SUDDIKSHANA KANNADA NEWS/ DAVANAGERE/ DATE-03-06-2025
ಬೆಂಗಳೂರು: ಕರ್ನಾಟಕದ ಹಿಂದೂಗಳನ್ನು ಹಾಗೂ ಹಿಂದೂ ಪರ ಹೋರಾಟಗಾರರನ್ನು ತೃತಿಯ ದರ್ಜೆ ನಾಗರಿಕರಂತೆ ಕಾಣುತ್ತಿದೆ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಎಂದು ಬಿಜೆಪಿ ಕೆಂಡಕಾರಿದೆ.
ಹಿಂದೂಗಳನ್ನು ಹತ್ಯೆ ಮಾಡಲು ಸಂಚು ಮಾಡುವವರನ್ನು ರಾಜಾರೋಷವಾಗಿ ತಿರುಗಾಡಲು ಬಿಟ್ಟು, ಹಿಂದೂಗಳ ಹತ್ಯೆ ವಿರೋಧಿಸಿ ದನಿ ಎತ್ತಿದ ಹಿಂದೂ ಮುಖಂಡರು ಹಾಗೂ ಹಿಂದೂಪರ ಹೋರಾಟಗಾರರನ್ನು ಗಡಿಪಾರು ಮಾಡಿ, ತಮ್ಮ ಹಿಂದೂ ವಿರೋಧಿ ಮನಸ್ಥಿತಿಯನ್ನು ಪ್ರದರ್ಶಿಸುತ್ತಿದೆ ಎಂದು ದೂರಿದೆ.
ಸರ್ವಜನಾಂಗದ ಶಾಂತಿಯ ತೋಟ ಎಂದು ಬುರುಡೆ ಬಿಡುತ್ತಾ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಅಧಿಕಾರಕ್ಕೇರಿದ ಬಳಿಕ ಕರ್ನಾಟಕವನ್ನು ತನ್ನ ಹಿಂದೂ ವಿರೋಧಿ ರಾಜಕಾರಣಕ್ಕೆ ಮೀಸಲಿರಿಸಿದೆ ಎಂದು ಆರೋಪಿಸಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ತತಕ್ಷಣವೇ ಕೋಲಾರ, ಶಿವಮೊಗ್ಗದಲ್ಲಿ ತಲ್ವಾರ್ ಮಾದರಿಯ ಕಟೌಟ್‌ಗಳು ಹಾಗೂ ಮತಾಂಧ ಔರಂಗಜೇಬನ ಕಟೌಟ್‌ಗಳನ್ನು ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಹಾಕಲಾಯಿತು. ಶಿವಮೊಗ್ಗದ ರಾಗಿಗುಡ್ಡದಲ್ಲಿ ಹಿಂದೂಗಳ ಮನೆಗಳನ್ನು ಗುರಿಯಾಗಿಸಿಕೊಂಡು ಕಲ್ಲು ಎಸೆದು ಕೋಮುಗಲಭೆ ಸೃಷ್ಟಿಸಲಾಗಿತ್ತು. ತಮ್ಮ ನೋವು ಹಾಗೂ ಆಕ್ರೋಶವನ್ನು ಗಟ್ಟಿಧ್ವನಿಯಲ್ಲಿ ಹಿಂದೂ ಕಾರ್ಯಕರ್ತರು ತಮ್ಮ ಭಾಷಣಗಳ ಮೂಲಕ ಹೊರ ಹಾಕಿದರೆ, ಅದನ್ನು ಪ್ರಚೋದನೆ ಎಂದು ಹೇಳಿ ಹಿಂದೂ ಕಾರ್ಯಕರ್ತರ ಮೇಲೆ ಎಫ್.ಐ.ಆರ್ ಹಾಕುವ ಕಾಂಗ್ರೆಸ್ ಸರ್ಕಾರ, ಅಮಾಯಕ ಹಿಂದೂ ಯುವಕರ ಕಗ್ಗೊಲೆ ನಡೆಸುವ ಮತಾಂಧರನ್ನು ಬಂಧಿಸಲು ಮಾತ್ರ ಹಿಂದೇಟು ಹಾಕುತ್ತದೆ ಎಂದು ಕಿಡಿಕಾರಿದೆ.
ಮಂಡ್ಯದ ಕೆರೆಗೋಡಿನಲ್ಲಿ ಧ್ವಜ ವಿವಾದ, ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಗಲಾಟೆ, ಹೀಗೆ ಹಿಂದೂಗಳ ಭಕ್ತಿ ಮತ್ತು ನಂಬಿಕೆಗಳ ಸಾಲು ಸಾಲು ಆಚರಣೆಗೆ ಅಡ್ಡಿಪಡಿಸಿದ ಮತಾಂಧ ಜಿಹಾದಿಗಳೆಲ್ಲರನ್ನು ಹಾಯಾಗಿ ತಿರುಗಲು ಬಿಟ್ಟು,
ಹಿಂದೂಗಳ ಮೇಲೆ ಮಾತ್ರ ಕೇಸು ಹಾಕಿ, ಅವರನ್ನು ಕೋರ್ಟು, ಕಚೇರಿಯನ್ನು ಸುತ್ತಿಸುತ್ತಿದೆ ಈ ಭಂಡ ಕಾಂಗ್ರೆಸ್ ಸರ್ಕಾರ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಹಿಂದೂ ಮುಖಂಡರನ್ನು ಗುರಿಯಾಗಿಸಿಕೊಂಡು ಗಡಿಪಾರು ಪಟ್ಟಿ ಸಿದ್ದಪಡಿಸಿರುವುದು ಸಹ ಸಂವಿಧಾನ ವಿರೋಧಿ ನೀತಿ. ಆ ಹಿಂದೂ ಮುಖಂಡರುಗಳಿಗೆ ತಮ್ಮ ಸ್ವಂತ ಜಿಲ್ಲೆಯಲ್ಲಿ ಜೀವಿಸುವ ಹಕ್ಕಿಲ್ಲವೇ..? ಎಂದು ಪ್ರಶ್ನಿಸಿದೆ.
ರೋಹಿಂಗ್ಯಾಗಳನ್ನು, ಭಾರತಕ್ಕೆ ಬರುವ ಅಕ್ರಮ ಬಾಂಗ್ಲಾ ನುಸುಳುಕೋರರನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಿಎಎ-ಎನ್.ಆರ್.ಸಿ ಜಾರಿ ಮಾಡಲು ಮುಂದಾದರೆ, ಇದು ಮತ್ತೊಬ್ಬರ ಜೀವಿಸುವ ಹಕ್ಕನ್ನು ಕಸಿಯುವ ಪ್ರಯತ್ನ
ಎಂದು ಬೊಗಳೆ ಭಾಷಣ ಮಾಡುವ ಕಾಂಗ್ರೆಸ್ಸಿಗರು, ಈಗ ಹಿಂದೂ ಮುಖಂಡರ ಜೀವಿಸುವ ಹಕ್ಕನ್ನು ಗಡಿಪಾರಿನ ಮೂಲಕ ಕಸಿಯಲು ಮುಂದಾಗಿರುವುದು ಎಷ್ಟರ ಮಟ್ಟಿಗೆ ಸರಿ..?
ಸಿಎಂ ಸಿದ್ದರಾಮಯ್ಯ ಅವರೆ, ನಿಮಗೆ ನಿಜಕ್ಕೂ ಗಡಿಪಾರಿನ ಮೇಲೆ ಆಸೆ ಇದ್ದರೆ, ನಿಮ್ಮ ಮನಸ್ಸಿನೊಳಗಿನ ಓಲೈಕೆ ರಾಜಕಾರಣವನ್ನು ಗಡಿಪಾರು ಮಾಡಿ, ನಿಮ್ಮ ಮನಸ್ಸಿನೊಳಗಿನ ಹಿಂದೂ ವಿರೋಧಿ ಮನಸ್ಥಿತಿಯನ್ನು ಗಡಿಪಾರು ಮಾಡಿ, ನಿಮ್ಮ ಮನದೊಳಗಿನ ದ್ವೇಷ ರಾಜಕಾರಣವನ್ನು ಗಡಿಪಾರು ಮಾಡಿ.ಅಧಿಕಾರವಿದೆ ಎಂದು ಹಿಂದೂಗಳ ಮೇಲೆ ದರ್ಪ ತೋರಬೇಡಿ. ಹಿಂದೂಗಳು ಮುನಿದರೆ ಎಂತಹ ಸ್ಥಿತಿ ನಿರ್ಮಾಣವಾಗುತ್ತದೆ ಎಂಬುದಕ್ಕೆ 2018ರ ಚುನಾವಣೆಯಲ್ಲಿ ಚಾಮುಂಡೇಶ್ವರಿಯಲ್ಲಿ ನಿಮ್ಮ ಹೀನಾಯ ಸೋಲೇ ಸಾಕ್ಷಿ. ರಾಜಕೀಯ ಜೀವನದ ಸಂಧ್ಯಾಕಾಲದಲ್ಲಿರುವ ನೀವು ಈಗಲಾದರೂ, ಓಲೈಕೆ ರಾಜಕಾರಣವನ್ನು ಬದಿಗಿಟ್ಟು, ಹಿಂದೂ ವಿರೋಧಿ ರಾಜಕಾರಣಕ್ಕೆ ಇತಿಶ್ರಿ ಹಾಡಿ, ಜನಪರ ಆಡಳಿತ ನೀಡಿ ಎಂದು ಒತ್ತಾಯಿಸಿದೆ.