SUDDIKSHANA KANNADA NEWS/ DAVANAGERE/ DATE:24-02-2025
ದಾವಣಗೆರೆ: ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಅವರೇ ಬೀದಿಯಲ್ಲಿ ನಿಂತು ಮಾತನಾಡುವ ಸಂಪ್ರದಾಯ ಹುಟ್ಟುಹಾಕಿದ ಪಿತಾಮಹ ಎಂದು ಹೊನ್ನಾಳಿ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೊನ್ನಾಳಿ ಬಿಜೆಪಿ ಮುಖಂಡರಾದ ಶಾಂತರಾಜ್ ಪಾಟೀಲ್ ಹಾಗೂ ಎ. ಬಿ. ಹನುಮಂತಪ್ಪ ಅವರು ದಾವಣಗೆರೆಯಲ್ಲಿ ಮಾತನಾಡಿದ್ದ ರೇಣುಕಾಚಾರ್ಯ ಅವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕುಮಾರ್ ಬಂಗಾರಪ್ಪರ ವಿರುದ್ಧ ವೀರಾವೇಶದಿಂದ ಮಾತನಾಡಿರುವುದು ವ್ಯಕ್ತಿತ್ವಕ್ಕೆ ತರವಾದುದ್ದಲ್ಲ. ಬಿಜೆಪಿಯಲ್ಲಿ ರೇಣುಕಾಚಾರ್ಯ ಮೊದಲನೆ ಬಾರಿ ಶಾಸಕರಾಗಿದ್ದಾಗ ಜೆಡಿಎಸ್ – ಬಿಜೆಪಿ ಸಮ್ಮಿಶ್ರ ಸರ್ಕಾರ ಇತ್ತು. ಆಗ ಶಾಸಕರಾಗಿದ್ದ ರೇಣುಕಾಚಾರ್ಯ ಬೀದಿಗೆ ಬಂದು ಮಾತನಾಡುವ ಸಂಸ್ಕೃತಿಯನ್ನು ಇಡೀ ದೇಶಕ್ಕೆ ನಾಂದಿಯಾಡಿ ಕಲಿಸಿಕೊಟ್ಟಂತಹ ಪಿತಾಮಹ ಎಂದು ಕಿಡಿಕಾರಿದರು.
ನಿಷ್ಠಾವಂತನಂತೆ ಮುಖವಾಡ ಹಾಕಿಕೊಂಡು ದಿನಕ್ಕೊಂದು ಹೇಳಿಕೆಯನ್ನು ಕೊಟ್ಟು ರಾಜ್ಯದಲ್ಲಿ ಅರಾಜಕತೆಯ ವರ್ಣರಂಜಿತ ರಾಜಕಾರಣಿ ಎಂದು ಹೆಸರುವಾಸಿಯಾಗಿದ್ದಾರೆ. ಯಡಿಯೂರಪ್ಪ ಮತ್ತವರ ಮಕ್ಕಳ ಬಯಲು ಮಾಡುತ್ತೇನೆಂಬ ಹೇಳಿಕೆ ನೀಡಿದ್ದ ರೇಣುಕಾಚಾರ್ಯ ಈಗ ಮರೆತಿರಬಹುದು. ರಾಜ್ಯದ ಜನರು ಮತ್ತು ಬಿಜೆಪಿ ಮುಖಂಡರು, ಕಾರ್ಯಕರ್ತರು ಮರೆತಿಲ್ಲ. ಬಿಜೆಪಿಯಲ್ಲಿ ಇವತ್ತು ನ್ಯಾಯ ಕೇಳುವವರಿಗೆ ಭಿನ್ನಮತಿಯರು ಎಂದು ಹೇಳುವ ನೀವು ಭಿನ್ನಮತ ಮಾಡಿಯೇ ರಾಜ್ಯದಲ್ಲಿ ಪ್ರಚಾರ ಪ್ರಿಯರಾಗಿದ್ದೀರಿ. ರಾಷ್ಟ್ರೀಯ ನಾಯಕರ ಬಗ್ಗೆ ಅನನ್ಯ ಗೌರವ ಇಟ್ಟುಕೊಂಡು ಮಾತನಾಡುವ ನೀವು ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ಹೇಳಿದರೆ ಮತ ಹಾಕಲ್ಲ ಎಂದವರೂ ನೀವೇ ಅಲ್ಲವೇ ಎಂದು
ಪ್ರಶ್ನಿಸಿದರು.
ಪಂಚಾಯತ್ ಸದಸ್ಯರು ಆಗದೇ ಇರುವವರು ದೆಹಲಿಯಲ್ಲಿ ಕುಳಿತು ‘ಜಿ’ ಸಂಸ್ಕೃತಿಯಿಂದ ಬೋಧನೆ ಮಾಡುತ್ತಾರೆ ಎಂದಿದ್ದ ರೇಣುಕಾಚಾರ್ಯ ಬಿಜೆಪಿ ಕರ್ನಾಟಕದಲ್ಲಿ ಸರ್ವನಾಶವಾಗಲಿದೆ ಎಂದಿದ್ದರು. ಈಗ ಮಾತನಾಡುತ್ತಿರುವುದನ್ನು
ನೋಡಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತಾಗಿದೆ. ರಾಷ್ಟ್ರೀಯ ಶಿಸ್ತು ಪಾಲನಾ ಸಮಿತಿಯ ಪ್ರಮುಖರು ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕೊಟ್ಟ ನೋಟೀಸ್ ಬಗ್ಗೆ ಉತ್ತರ ಕೊಟ್ಟಿಲ್ಲ, ಕೊಡುವುದಿಲ್ಲವೆಂದು ಕದ್ದು ಮುಚ್ಚಿ ಉತ್ತರ ಕೊಟ್ಟಿದ್ದಾರೆ ಎಂದಿರುವ ರೇಣುಕಾಚಾರ್ಯ ಅವರು ಸುಳ್ಳು ಹೇಳಿಕೊಂಡು ಓಡಾಡವುದು ಸರಿಯಲ್ಲ ಎಂದು ಹೇಳಿದರು.
ಇದೇ ರೇಣುಕಾಚಾರ್ಯ ಅವರಿಗೆ ಬಹಿರಂಗವಾಗಿ ಮಾತನಾಡಿದ್ದಕ್ಕೆ ರಾಜ್ಯ ಶಿಸ್ತು ಪಾಲನಾ ಸಮಿತಿ ನೊಟೀಸ್ ಜಾರಿ ಮಾಡಿತ್ತು. ಆಗ ಯಾವ ರೀತಿ ಹೇಳಿಕೆ ನೀಡಿದ್ದರು ಎಂಬುದು ನಮಗೂ ಗೊತ್ತು. ಹಿಂದುಳಿದ ನಾಯಕ, ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಮಗ, ಮಾಜಿ ಸಚಿವ ಕುಮಾರ್ ಬಂಗಾರಪ್ಪನವರ ಬಗ್ಗೆ ರಾಜಕಾರಣದ ಅನಾಥ ಶಿಶು ಎಂದು ಹೇಳಿಕೆ ನೀಡಿರುವುದು ಅಕ್ಷಮ್ಯ ಅಪರಾಧ ಎಂದು ಕಿಡಿಕಾರಿದರು.
2004ರ ಹೊನ್ನಾಳಿ ವಿಧಾನಸಭೆ ಚುನಾವಣೆ ನಡೆದಾಗ ಬಂಗಾರಪ್ಪರು ಬಿಜೆಪಿ ಸೇರಿದ್ದರು. ಹೊನ್ನಾಳಿಯ ವಿಧಾನಸಭಾ ಕ್ಷೇತ್ರಕ್ಕೆ ಪ್ರಚಾರಕ್ಕೆ ಆಗಮಿಸಿ ರೇಣುಕಾಚಾರ್ಯ ಪರ ಮತಯಾಚಿಸಿದ್ದರು. ಇಲ್ಲದಿದ್ದರೆ ಶಾಸಕರಾಗುತ್ತಿರಲಿಲ್ಲ. ಬೇರೆಯವರ ಬಗ್ಗೆ ಮಾತನಾಡಬೇಕಾದರೆ ನಾಲಿಗೆ ಶುದ್ಧವಾಗಿರಬೇಕು. ರಾಜ್ಯಾಧ್ಯಕ್ಷ ವಿಜಯೇಂದ್ರರ ಭಜನೆ ಮಾಡುವ ನೀವು ಈ ಹಿಂದೆ ಅವರ ಕುಟುಂಬದ ಬಗ್ಗೆ ಮಾತನಾಡಿದ್ದನ್ನು ಅವರು ಮರೆತಿರಬಹುದು. ನಿಜವಾದ ಯಡಿಯೂರಪ್ಪನವರ ಅಭಿಮಾನಿಗಳಾದ ನಾವು ಮರೆತಿಲ್ಲ. ಬಿಜೆಪಿಗೆ ಕಳಂಕವಾಗಿರುವ ರೇಣುಕಾಚಾರ್ಯ ಅವರನ್ನು ಹದ್ದುಬಸ್ತಿನಲ್ಲಿ ವಿಜಯೇಂದ್ರ ಅವರು ಇಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿಯಿಂದ ರೇಣುಕಾಚಾರ್ಯ ಅವರನ್ನು ಹೊರ ಹಾಕಿ. ಇಲ್ಲದಿದ್ದರೆ ಜಿಲ್ಲೆಯ ಕಾಂಗ್ರೆಸ್ ಜೊತೆಗೆ ಶಾಮೀಲಾಗಿ ಮುಂಬರುವ ವಿಧಾನಸಭೆ ಚುನಾವಣಎಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲ್ಲಿಸುವ ಬಗ್ಗೆ ಇವರ ಷಡ್ಯಂತ್ರ ಹುನ್ನಾರ ಈಗಲೇ ಅರ್ಥಮಾಡಿಕೊಳ್ಳಬೇಕಿದೆ. ಇಲ್ಲದಿದ್ದರೆ ಬಿಜೆಪಿಗೆ ನಷ್ಟವಾಗಲಿದೆ ಎಂದು ಎಚ್ಚರಿಕೆ ನೀಡಿದರು.