SUDDIKSHANA KANNADA NEWS/ DAVANAGERE/ DATE:27-11-2024
ಬೆಂಗಳೂರು: ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯು ಯಶಸ್ವಿಯಾಗಿ ಜಾರಿಗೊಂಡು ಒಂದು ವರ್ಷ ಪೂರೈಸಿದೆ. ಅರ್ಹ ವಿದ್ಯುತ್ ಗ್ರಾಹಕರು ನೋಂದಾಯಿಸಿಕೊಳ್ಳಲು ಇನ್ನೂ ಅವಕಾಶವಿದೆ.
ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ ಆರಂಭವಾಗಿ ಒಂದು ವರ್ಷ, ಮೂರು ತಿಂಗಳು ಕಳೆದಿವೆ. ಎಲ್ಲಾ ಕುಟುಂಬಗಳಿಗೆ ಶೂನ್ಯ ಬಿಲ್ ಬಂದಿದೆ. ಉಳಿದ ಕುಟುಂಬಗಳ ಉಚಿತ ಅರ್ಹತೆಗಿಂತ ಹೆಚ್ಚು ವಿದ್ಯುತ್ ಬಳಸಿದ್ದಲ್ಲಿ ಹಣ ಪಾವತಿಸಿವೆ.
ರಾಜ್ಯ ಸರ್ಕಾರವು ಚುನಾವಣೆಯಲ್ಲಿ ನೀಡಿದ ಆಶ್ವಾಸನೆಯಂತೆ 200 ಯೂನಿಟ್ವರೆಗೂ ಉಚಿತ ವಿದ್ಯುತ್ ನೀಡುವ ಗ್ಯಾರಂಟಿ ಯೋಜನೆಯನ್ನು 2023 ಆಗಸ್ಟ್ ನಿಂದ ಆರಂಭಿಸಿತು. ಕಳೆದ ವರ್ಷ ಜೂನ್ 18 ರಿಂದ ನೋಂದಣಿ
ಅವಕಾಶ ನೀಡಿತ್ತು.
ಎಷ್ಟು ಯೂನಿಟ್ ಉಚಿತ?:
ಗೃಹ ವಿದ್ಯುತ್ ಗ್ರಾಹಕರು ಕಳೆದ ಒಂದು ವರ್ಷದಲ್ಲಿ ಮಾಸಿಕ ಬಳಸಿದ ಸರಾಸರಿ ಯೂನಿಟ್ಗೆ ಶೇಕಡಾ 10 ರಷ್ಟು ಹೆಚ್ಚುವರಿ ಯೂನಿಟ್ ಉಚಿತವಾಗಿರುತ್ತದೆ. ಅದಕ್ಕಿಂತ ಹೆಚ್ಚು ಬಳಸುವ ವಿದ್ಯುತ್ಗೆ ದರ ಪಾವತಿಸಬೇಕಾಗುತ್ತದೆ.
ಇಂದಿಗೂ ನೋಂದಣಿ ಅವಕಾಶ:
ಇಂದಿಗೂ ಗೃಹಜ್ಯೋತಿ ಯೋಜನೆಯ ನೋಂದಣಿಗೆ ಅವಕಾಶವಿದೆ. ಮನೆ ಬದಲಾವಣೆ ಮಾಡಿಕೊಳ್ಳುವವರು, ಹೊಸ ಮನೆ ಕಟ್ಟುವವರು ಕೂಡ ನೋಂದಣಿ ಮಾಡಿಕೊಳ್ಳಬಹುದು. ಅವರಿಗೆ ನಿಯಮಗಳಂತೆ ನಿಗದಿತ ಯೂನಿಟ್ಗಳು ಮಾತ್ರ ಉಚಿತ ಇರುತ್ತವೆ.
ಈ ವರ್ಷದ ಆಗಸ್ಟ್ ತಿಂಗಳಿಗೆ ಗೃಹಜ್ಯೋತಿಗೆ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಇಂಧನ ಇಲಾಖೆಯು ಬಾಡಿಗೆ ಮನೆ ಅಥವಾ ಯಾವುದೇ ಕಾರಣಕ್ಕೆ ಮನೆ ಬದಲಿಸುವ ಸಂದರ್ಭದಲ್ಲಿ ಹಳೆಯ ಖಾತೆ ಸಂಖ್ಯೆಯನ್ನು ಡಿ-ಲಿಂಕ್ ಮಾಡಿ, ಮತ್ತೊಂದು ಮನೆಯ ಆರ್.ಆರ್. ಸಂಖ್ಯೆಯೊAದಿಗೆ ನೋಂದಣಿಯಾಗಿ, ಗೃಹ ಜ್ಯೋತಿಯ ಲಾಭ ಪಡೆಯಬಹುದು ಎಂದು ತಿಳಿಸಿದೆ.
ಡಿ-ಲಿಂಕ್ ಮಾಡುವುದು ಹೇಗೆ?:
ಗ್ರಾಹಕರು ಆನ್ಲೈನ್ https://sevasindhu.karnataka.gov.in/…/GetAadhaarData.aspx ಲಿಂಕ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ. ಗೃಹ ಜ್ಯೋತಿ ಪೋರ್ಟಲ್ ಓಪನ್ ಆಗದೇ ಇದ್ದಲ್ಲಿ, Cache Memory Clear ಮಾಡಿ ನಂತರ ಪೋರ್ಟಲ್ ಲಿಂಕ್ ಕ್ಲಿಕ್ ಮಾಡಿ ಸೇವೆಯನ್ನು ಪಡೆಯಬಹುದಾಗಿದೆ.
ಮನೆ ಬದಲಿಸುವ ಸಂದರ್ಭದಲ್ಲಿ ಆಧಾರ್ ಸಂಖ್ಯೆ ಜೊತೆ ಲಿಂಕ್ ಆಗಿರುವ ಆರ್ಆರ್ ನಂಬರ್ನ ವಿವರ ಪರಿಶೀಲಿಸಿ ಡಿ-ಲಿಂಕ್ ಮಾಡಬಹುದು. ಹೊಸ ಮನೆಗೆ ಗೃಹಜ್ಯೋತಿ ಪಡೆಯಲು ಯಾವುದೇ ಆಧಾರ್ ಜೊತೆ ಲಿಂಕ್ ಆಗಿರದ ಆರ್ಆರ್ ನಂಬರ್ಗೆ ಲಿಂಕ್ ಮಾಡಬಹುದು. ಈ ಹಿಂದೆ ಮನೆಯಲ್ಲಿ ವಾಸವಿದ್ದರೂ ಡಿ-ಲಿಂಕ್ ಮಾಡಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು.