SUDDIKSHANA KANNADA NEWS/ DAVANAGERE/ DATE:31-10-2024
ದಾವಣಗೆರೆ: ಟ್ರ್ಯಾಕ್ಟರ್ ತೊಳೆಯಲು ಹೋಗಿ ಇಬ್ಬರು ನೀರುಪಾಲಾದ ಘಟನೆ ಹರಿಹರ ತಾಲೂಕಿನ ಗುತ್ತೂರು ಗ್ರಾಮ ಸಮೀಪದ ತುಂಗಾಭದ್ರಾ ನದಿಯಲ್ಲಿ ನಡೆದಿದೆ. ದೀಪಾವಳಿ ಅಮವಾಸ್ಯೆ ಮುನ್ನವೇ ಈ ದುರಂತ ಸಂಭವಿಸಿದೆ. ಹಬ್ಬದ ಸಂಭ್ರಮದಲ್ಲಿದ್ದ ಗುತ್ತೂರು ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಗುತ್ತೂರು ಗ್ರಾಮದ ಹನುಮಂತಪ್ಪ(56), ಪ್ರಶಾಂತ್(16) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಟ್ಯ್ರಾಕ್ಟರ್ ತೊಳೆಯಲು ಹೋಗಿದ್ದ ವೇಳೆ ಈ ಘಟನೆ ಸಂಭವಿಸಿದೆ.
ನೀರಿನಲ್ಲಿ ತೇಲುತ್ತಿದ್ದ ಬಕೆಟ್ ಹಿಡಿಯಲು ಹೋಗಿ ಮರಳು ಗುಂಡಿಗೆ ಬಿದ್ದ ಪ್ರಶಾಂತ್ ಅವರನ್ನು ರಕ್ಷಿಸಲು ಹೋದ ಹನುಮಂತಪ್ಪರೂ ನೀರಿನಲ್ಲಿ ಮುಳುಗಿದ್ದಾರೆ. ಇಬ್ಬರಿಗೂ ಈಜು ಬಾರದ ಕಾರಣ ಸಾವು ಕಂಡಿದ್ದಾರೆ ಎನ್ನಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ, ಪೊಲೀಸರು, ಸ್ಥಳೀಯರ ಸಹಕಾರದೊಂದಿಗೆ ಶವಗಳನ್ನು ಹೊರತೆಗೆಯಲಾಯಿತು.
ಸಾವಿನ ಸುದ್ದಿ ಕೇಳುತ್ತಿದ್ದಂತೆ ಸ್ನೇಹಿತರು, ಸಂಬಂಧಿಕರು, ಕುಟುಂಬದರು ಸ್ಥಳಕ್ಕೆ ಆಗಮಿಸಿದ್ದು, ಆಕ್ರಂದನ ಮುಗಿಲು ಮುಟ್ಟಿತ್ತು. ಈ ಸಂಬಂಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.