SUDDIKSHANA KANNADA NEWS/ DAVANAGERE/ DATE:07-04-2025
ದಾವಣಗೆರೆ: ಚನ್ನಗಿರಿ ತಾಲೂಕಿನಲ್ಲಿ ನಡೆದಿದ್ದ ಅಡಿಕೆ ಮರಕ್ಕೆ ಕಟ್ಟಿ ಕೆಂಪು ಇರುವೆ ಬಿಟ್ಟು ಬಾಲಕನಿಗೆ ಚಿತ್ರಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಆರೋಪಿಗಳನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ.
ಚನ್ನಗಿರಿ ತಾಲೂಕಿನ ಅಸ್ತಾಪನಹಳ್ಳಿಯ ಸುಭಾಷ್ (21), ಲಕ್ಕಿ (21), ದರ್ಶನ್ (22), ಪರಶು (23), ಶಿವದರ್ಶನ್ (20), ಹರೀಶ್ (25), ರಾಜು (25), ಭೋಣಿ (18), ಸುಧನ್ (32) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಮನೆಗೆ ನುಗ್ಗಿ ಕಳವು ಮಾಡಲು ಯತ್ನಿಸಿದ ಆರೋಪ ಎದುರಿಸುತ್ತಿದ್ದ ಬಾಲಕನನ್ನು ಅರೆಬೆತ್ತಲೆಗೊಳಿಸಿ ಅಡಿಕೆ ಮರಕ್ಕೆ ಕಟ್ಟಿ ಕೆಂಪು ಇರುವೆ ಬಿಟ್ಟು ಗ್ರಾಮದ ಕೆಲವರು ಕಿರುಕುಳ ನೀಡಿದ್ದರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಏಪ್ರಿಲ್ 2 ರಂದು ಈ ಘಟನೆ ನಡೆದಿದ್ದು ಗ್ರಾಮಸ್ಥರ ವರ್ತನೆಗೆ ಆಕ್ರೋಶವೂ ವ್ಯಕ್ತವಾಗಿತ್ತು.
ಬಾಲಕನಿಗೆ ಥಳಿಸುವ ಮತ್ತು ಕೆಂಪು ಇರುವೆ ಬಿಟ್ಟು ಚಿತ್ರಹಿಂಸೆ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿಯೂ ಹರಿದಾಡಿತ್ತು. ಬಾಲಕನ ಅಜ್ಜ ಚನ್ನಗಿರಿ ಪೊಲೀಸರಿಗೆ ದೂರು ಕೊಟ್ಟಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ವಿಡಿಯೋ ಆಧರಿಸಿ ಚಿತ್ರಹಿಂಸೆ ನೀಡಿದ್ದ 8 ಆರೋಪಿಗಳನ್ನು ಬಂಧಿಸಿದ್ದಾರೆ.