SUDDIKSHANA KANNADA NEWS/ DAVANAGERE/ DATE:02-02-2025
ದಾವಣಗೆರೆ: ನಾಲೆಯಲ್ಲಿ ಈಜಲು ಹೋದ ಬಾಲಕರು ಇಬ್ವರು ನೀರು ಪಾಲಾಗಿರುವ ಘಟನೆ ತಾಲೂಕಿನ ಕುರ್ಕಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಕುರ್ಕಿ ಗ್ರಾಮದ ಪಾಂಡು (16) , ತುರ್ಚಘಟ್ಟ ಗ್ರಾಮದ ಯತೀಂದ್ರ (16) ನೀರು ಪಾಲಾದ ಬಾಲಕರು. ದಾವಣಗೆರೆಯ ಗುರುಕುಲ ವಸತಿ ಶಾಲೆಯಲ್ಲಿ ಈ ಬಾಲಕರು ಎಸ್ಸೆಸ್ಸೆಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಭಾನುವಾರ ಶಾಲೆಗೆ ರಜೆ ಇದ್ದರಿಂದ ಕಟ್ಟಿಂಗ್ ಮಾಡಿಸಿಕೊಳ್ಳಲು ಇಬ್ವರು ಕುರ್ಕಿ ಗ್ರಾಮಕ್ಕೆ ಬಂದಿದ್ದಾರೆ.
ಗ್ರಾಮದ ಬಳಿ ಹರಿಯುತ್ತಿರುವ ದೊಡ್ಡದಾದ ಭದ್ರಾ ಕಾಲುವೆಯಲ್ಲಿ ಪಾಂಡು ಮತ್ತು ಯತೀಂದ್ರ ಈಜಲು ಬಂದಿದ್ದಾರೆ. ಪಾಂಡುಗೆ ಈಜಲು ಬರುತ್ತಿತ್ತು. ಯತೀಂದ್ರ ಈಜಲು ಬರುತ್ತಿರಲಿಲ್ಲ. ಮೊದಲು ಪಾಂಡು ಕಾಲುವೆಗೆ ಜಿಗಿದು ಈಜಾಡುತ್ತಿದ್ದ. ನಂತರ ಯತೀಂದ್ರ ಜಿಗಿದಿದ್ದಾನೆ. ಈ ವೇಳೆ ಯತೀಂದ್ರ ಮುಳುಗಿ ಏಳುತ್ತಿದ್ದಾಗ ಪಾಂಡು ಅವನನ್ನು ರಕ್ಷಣೆ ಮಾಡಲು ಬಂದಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ನೀರು ಪಾಲಾಗಿದ್ದಾರೆ ಎನ್ನಲಾಗಿದೆ.
ಈಜುತ್ತಿದ್ದ ಸಮೀಪವೇ ಗೇಟು ಇದ್ದು, ಈ ಗೇಟ್ ಬಳಿ ಪಾಂಡು ಮೃತದೇಹ ಪತ್ತೆಯಾಗಿದೆ. ಯತೀಂದ್ರನ ಮೃತದೇಹ ಸಿಕ್ಕಿಲ್ಲ. ಪಾಂಡು ಮೃತದೇಹ ಪತ್ತೆಯಾಗಿದ್ದು ಯತೀಂದ್ರನ ಮೃತದೇಹ ಹೊರ ತೆಗೆಯಲು ನುರಿತ ಈಜುಗಾರರು ಕಾರ್ಯಾಚರಣೆ ಮುಂದುವರಿಸಿದ್ದಾರೆ.