SUDDIKSHANA KANNADA NEWS/ DAVANAGERE/ DATE:20-02-2025
ಬೆಂಗಳೂರು: ಕರ್ನಾಟಕ ಬಿಜೆಪಿ ಒಡೆದ ಮನೆ. ಇದು ಕೆಲ ತಿಂಗಳಿಂದ ನಡೆಯುತ್ತಿರುವ ವಿದ್ಯಮಾನ. ಈಗ ಬಿ. ವೈ. ವಿಜಯೇಂದ್ರ ನಾನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಯುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಬೆನ್ನಲ್ಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣ ಕೆರಳ ಕೆಂಡವಾಗಿದೆ.
ಬಹಿರಂಗ ಹೇಳಿಕೆ, ಯಡಿಯೂರಪ್ಪ, ವಿಜಯೇಂದ್ರ ವಿರುದ್ಧದ ವಾಗ್ದಾಳಿ ಕುರಿತಂತೆ ಈಗಾಗಲೇ ಬಿಜೆಪಿ ಕೇಂದ್ರದ ನಾಯಕರು ನೊಟೀಸ್ ಅನ್ನು ಯತ್ನಾಳ್ ಗೆ ಕೊಟ್ಟಿದ್ದಾರೆ. ಇದಕ್ಕೆ ಉತ್ತರವನ್ನೂ ಯತ್ನಾಳ್ ನೀಡಿದ್ದಾರೆ. ಹಿಂದೆ ಹೇಳಿದ್ದನ್ನೇ ಉತ್ತರ ನೀಡಿದ್ದು, ಕುಟುಂಬ ರಾಜಕಾರಣ, ಭ್ರಷ್ಟಾಚಾರ, ಹೊಂದಾಣಿಕೆ ರಾಜಕಾರಣಕ್ಕೆ ಇತಿಶ್ರೀ ಹಾಡಬೇಕು. ವಿಜಯೇಂದ್ರರನ್ನು ಕೆಳಗಿಳಿಸಬೇಕು ಎಂಬ ಬೇಡಿಕೆಯಿಂದ ಹಿಂದೆ ಸರಿದಿಲ್ಲ. ಇದು ವರಿಷ್ಠರಿಗೆ ಬಿಸಿ ತುಪ್ಪವಾಗಿದೆ.
ವಿಜಯೇಂದ್ರ ಮುಂದುವರಿದರೆ ಹೋರಾಟ ವಿಫಲವಾದಂತೆ. ಹಾಗಾಗಿ, ಭಿನ್ನಮತೀಯರು ಮತ್ತೆ ಸಭೆ ಸೇರಿ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾಗಿದೆ. ಬಿಜೆಪಿಯಲ್ಲಿ ವಿಜಯೇಂದ್ರ ಹವಾ ಕಡಿಮೆ ಮಾಡದಿದ್ದರೆ ಮುಂದೆ ಅಧಿಕಾರಕ್ಕೂ ಬರುವುದು ಕಷ್ಟ ಎಂಬುದು ಯತ್ನಾಳ್ ಬಣದ ವಾದ. ಮತ್ತೊಂದೆಡೆ ವಿಜಯೇಂದ್ರ ಕೆಳಗಿಳಿಸಿದರೆ ಬಿಜೆಪಿ ಅಧಿಕಾರಕ್ಕೆ ಬರುವುದು ಕಷ್ಟ ಎಂಬುದು ಯಡಿಯೂರಪ್ಪರ ನಿಷ್ಠರ ಬಣದವರ ಅಭಿಮತ.
ದೆಹಲಿ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದೆ. ಆಮ್ ಆದ್ಮಿ ಪಕ್ಷದ ಆಡಳಿತ ಕೊನೆಗಾಣಿಸಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಿಂದ ತೊಲಗಲು ಒಟ್ಟಾಗಿ ಹೋರಾಡಬೇಕಿದೆ. ಇದೇ ವರ್ತನೆ ಮುಂದುವರಿದರೆ ಹೈಕಮಾಂಡ್ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದು ಖಚಿತ. ಆದ್ರೆ, ಸದ್ಯಕ್ಕೆ ಇದು ತಣ್ಣಗಾಗುತ್ತಾ? ಕಾವೇರುತ್ತಾ ಎಂಬುದು ಇನ್ನೊಂದು ವಾರದಲ್ಲಿ ಗೊತ್ತಾಗಲಿದೆ.