ದಾವಣಗೆರೆ: ರಾಜ್ಯ ಮಹಿಳಾ ನಿಲಯದ ಮೂವರು ಯುವತಿಯರ ವಿವಾಹ ಮಹೋತ್ಸವವು ಅದ್ಧೂರಿಯಾಗಿ ನೆರವೇರಿತು.
READ ALSO THIS STORY: ಚಿನ್ನದ ಬೆಲೆ ಗಗನಕ್ಕೆೇರಿದ್ದರಿಂದ ಕಳ್ಳರಿಂದ ತಪ್ಪಿಸಿಕೊಳ್ಳಲು ಪೊಲೀಸರ ಈ ಸೂಚನೆಗಳ ಪಾಲಿಸಿದರೆ ಸಾಕು!
ಮೂವರು ಮಹಿಳಾ ನಿವಾಸಿಗಳಾದ ಶಾಲಿನಿ 28 ವರ್ಷ, ರಕ್ಷಿತಾ.ಟಿ 21 ವರ್ಷ, ಮತ್ತು 24 ವರ್ಷದ ರುಚಿತ.ಎ ಸೇರಿದಂತೆ ಮೂವರು ಯುವತಿಯರಿಗೆ ಬದುಕು ಕಟ್ಟಿಕೊಡಲು ಮೂವರು ಯುವಕರು ಮುಂದಾಗಿದ್ದು, ಮೂವರು ನೂತನ ವಧು, ವರರ ವಿವಾಹ ಮಹೋತ್ಸವ ಸಮಾರಂಭಕ್ಕೆ ಮಹಿಳಾ ನಿಲಯ ಸಾಕ್ಷಿಯಾಯಿತು.
ವಿವಾಹಕ್ಕಾಗಿ ಶ್ರೀ ರಾಮನಗರದಲ್ಲಿರುವ ಮಹಿಳಾ ನಿಲಯವು ತಳಿರು ತೋರಣದಿಂದ ರಂಗೋಲಿಯಿಂದ ಕಂಗೊಳಿಸುತ್ತಿತ್ತು. ನಿಲಯದ ತುಂಬೆಲ್ಲ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಮಹಿಳಾ ನಿಲಯದ ನಿವಾಸಿಗಳು, ಅವರ ಬಂಧುಗಳು ರೇಷ್ಮೆ ಸೀರೆಯುಟ್ಟು ಮದುವೆಯ ಮನೆ ತುಂಬ ತರಾತುರಿಯಲ್ಲಿ ಓಡಾಡುತ್ತಾ ಸಂಭ್ರಮದಿಂದ ಮದುವೆಯಾಚರಣೆಯ ಸಿದ್ದತೆಯಲ್ಲಿ ತೊಡಗಿದ್ದ ದೃಶ್ಯ ಕಂಡು ಬಂದಿತು.
ಮದುವೆ ಚಪ್ಪರ, ಸ್ವಾಗತ ದ್ವಾರ ನಿರ್ಮಿಸಲಾಗಿತ್ತು. ಆಮಂತ್ರಿತರಿಗೆ ಗುಲಾಬಿ ಹೂ ನೀಡುವುದರೊಂದಿಗೆ ಸ್ವಾಗತಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕ ರಾಜಾನಾಯ್ಕ ಅವರ ಸಂಪೂರ್ಣ ಮೇಲುಸ್ತುವಾರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವಿವಿಧ ಘಟಕಗಳು, ಮಹಿಳಾ ನಿಲಯದ ಅಧಿಕಾರಿ, ಸಿಬ್ಬಂದಿಗಳು ತಮ್ಮ ಸ್ವಂತ ಮಕ್ಕಳ ಮದುವೆ ಸಮಾರಂಭವೆಂಬಂತೆ ಅಚ್ಚುಕಟ್ಟಾಗಿ ಮತ್ತು ಸಂಭ್ರಮದಿಂದ ಈ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದರು.
ಶ್ರೀ ರಾಮನಗರದ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ರಾಜ್ಯ ಮಹಿಳಾ ನಿಲಯದ ನಿವಾಸಿಗಳಾದ ಶಾಲಿನಿ ಇವರೊಂದಿಗೆ ನಾಗರಾಜ, ಇಬ್ಬರಿಬ್ಬರೂ ಶ್ರವಣ ಹಾಗೂ ವಾಕ್ ದೋಷವುಳ್ಳವರಾಗಿರುತ್ತಾರೆ. ರಕ್ಷಿತಾ.ಟಿ ಇವರೊಂದಿಗೆ ಬಸವರಾಜ್, ರುಚಿತ ಇವರೊಂದಿಗೆ ಪ್ರವೀಣ ಇವರ ವಿವಾಹ ಮಹೋತ್ಸವವು ಅ.31 ರಂದು ಬೆಳಿಗ್ಗೆ 7.30 ರಿಂದ 10.30 ರವರೆಗೆ ದಾವಣಗೆರೆಯ ರಾಜ್ಯ ಮಹಿಳಾ ನಿಲಯದಲ್ಲಿ ಸಂಭ್ರಮಾಚರಣೆಯಿಂದ ನೆರವೇರಿತು.
ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಮಾರ್ಗದರ್ಶನದಲ್ಲಿ ಇಂದು ಮಹಿಳಾ ನಿಲಯದ ಶಾಲಿನಿ, ರಕ್ಷಿತಾ.ಟಿ, ಮತ್ತು ರುಚಿತ.ಎ ಎಂಬ ನಮ್ಮ ಮೂವರು ಹೆಣ್ಣು ಮಕ್ಕಳಿಗೆ ಧಾರೆ ಎರೆದು ಕೊಟ್ಟಿರುವುದು ಬಹಳಷ್ಟು ಅರ್ಥ ಪೂರ್ಣವಾದ ಕಾರ್ಯ. ಶಾಶ್ವತವಾಗಿ ನೆನಪಿಟ್ಟುಕೊಳ್ಳುವ ಸಂಭ್ರಮವಾಗಿದೆ ಎಂದರು.
ರಾಜ್ಯ ಮಹಿಳಾ ನಿಲಯ ಸಂಸ್ಥೆಯಲ್ಲಿ ಈಗ ಹಾಲಿ 45 ನಿವಾಸಿಗಳು ಇದ್ದು, ಇಲ್ಲಿಯವರೆಗೆ ಸಂಸ್ಥೆಯಲ್ಲಿ 46 ವಿವಾಹವನ್ನು ಇಲಾಖೆಯ ನಿಯಮಾನುಸಾರ ವರದಿ ಪಡೆದುಕೊಂಡಿರುತ್ತಾರೆ. ಈ ಹಿಂದೆ ನಡೆದ ವಿವಾಹ ಮಹಿಳೆಯರು ತಮ್ಮ ಸಂಸಾರದೊಂದಿಗೆ ಸುಖ ಜೀವನವನ್ನು ನಡೆಸುತ್ತಿದ್ದಾರೆ.
ಈ ಶುಭ ಸಂದರ್ಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ವೇಲಾ ಡಿ.ಕೆ, ನ್ಯಾಯಾಧೀಶರು ಹಾಗೂ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ, ಜಿಲ್ಲಾ ಪಂಚಾಯತ್ ಸಿಇಓ ಗಿತ್ತೆ ಮಾಧವ್ ವಿಠ್ಠಲರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಡಿಹೆಚ್‌ಓ ಡಾ ಷಣ್ಮುಖಪ್ಪ, ಮಹಿಳಾ ನಿಲಯದ ಅಧೀಕ್ಷಕಿ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ನೂರಾರು ಮಂದಿ ಆಶೀರ್ವದಿಸಿದರು. ಆಮಂತ್ರಿತರು ವಧು ವರರಿಗೆ ಉಡುಗೊರೆಗಳನ್ನು ನೀಡಿ ಹರಿಸಿದರು.


