SUDDIKSHANA KANNADA NEWS/ DAVANAGERE/ DATE:04-04-2025
ಬೆಂಗಳೂರು: ಅಭಿವೃದ್ಧಿಯ ಬಗ್ಗೆ ಪ್ರಶ್ನಿಸಿದರು ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದೆ ಕೊಲೆಗಡುಕ ಕಾಂಗ್ರೆಸ್ ಸರ್ಕಾರ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ, ಸಿಎಂ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರ, ಶಾಸಕ ಎ.ಎಸ್.ಪೊನ್ನಣ್ಣ ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಾರ್ವಜನಿಕವಾಗಿ ಪ್ರಶ್ನಿಸಿದರು ಎಂಬ ಕಾರಣಕ್ಕೆ ಅವರ ಮೇಲೆ ಇಲ್ಲಸಲ್ಲದ ಕೇಸು ಹಾಕಿ, ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಬಿಜೆಪಿ ಸೋಷಿಯಲ್ ಮೀಡಿಯಾದಲ್ಲಿ ಆರೋಪಿಸಿದೆ.
ವಿನಯ್ ಸೋಮಯ್ಯ ಅವರ ಸಾವಿಗೆ ಕಾರಣರಾದ ಎ.ಎಸ್.ಪೊನ್ನಣ್ಣ, ತೆನ್ನಿರಾ ಮೈನಾ, ಮಂಥರ್ ಗೌಡ ಅವರನ್ನು ಕೂಡಲೇ ಬಂಧಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ.
ಬಿಜೆಪಿ ಕಾರ್ಯಕರ್ತ ಕಚೇರಿಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ನಾಗವಾರದಲ್ಲಿ ನಡೆದಿತ್ತು.
ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ನೋವಿನ ಸಂಗತಿ. ಆತ್ಮಹತ್ಯೆ ಹಿನ್ನೆಲೆಯಲ್ಲಿ ಕೂಲಂಕುಶವಾಗಿ ಪಾರದರ್ಶಕ ತನಿಖೆ ನಡೆದು ಸತ್ಯ ಹೊರಬರಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದ್ದಾರೆ.
ರಾಜಕೀಯ ಕಾರಣಗಳು ಹಾಗೂ ಒತ್ತಡಗಳ ಹಿನ್ನೆಲೆಯಲ್ಲಿ ರಾಜಕೀಯ ಪ್ರೇರಿತ ಎಫ್ಐಆರ್ ನಿಂದಾಗಿ ವಿನಯ್ ಆತ್ಮಹತ್ಯೆಗೆ ಶರಣಾಗಿರಬಹುದಾದ ಸಾಧ್ಯತೆ ಮೇಲ್ನೋಟಕ್ಕೆ ಕಂಡು ಬರುತ್ತಿದ್ದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಕಾರ್ಯಕರ್ತರ ವಿರುದ್ಧ ಅನಗತ್ಯ ಕಿರುಕುಳ, ಒತ್ತಡ, ದೌರ್ಜನ್ಯಗಳು ನಡೆಯುತ್ತಿದ್ದು ಈ ನಿಟ್ಟಿನಲ್ಲಿ ವಿನಯ್ ಸೋಮಯ್ಯ ಅವರ ಆತ್ಮಹತ್ಯೆಯ ಪ್ರಕರಣದ ತನಿಖೆಯು ಅತ್ಯಂತ ಪಾರದರ್ಶಕವಾಗಿ ನಡೆಯಬೇಕೆಂದು ಬಿಜೆಪಿ ಒತ್ತಾಯಿಸುತ್ತದೆ ಎಂದಿದ್ದಾರೆ.
ವಿನಯ್ ಸೋಮಯ್ಯ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಮಾನಸಿಕ ಒತ್ತಡ ಉಂಟಾಗಲು ಕಾರಣರಾದವರ ವಿರುದ್ಧ ರಾಜ್ಯ ಸರ್ಕಾರ ಈ ಕೂಡಲೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುವೆ. ಮೃತ ಕಾರ್ಯಕರ್ತ ವಿನಯ್ ಅವರ ನಿಧನದ ನೋವಿನಲ್ಲಿರುವ ಕುಟುಂಬ ವರ್ಗದವರಿಗೆ ದುಃಖ ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ವಿನಯ್ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.