗಳಲ್ಲಿ ದೇಶದ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮುಸ್ಲಿಮರ ವಿರುದ್ಧ ದ್ವೇಷ ಹರಡುವ ಹುನ್ನಾರ ಇದು. ಬಹುಮತ ಇದೆ ಎಂಬ ಕಾರಣಕ್ಕೆ ಈ ರೀತಿಯ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಾಗೂ ಜಾತ್ಯಾತೀತ ರಾಷ್ಟ್ರದಲ್ಲಿ ಈ ರೀತಿಯ ರಾಜಕಾರಣ ಬಹಳಷ್ಟು ವರ್ಷ ನಡೆಯುವುದಿಲ್ಲ. ವಕ್ಫ್ ಮಸೂದೆಯನ್ನು ಜಾರಿಗೆ ತರುವ ಮೂಲಕ ಮುಸ್ಲಿಂ ಸಮುದಾಯವನ್ನು ವಿಭಜನೆ ಮಾಡಲು ಮತ್ತು ದಮನಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ದೇಶದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕದಡಬೇಡಿ. ಮುಸ್ಲಿಂರ ಆಸ್ತಿಗಳನ್ನು ಕಸಿದುಕೊಂಡು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿಯುವ ಹಾಗೂ ನಾಶ ಪಡಿಸುವ ಭಾಗವೇ ಹೊರತು ಬೇರೇನೂ ಅಲ್ಲ. ಅಲ್ಪಸಂಖ್ಯಾತರಿಗೆ ಯಾವುದೇ ಪ್ರಯೋಜನ ಆಗಲ್ಲ. ಸುಳ್ಳು ಹೇಳುತ್ತಾ ಅದನ್ನೇ ನಿಜ ಮಾಡುವ ಬಿಜೆಪಿಯು ಮತ್ತೊಂದು ಮಹಾ ಸುಳ್ಳು ದೇಶದಲ್ಲಿ ಹರಡುತ್ತಿದೆ ಎಂದು ಮೊಹಮ್ಮದ್ ಜಿಕ್ರಿಯಾ ಅವರು ಪತ್ರಿಕಾ ಹೇಳಿಕೆಯಲ್ಲಿ ಕಿಡಿಕಾರಿದ್ದಾರೆ.