SUDDIKSHANA KANNADA NEWS/ DAVANAGERE/ DATE:14-04-2025
ದಾವಣಗೆರೆ: ಜಿಲ್ಲೆಯಲ್ಲಿ ಅನೇಕ ಕಡೆ ಡಾ; ಬಿ.ಆರ್.ಅಂಬೇಡ್ಕರ್ ಭವನಗಳಿದ್ದರೂ ಜಿಲ್ಲಾ ಮಟ್ಟದಲ್ಲಿ ಭವನ ನಿರ್ಮಾಣ ಮಾಡಲು 25 ವರ್ಷಗಳ ಹಿಂದೆ ಪ್ರಯತ್ನಿಸಿದರೂ ಸಾಕಾರಗೊಂಡಿರಲಿಲ್ಲ. ಇಂದು ಡಾ;ಬಿ.ಆರ್. ಅಂಬೇಡ್ಕರ್ ಅವರ 134 ನೇ ಜಯಂತಿ ಸಂದರ್ಭದಲ್ಲಿ ಸಾಕಾರಗೊಂಡಿದ್ದು ಸುಸಜ್ಜಿತ ಭವನ ನಿರ್ಮಾಣವಾಗಿ ಎಲ್ಲರಿಗೂ ಇಲ್ಲಿ ಕಾರ್ಯಕ್ರಮ ಮಾಡಲು ಅವಕಾಶಗಳು ಸಿಗುವಂತಾಗಬೇಕೆಂದು ತೋಟಗಾರಿಕೆ, ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ಅವರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸಕ್ರ್ಯೂಟ್ಹೌಸ್ ಪಕ್ಕದಲ್ಲಿ ಡಾ; ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಸಮಾರಂಭದಲ್ಲಿ ಮಾತನಾಡಿದರು.
ಜಿಲ್ಲಾ ಮಟ್ಟದಲ್ಲಿ ಡಾ;ಬಿ.ಆರ್.ಅಂಬೇಡ್ಕರ್ ರವರ ಭವನ ನಿರ್ಮಾಣ ಮಾಡುವುದು ಬಹಳ ದಿನಗಳ ಬೇಡಿಕೆಯಾಗಿತ್ತು. ಮುಖಂಡರ ಒಮ್ಮತದ ನಿರ್ಣಯದ ಕೊರತೆಯಿಂದ ಭವನ ನಿರ್ಮಾಣ 2000 ಇಸವಿಯಿಂದಲೂ ನೆನೆಗುದಿಗೆ ಬಿದ್ದಿತ್ತು. ಆದರೆ ಈಗ ಇದಕ್ಕೆ ಕಾಲಕೂಡಿಬಂದಿತು. ಸಕ್ರ್ಯೂಟ್ಹೌಸ್ ಪಕ್ಕದಲ್ಲಿ ಡಿಸಿಸಿ ಬ್ಯಾಂಕ್ಗೆ ಹಂಚಿಕೆಯಾದ 20 ಗುಂಟೆ ಜಾಗವನ್ನು ಡಾ; ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಸರ್ಕಾರದ ಮಟ್ಟದಲ್ಲಿ ಮಂಜೂರಾತಿ ದೊರಕಿಸಿ, ಈ ಜಾಗಕ್ಕಾಗಿ ಡಿಸಿಸಿ ಬ್ಯಾಂಕ್ ನಿಂದ ಭರಿಸಲಾಗಿದ್ದ 78 ಲಕ್ಷವನ್ನು ವಾಪಸ್ ಮಾಡಿಸುವ ಮೂಲಕ ಡಿಸಿಸಿ ಬ್ಯಾಂಕ್ಗೆ ಎಪಿಎಂಸಿ ಆವರಣದಲ್ಲಿ ಸ್ಥಳಾವಕಾಶ ಮಾಡಿಕೊಡಲಾಗಿದೆ ಎಂದರು.
ಸರ್ಕಾರವು ಡಾ; ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ರೂ.5 ಕೋಟಿಗೆ ಮಂಜೂರಾತಿ ನೀಡಿ ರೂ.1.5 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಆದರೆ ಈ ಅನುದಾನ ಸಾಕಾಗದಿರುವುದರಿಂದ, ಇನ್ನೂ ಹೆಚ್ಚಿನ ಅನುದಾನ ತಂದು ಅತ್ಯಾಧುನಿಕ ಸೌಲಭ್ಯವುಳ್ಳ ಭವನ ನಿರ್ಮಾಣ ಮಾಡುವ ಮೂಲಕ, ಎಲ್ಲರೂ ಇಲ್ಲಿ ಕಾರ್ಯಕ್ರಮ ಮಾಡುವ ನಿಟ್ಟಿನಲ್ಲಿ ಭವನ ನಿರ್ಮಾಣ ಮಾಡಲಾಗುತ್ತದೆ ಎಂದರು.
ಈ ಹಿಂದೆ ಶಾಮನೂರು, ಬೇತೂರಿನಲ್ಲಿ ಡಾ; ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗಿದೆ. ಅಲ್ಲಿ ಎಲ್ಲಾ ಸಮುದಾಯದವರು ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನೆರವೇರಿಸುತ್ತಾರೆ. ಈ ನಿಟ್ಟಿನಲ್ಲಿ ಭವನಗಳು ಉಪಯುತ್ತವಾಗಿದೆ. ಆದರೆ ನಗರದಲ್ಲಿನ ಬಾಬು ಜಗಜೀವನ್ ರಾಂ ಭವನ ಉಪಯೋಗಿಸಲು ಸಾಧ್ಯವಾಗದಿರುವುದರಿಂದ ಇಲ್ಲಿ ಸಮಾಜ ಕಲ್ಯಾಣ ಇಲಾಖೆ ಕಚೇರಿಯನ್ನು ಆರಂಭಿಸಬೇಕೆಂದು ತಿಳಿಸಿದರು.
ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಪಾಲಿಕೆ ಆಯುಕ್ತೆ ರೇಣುಕಾ, ಮುಖಂಡರಾದ ಡಿ. ಬಸವರಾಜು, ಸಿ.ಉಮೇಶ್, ಮಲ್ಲೇಶಪ್ಪ, ಮಂಜುನಾಥ್, ರವಿನಾರಾಯಣ್, ಅಣ್ಣಪ್ಪ, ಹಾಲೇಶಪ್ಪ, ಎಂ.ನೀಲಗಿರಿಯಪ್ಪ, ಹನುಮಂತಪ್ಪ, ದುಗ್ಗಪ್ಪ, ಹೆಚ್.ಸಿ.ಮಲ್ಲಪ್ಪ, ಹೆಗ್ಗೆರೆ ರಂಗಪ್ಪ ಹಾಗೂ ವಿವಿಧ ಮುಖಂಡರು ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್ ಕೆ ಸ್ವಾಗತಿಸಿದರು. ಕೌಶಲ್ಯಾಭಿವೃದ್ದಿ ಅಧಿಕಾರಿ ಶಿವಕುಮಾರ್ ವಂದಿಸಿದರು. ರವಿಚಂದ್ರ ನಿರೂಪಿಸಿದರು.