SUDDIKSHANA KANNADA NEWS/ DAVANAGERE/ DATE:23-11-2024
ಮೈಸೂರು: ವಿದ್ಯಾಸಿರಿ ಯೋಜನೆಯಡಿ ಒದಗಿಸುವ ವಿದ್ಯಾರ್ಥಿವೇತನವನ್ನು 1500 ರೂ.ಗಳನ್ನು ಮುಂದಿನ ವರ್ಷದಿಂದ ಎರಡು ಸಾವಿರಕ್ಕೆ ಏರಿಸಲಾಗುವುದು ಎಂದು ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಘೋಷಿಸಿದರು.
ಅವರು ಸಂತ ಶ್ರೀ ಕನಕದಾಸರ ಜಯಂತ್ಯುತ್ಸವ ಸಮಿತಿ, ಸಿದ್ದಾರ್ಥನಗರ, ಮೈಸೂರು ಇವರ ವತಿಯಿಂದ ಸಿದ್ದಾರ್ಥನಗರದ ಕನಕಭವನದಲ್ಲಿ ಆಯೋಜಿಸಿದ್ದ ‘ಶ್ರೀ ಭಕ್ತ ಕನಕದಾಸರ 537ನೇ ಜಯಂತ್ಯುತ್ಸವ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಜೀವನದ ಅನುಭವದಿಂದ ಮೂಡಿಬಂದ ಯೋಜನೆಗಳು ಈ ಕಾರ್ಯಕ್ರಮಗಳು ಜೀವನದ ಅನುಭವದಿಂದ ಮೂಡಿಬಂದಿದ್ದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಪ್ರೌಢಶಾಲೆಗೆ ಬರುವವರೆಗೂ ತಾವು ಚಪ್ಪಲಿಯನ್ನು ಹಾಕಿಕೊಳ್ಳುತ್ತಿರಲಿಲ್ಲ ಎಂದು ತಿಳಿಸಿದ ಮುಖ್ಯಮಂತ್ರಿಗಳು ಎಲ್ಲಾ ಶಾಲಾ ಮಕ್ಕಳು ಶೂ ಹಾಕಬೇಕೆಂದು ಶೂಭಾಗ್ಯ ಯೋಜನೆಯನ್ನು ಜಾರಿಗೆ ತರಲಾಯಿತು. ರಾಜ್ಯದಲ್ಲಿ ಹೆಚ್ಚುವರಿ ಹಾಲು ಉತ್ಪಾದನೆಯಾದ ಸಂದರ್ಭದಲ್ಲಿ ಶಾಲೆ ಮಕ್ಕಳಿಗೆ ಹಾಲು ಕೊಡಲಾಯಿತು. ಪ್ರಸ್ತುತ ವಾರದಲ್ಲಿ ಆರು ದಿನಗಳು ಶಾಲಾ ಮಕ್ಕಳಿಗೆ ಮೊಟ್ಟೆ ಕೊಡಲಾಗುತ್ತಿದೆ ಎಂದರು.
ಬಡವರಿಗೆ ಆರ್ಥಿಕವಾಗಿ ಸಾಮಾಜಿಕವಾಗಿ ಶಕ್ತಿ ತುಂಬಲು ಗ್ಯಾರಂಟಿ ಯೋಜನೆಗಳು ಜಾರಿ ಶಕ್ತಿ ಯೋಜನೆಯಡಿ ಎಲ್ಲಾ ಮಹಿಳೆಯರೂ ಉಚಿತವಾಗಿ ಬಸ್ಸುಗಳಲ್ಲಿ ಓಡಾಡುತ್ತಾರೆ. ಗೃಹ ಲಕ್ಷ್ಮೀ ಯೋಜನೆಯಡಿ 1.ಕೋಟಿ 22 ಲಕ್ಷ ಕುಟುಂಬಗಳ
ಮನೆ ಯಜಮಾನಿಗೆ ತಿಂಗಳಿಗೆ ಎರಡು ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿದೆ. ವರ್ಷಕ್ಕೆ 32 ಸಾವಿರ ಕೋಟಿ ಒದಗಿಸಲಾಗುತ್ತಿದೆ ಎಂದರು.
ಗೃಹಜ್ಯೋತಿ ಯೋಜನೆಯಡಿ 200 ಯುನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಬಡವರಿಗೆ ಆರ್ಥಿಕವಾಗಿ ಸಾಮಾಜಿಕವಾಗಿ ಶಕ್ತಿ ತುಂಬಲು ಈ ಯೋಜನೆಗಳು ಜಾರಿಯಾಗಿವೆ. ವರ್ಷಕ್ಕೆ 50-60 ಸಾವಿರ, ತಿಂಗಳಿಗೆ 4-5 ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿದೆ. ನಾನು ಹಳ್ಳಿಯಿಂದ ಬಂದು ನನ್ನ ಹಾಗೆ ಕಷ್ಟ ಪಡಬಾರದೆಂದು ಈ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಶಿಕ್ಷಣ ಹಾಗೂ ಪ್ರತಿಭೆ ಯಾರ ಸ್ವತ್ತಲ್ಲ:
ಶೇಕಡ 90ರಷ್ಟು ಅಂಕಗಳನ್ನು ಪಡೆಯುವುದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾತ್ರ ಸಾಧ್ಯ. ಅದಕ್ಕಾಗಿ ಅವರು ಸಾಕಷ್ಟು ಶ್ರಮವಹಿಸಿರುತ್ತಾರೆ. ನಾನು ಕೂಡಾ ಹತ್ತನೇ ತರಗತಿವರೆಗೆ ವಿದ್ಯಾವರ್ಧಕ ಶಾಲೆಯಲ್ಲಿ ಮೊದಲಿಗನಾಗಿದ್ದೆ. ನಂತರ ಪಿಯುಸಿ ತರಗತಿಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಆಯ್ದುಕೊಂಡಿದ್ದರಿಂದ ಸ್ವಲ್ಪ ಶ್ರಮ ವಹಿಸಬೇಕಾಯಿತು. ಪಿಯುಸಿ ಹಾಗೂ ಬಿ ಎಸ್ ಸಿ ಮತ್ತು ಲಾ ವ್ಯಾಸಂಗವನ್ನು ಸೆಕೆಂಡ್ ಕ್ಲಾಸಿನಲ್ಲಿ ಪಾಸ್ ಮಾಡಿದೆ. ಆದರೆ ವಿದ್ಯಾರ್ಥಿ ಜೀವನದಲ್ಲಿ ಒಮ್ಮೆಯೂ ಫೇಲ್ ಆಗಲಿಲ್ಲ ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು
ಪ್ರತಿದಿನ ಅಭ್ಯಾಸ ಮಾಡಲು ಸಲಹೆ:
ಶಿಕ್ಷಕರು ಮಾಡುವ ಪಾಠವನ್ನು ಆಯಾಯ ದಿನದಂದೇ ಅಭ್ಯಾಸ ಮಾಡಲು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಪ್ರತಿದಿನ ಐದಾರು ಗಂಟೆಗಳ ಕಾಲ ಅಭ್ಯಾಸ ಮಾಡಲು ಹೇಳಿದರು. ಶಿಕ್ಷಣ ಹಾಗೂ ಪ್ರತಿಭೆ ಯಾರ ಅಥವಾ ಯಾವ ಜಾತಿ ಸ್ವತ್ತು ಅಲ್ಲ. ವಿವೇಕಾನಂದರು ಹೇಳಿದಂತೆ ಸುಪ್ತವಾದ ಪ್ರತಿಭೆಯನ್ನು ವಿಕಸನಗೊಳಿಸುವುದೇ ಶಿಕ್ಷಣ ಎಂದರು.
ನೀತಿ ಮತ್ತು ಶಿಸ್ತು ರೂಢಿಸಿಕೊಳ್ಳುವುದೇ ನಿಜವಾದ ಶಿಕ್ಷಣ:
ಹಿಂದುಳಿದ ವರ್ಗಗಳು 2ಎ ಕೆಟಗರಿಗೆ ಸೇರುತ್ತವೆ ಆದರೆ ಇದನ್ನು ಮೀರಿ ಮೆರಿಟ್ ನಲ್ಲಿ ಅಂಕ ಗಳಿಸಿ ಸೀಟ್ ಪಡೆಯಲು ಪ್ರಯತ್ನಿಸಬೇಕು ಅದಕ್ಕಾಗಿ ಶ್ರಮವಹಿಸಬೇಕು. ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದಲ್ಲಿ ಅವರು ಹೆಚ್ಚು ಅಂಕಗಳನ್ನು ತೆಗೆಯಲು ಸಹಕಾರಿಯಾಗುತ್ತದೆ. ಜೀವನದಲ್ಲಿ ಮೇಲೆ ಬಂದ ಮೇಲೆ ನಡೆದು ಬಂದ ಹಾದಿಯನ್ನು ಮರೆಯಬಾರದು ಸಮಾಜದಲ್ಲಿ ತುಳಿತಕ್ಕೊಳಗಾದವರ ಅವಕಾಶ ವಂಚಿತರ ಸೇವೆ ಮಾಡಬೇಕು. ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಇವೆರಡರ ನಡುವಿನ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಶ್ವಮಾನವರಾಗಲು ಪ್ರಯತ್ನಿಸೋಣ:
ಕುವೆಂಪು ಹೇಳುತ್ತಾರೆ ‘ಹುಟ್ಟುವಾಗ ಎಲ್ಲರೂ ವಿಶ್ವಮಾನವರು ಬೆಳೆಯುತ್ತಾ ಬೆಳೆಯುತ್ತಾ ಜಾತಿ ಇತ್ಯಾದಿಗಳನ್ನು ರೂಢಿಸಿ ಕೊಂಡು ಅಲ್ಪಮಾನವರಾಗಿ ಬಿಡುತ್ತಾರೆ ನಾವು ವಿಶ್ವಮಾನವರಾಗಲು ಪ್ರಯತ್ನಿಸೋಣ. ಅಲ್ಪ ಮಾನವರಾಗುವುದು ಬೇಡ. ಸಮಾಜವನ್ನು ಸರ್ವಜನಾಂಗದ ಶಾಂತಿಯ ತೋಟ ಮಾಡೋಣ ಶಿಕ್ಷಣದ ಮೂಲ ಧ್ಯೇಯವು ಅದೇ ಎಂದರು.
1988ರಲ್ಲಿ 37 ವರ್ಷಗಳ ಹಿಂದೆ ನಾನು ಸಾರಿಗೆ ಮಂತ್ರಿಯಾಗಿದ್ದಾಗ ಕನಕದಾಸ ಜಯಂತಿಯ 500ನೇ ವರ್ಷಾಚರಣೆಯನ್ನು ಆಚರಿಸಲಾಯಿತು ಎಂದು ಸ್ಮರಿಸಿದ ಮುಖ್ಯಮಂತ್ರಿಗಳು, ಕನಕದಾಸರ ಒಬ್ಬ ಕವಿ, ಸಂತ, ದಾರ್ಶನಿಕ ಎಂದು ಜೀವನವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.
ಕನಕದಾಸರು ಹಿಂದುಳಿದ ಜಾತಿಗೆ ಸೇರಿದ್ದರಿಂದ ಅನೇಕ ಅಪಮಾನಗಳನ್ನು ಎದುರಿಸಬೇಕಾಯಿತು. ಅದನ್ನೆಲ್ಲಾ ಮೀರಿ ಅವರು ಸಂತರಾದ ಬಗೆಯನ್ನು ವಿದ್ಯಾರ್ಥಿಗಳಿಗೆ ಕತೆಗಳ ಮೂಲಕ ವಿವರಿಸಿದರು.
ಕನಕದಾಸರ ಪ್ರತಿಮೆ ಸ್ಥಾಪಿಸುವುದಾಗಿ ಭರವಸೆ:
ಕನಕದಾಸರ ಪ್ರತಿಮೆಯನ್ನು ಮೈಸೂರು ನಗರದಲ್ಲಿ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.