SUDDIKSHANA KANNADA NEWS/ DAVANAGERE/ DATE:23-03-2025
ದಾವಣಗೆರೆ: ಸಮಾಜದ ದುಡ್ಡು ದುರ್ಬಳಕೆ ಮಾಡಿಕೊಳ್ಳುವವರು ಎಂದಿಗೂ ಉದ್ದಾರವಾಗಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ ಅವರು ತಿಳಿಸಿದರು.
ದಾವಣಗೆರೆ ನಗರದ ಹಳೇ ಪಿಬಿ ರಸ್ತೆಯಲ್ಲಿನ ಖಬರಸ್ಥಾನದಲ್ಲಿ 25 ಲಕ್ಷ ಮೌಲ್ಯದ ವಜುಖಾನ ನಿರ್ಮಾಣದ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಇಲ್ಲಿನ ಖಬರಸ್ತಾನದ ಮುಂದೆ ನಮಾಜ್ ಮಾಡಲು ಉತ್ತಮವಾದ ಸಿಸಿ ರಸ್ತೆ ನಿರ್ಮಿಸಲಾಗಿದೆ. ಖವರಸ್ಥಾನದ ಅಭಿವೃದ್ದಿಗಾಗಿ 2005 ಹಾಗೂ 2013 ರಲ್ಲಿ ಸಭೆ ಹಾಗೂ ಚರ್ಚೆ ನಡೆಸಲಾಗಿತ್ತು. ಆದರೆ ನೆನೆಗುದಿಗೆ ಬಿದ್ದಿದ್ದ ಖಬರಸ್ಥಾನ ಅಭಿವೃದ್ದಿಗೆ 25 ವರ್ಷಗಳ ಬಳಿಕ ಕಾಂಗ್ರೆಸ್ ಸಂಸದರು ಬರಬೇಕಾಯಿತು. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಮುಸ್ಲಿಂ ಸಮುದಾಯದವರ ಪಾತ್ರ ಹೆಚ್ಚಾಗಿದ್ದು ಕೊಟ್ಟ ಮಾತಿನಂತೆ ಖಬರಸ್ಥಾನಕ್ಕೆ 25 ಲಕ್ಷ ರೂ. ಅಭಿವೃದ್ಧಿ ಕಾಮಗಾರಿಗೆ ಮೀಸಲಿರಿಸಲಾಗಿದೆ. ಬಂಧುಗಳ ಕೋರಿಕೆಯಂತೆ ಇನ್ನು 25 ಲಕ್ಷ ಅನುದಾನ ಕೊಡಿಸಲು ಸಿದ್ದ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಅಲ್ಪ ಸಂಖ್ಯಾತರ ಅಭಿವೃದ್ಧಿಯು ಅಗತ್ಯವಾಗಿದೆ. ಉದ್ಯೋಗ, ಶಿಕ್ಷಣ ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಾಗಿದೆ. ನಮ್ಮ ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಅವರ ನೇತೃತ್ತದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇದಲ್ಲದೆ ಬಾತಿ ಗ್ರಾಮದಲ್ಲಿನ ದರ್ಗಾವನ್ನು 3 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ನಿಟುವಳ್ಳಿಯ ದರ್ಗಾವನ್ನು ಅಭಿವೃದ್ಧಿಪಡಿಸಲಾಗುವುದು. ಸಮಾಜದ ದುಡ್ಡು ಯಾರೇ ಹೊಡೆದರೂ ಉದ್ದಾರ ಆಗಲ್ಲ. ಸಮಾಜದ ದುಡ್ಡು ಸಮಾಜಕ್ಕೆ ಮೀಸಲಿಟ್ಟರೆ ಅಭಿವೃದ್ಧಿ ಸಾಧ್ಯ ಎಂದು ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ತಂಜುಮುಲ್ ಮುಸ್ಲಿಂಮೀನ್ ಫಂಡ್ ಅಸೋಸಿಯೇಷನ್ ಅಧ್ಯಕ್ಷ ಜನಾಬ್ ಶೇಕ್ ದಾದಾಪೀರ್, ಮಾಜಿ ಮೇಯರ್ ಕೆ.ಚಮನ್ ಸಾಬ್, ಮಾಜಿ ಸದಸ್ಯರಾದ ಎ.ಬಿ ರಹೀಂ ಸಾಬ್, ಹರಿಹರದ ಕಾಂಗ್ರೆಸ್ ಪಕ್ಷದ ಮುಖಂಡ ನಂದಿಗಾವಿ ಶ್ರೀನಿವಾಸ್, ಮೌಲಾನ ಮಹಮ್ಮದ್ ಅಲಿಸಾಬ್, ಅಲ್ಲಮಾನ್ ನಿರಾಜ್, ಖಾದ್ರಿಸಾಬ್, ಮಸೀದ್ ಮೌಲಾನ, ನಜೀರ್ ಸಾಬ್, ಖಜಾಂಚಿ ಶಂಶುದ್ದಿನ್ ಸೇರಿದಂತೆ ತಂಜೀಮುಲ್ ಮುಸ್ಲಿಮೀನ್ ಫಂಡ್ ಅಸೋಸಿಯೇಷನ್ ನ ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು ಇತರರು ಉಪಸ್ಥಿತರಿದ್ದರು.