SUDDIKSHANA KANNADA NEWS/ DAVANAGERE/ DATE:22-03-2024
ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಗಳಲ್ಲಿ ಕುಡಿಯುವ ನೀರಿನ ತೊಂದರೆ ಆಗಿಲ್ಲ. ರಾಜಕೀಯಕ್ಕೋಸ್ಕರ ಪಾಲಿಕೆ ವಿರೋಧ ಪಕ್ಷದ ನಾಯಕರು ಆರೋಪ ಮಾಡಿದ್ದಾರೆ. ದುರ್ಗಾಂಬಿಕೆ, ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವಕ್ಕೆ ಯಾವುದೇ ರೀತಿಯಲ್ಲಿಯೂ ತೊಂದರೆ ಆಗದಂತೆ ನೀರು ಪೂರೈಸಲಾಗಿದೆ. ಸುಳ್ಳು ಮಾಹಿತಿ ನೀಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿರುವುದು ಸರಿಯಲ್ಲ ಎಂದು ಪಾಲಿಕೆ ಮೇಯರ್ ವಿನಾಯಕ್ ಪೈಲ್ವಾನ್, ಸದಸ್ಯ ಎ. ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜನಹಳ್ಳಿಯ ತುಂಗಾಭದ್ರಾ ನದಿಯಿಂದ ಎರಡು ಜೆಸಿಬಿ ಬಳಸಿ ನೀರು ಪಂಪ್ ಮಾಡಿ ಪೂರೈಸಲಾಗಿದೆ. ಅಧಿಕಾರಿಗಳು ಹಬ್ಬ ಆಚರಿಸದೇ ಜನರಿಗೆ ನೀರು ಕೊಡಲು ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ವಿಪಕ್ಷ ಸಲಹೆ ನೀಡಲಿ, ಅದನ್ನು ಬಿಟ್ಟು ಪಾಲಿಕೆ ವ್ಯಾಪ್ತಿಯಲ್ಲಿ ನೀರಿಗೆ ಹಾಹಾಕಾರ ಬಂದಿದೆ. ಪ್ರತಿಭಟನೆ ನಡೆಸುತ್ತೇವೆ ಎಂಬ ಎಚ್ಚರಿಕೆ ನೀಡುತ್ತಿರುವುದು ರಾಜಕೀಯಕ್ಕಾಗಿ ಎಂದು ಟೀಕಿಸಿದರು.
1110 ಬೋರ್ ವೆಲ್ ಗಳು ಕಾರ್ಯನಿರ್ವಹಿಸುತ್ತಿವೆ. 300ರಿಂದ 400 ಬೋರ್ ವೆಲ್ ಗಳಲ್ಲಿ ನೀರು ಬರುತ್ತಿಲ್ಲ. ನೀರಿನ ತೊಂದರೆಯಾಗದಂತೆ ಎಚ್ಚರ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಜಿಲ್ಲಾಧಿಕಾರಿ, ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ತುಂಗಾಭದ್ರಾ ನದಿಗೆ ನೀರು ಬರುತ್ತಿದ್ದು, ಯಾವುದೇ ಸಮಸ್ಯೆ ಆಗಿಲ್ಲ. ಏಪ್ರಿಲ್ 4ರ ತನಕ ಆಗುವಷ್ಟು ನೀರಿದೆ. ಕುಂದುವಾಡ ಕೆರೆ, ಟಿವಿ ಸ್ಟೇಷನ್ ನಲ್ಲಿ ನೀರಿನ ಸಂಗ್ರಹವಿದೆ ಎಂದರು.
ಜನರಿಗೆ ನೀರು ನೀಡಲಾಗುತ್ತಿದೆ. ಈಗ ಇರುವ ನೀರಿನ ಲಭ್ಯತೆಯಲ್ಲಿ ಎಂಟರಿಂದ ಹತ್ತು ದಿನಕ್ಕೆ ನೀರು ಹರಿಸಬಹುದು. ಜನರಿಗೆ ನೀರಿನ ವಿಚಾರದಲ್ಲಿ ತೊಂದರೆಯಾಗದಂತೆ ಮಹಾನಗರ ಪಾಲಿಕೆ ಆಡಳಿತ ಮಾಡಿದೆ. ಇಂಥ ಬರಗಾಲದಲ್ಲಿಯೂ ನೀರು ಪೂರೈಕೆ ಮಾಡಿದ್ದು, ವಿನಾಕಾರಣ ಆರೋಪ ಮಾಡುವುದು ಸರಿಯಲ್ಲ. ದಾಖಲೆ ತೋರಿಸಿ ಮಾತನಾಡಲಿ ಎಂದು ಸವಾಲು ಹಾಕಿದರು.
10 ಟ್ಯಾಂಕರ್ ಗಳ ವ್ಯವಸ್ಥೆ ಮಾಡಲಾಗಿದೆ. ಮಹಾನಗರ ಪಾಲಿಕೆಯಿಂದ ಮೂರು, ಇನ್ನುಳಿದ ಏಳು ಟ್ಯಾಂಕರ್ ಗಳನ್ನು ಬಾಡಿಗೆ ಪಡೆಯಲಾಗಿದೆ. ಅಧಿಕಾರಿಯೊಬ್ಬರನ್ನು ನೇಮಿಸಲಾಗಿದ್ದು, ನೀರಿನ ಸಮಸ್ಯೆ ಇದ್ದರೆ ಟ್ಯಾಂಕರ್ ನೀರು ಕೊಡುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಒಂದು ಟ್ಯಾಂಕರ್ ಆರು ಟ್ರಿಪ್ ನೀರು ಪೂರೈಸುತ್ತದೆ. 45 ವಾರ್ಡ್ ಗಳಿಗೂ ಎಂಟರಿಂದ ಹತ್ತು ದಿನಕ್ಕೊಮ್ಮೆ ನೀರು ಪೂರೈಸುವಷ್ಟು ಸಂಗ್ರಹ ಇದೆ. ರಾಜನಹಳ್ಳಿಯ ತುಂಗಾಭದ್ರಾ ನದಿಯಲ್ಲಿ ಸದ್ಯಕ್ಕೆ ನೀರಿಲ್ಲ. ನದಿಗೆ ನೀರು ಬರುವುದರಿಂದ ಅಲ್ಲಿ ತುಂಬಿಸಿ ಸಂಗ್ರಹಿಸಿಕೊಳ್ಳಲಾಗುತ್ತದೆ. ಭದ್ರಾ ಡ್ಯಾಂ ನೀರು ಬಂದರೆ ಅನುಕೂಲವಾಗುತ್ತದೆ. ದಾವಣಗೆರೆ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮ ವಹಿಸಲಾಗಿದೆ. ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ತೀವ್ರ ಬರಗಾಲ ತಲೆದೋರಿದ್ದು, ಮಳೆ ಬಂದರೆ ಎಲ್ಲಾ ಸಮಸ್ಯೆಗೂ ಪರಿಹಾರ ಸಿಗುತ್ತದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಅಬ್ದುಲ್ ಲತೀಫ್ ಮತ್ತಿತರರು ಹಾಜರಿದ್ದರು.