SUDDIKSHANA KANNADA NEWS/ DAVANAGERE/ DATE:10-03-2025
ದಾವಣಗೆರೆ : ನಗರದ ಜಿಎಂ ವಿಶ್ವವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಅಲ್ಟ್ರಾಟೆಕ್ ಸಿಮೆಂಟ್ ಸಹಯೋಗದಲ್ಲಿ ಸುಸ್ಥಿರ ನಿರ್ಮಾಣ ಅಭ್ಯಾಸಗಳು ಮತ್ತು ಸಾಮಗ್ರಿಗಳ ವಿಶಿಷ್ಟತೆ ಕೇಂದ್ರವು (ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಸಸ್ಟೇನಬಲ್ ಕನ್ಸ್ಟ್ರಕ್ಷನ್ ಪ್ರ್ಯಾಕ್ಟಿಸಸ್ & ಮಟೀರಿಯಲ್ಸ್) ಉದ್ಘಾಟಿಸಲಾಯಿತು.
ಜಿಎಂ ಸೆಂಟ್ರಲ್ ಲೈಬ್ರರಿ ಬಳಿಯ ಎ.ವಿ. ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಎಂ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್.ಆರ್. ಶಂಕಪಾಲ್ ಮಾತನಾಡಿ, 2050ರ ವೇಳೆಗೆ, ಇಡೀ ವಿಶ್ವವು ಶುದ್ಧವಾದ ಸ್ಥಳವಾಗಿರುತ್ತದೆ. ಕಡಲಸೋರುವಂತಹ ಹೊಗೆ ಇಲ್ಲ, ದುರ್ಗಂಧ ಇಲ್ಲ, ಮತ್ತು ಸೊಳ್ಳೆಗಳು ಇಲ್ಲ. ಇದಕ್ಕೆ ಸುಸ್ಥಿರ ಕಟ್ಟಡ ನಿರ್ಮಾಣ ವಿಧಾನಗಳನ್ನು ಬಳಸುವುದು ಅನಿವಾರ್ಯ ಎಂದು ತಿಳಿಸಿದರು.
“ಸುಸ್ಥಿರತೆ” ಎಂಬ ಪದ ಪ್ರಸ್ತುತವಾಗಿದೆ. ಈ ದಿನಗಳಲ್ಲಿ, ಕೈಗಾರಿಕಾ ಕ್ರಾಂತಿಯ ನೂತನ ಪರಿಕಲ್ಪನೆಯನ್ನು ನಾವು ಹೆಚ್ಚಿನ ಬಾರಿ ಕೇಳುತ್ತಿದ್ದೇವೆ. ಮೊದಲು ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಈ ವಿಷಯವನ್ನು ಆಳವಾಗಿ ಪರಿಶೀಲಿಸಬೇಕು. ಸುಸ್ಥಿರತೆಯಲ್ಲಿ ಉತ್ತಮ ಕೆಲಸ ಮಾಡುವ ಸಾಮರ್ಥ್ಯವನ್ನು ತೋರಿಸಿ. 2050 ರೊಳಗೆ ಜಗತ್ತಿಗೆ ಒಂದು ಪ್ರಮುಖ ಕೊಡುಗೆ ನೀಡಲು ಎಲ್ಲರೂ ಕೈಜೋಡಿಸೋಣ ಎಂದು ಆಶಿಸಿದರು.
ಪ್ರತಿಯೊಂದು ಹಂತದಲ್ಲೂ ಹೊಸ ಆಲೋಚನೆಗಳನ್ನು ತರಲು, ಕಾರ್ಬನ್ ಉತ್ಪನ್ನವನ್ನು ಕಡಿಮೆ ಮಾಡುವುದು ಹೇಗೆ? ಇವುಗಳನ್ನು ನಾವು ಆಳವಾಗಿ ಪರಿಗಣಿಸಬೇಕು. ಇಡೀ ದೇಶದ ಮಟ್ಟದಲ್ಲಿ ಪರಿಸರ ಸ್ನೇಹಿ ದೃಷ್ಠಿಕೋನವನ್ನು ತರಲು ನಾವು ಏನು ಮಾಡಬಹುದು? ಇದು ನಮ್ಮ ಮುಂದಿರುವ ಮುಖ್ಯ ಪ್ರಶ್ನೆ. ಇದು ಕೇವಲ ಸಿವಿಲ್ ಇಂಜಿನಿಯರಿಂಗ್ ಗೆ ಮಾತ್ರ ಸೀಮಿತವಲ್ಲ, ಎಲ್ಲಾ ಇಂಜಿನಿಯರಿಂಗ್ ಶಾಖೆಗಳಿಗೂ ಸಂಬಂಧಿಸಿದೆ. ಅದನ್ನು ಸುಸ್ಥಿರವಾಗಿ ಮಾಡುವುದು ಮತ್ತು ಅದನ್ನು ಆರ್ಥಿಕವಾಗಿ ಪ್ರಯೋಜನಕಾರಿಯಾಗುವಂತೆ ಮಾಡುವುದೇ ಮುಖ್ಯ. ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಕೂಡ ಇದರಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಎಂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಜಿ.ಎಂ. ಲಿಂಗರಾಜು, ನೀವು ಕಾರ್ಖಾನೆಗಳಿಗೂ ಭೇಟಿ ನೀಡಬೇಕು, ನೈಜ ಅನುಭವ ಪಡೆಯಬೇಕು. ಸಿವಿಲ್ ಇಂಜಿನಿಯರಿಂಗ್ನಲ್ಲಿ ಕೇವಲ ಪ್ರಾಯೋಗಿಕ ಅಂಶಗಳೇ ಹೆಚ್ಚಿನ ಅನುಭವ ಮತ್ತು ತಾಂತ್ರಿಕ ನೈಪುಣ್ಯವನ್ನು ನೀಡುತ್ತವೆ. ಆದ್ದರಿಂದ ತರಗತಿಯಲ್ಲಿ ಕೂತು ಕಲಿಯುವುದಕ್ಕಿಂತ, ನೀವು ಹೊರಗೆ ಹೋಗಿ, ವಿಷಯಗಳನ್ನು ಕಲಿಯಬೇಕು ಮತ್ತು ಅನುಭವವನ್ನು ಪಡೆದುಕೊಳ್ಳಬೇಕು. ಕಾಲೇಜನ್ನು ಮುಗಿಸುವ ಮುನ್ನ, ನೈಜ ಜಗತ್ತಿನ ಅನುಭವ ಪಡೆಯುವುದು ಬಹಳ ಮುಖ್ಯ. ಇದು ನಿಮ್ಮ ತಾಂತ್ರಿಕ ಜ್ಞಾನವನ್ನು ಮಾತ್ರವಲ್ಲ, ನಿಮ್ಮ ವೃತ್ತಿಜೀವನದ ಭವಿಷ್ಯವನ್ನೂ ಬಲಪಡಿಸುತ್ತದೆ. ಕೃತಕ ಬುದ್ಧಿಮತ್ತೆಯಲ್ಲಿ ಅನುಭವವಿದ್ದರೆ, ಸ್ವಯಂಚಾಲಿತವಾಗಿ ಉತ್ತಮ ಉದ್ಯೋಗ ಮತ್ತು ಭವಿಷ್ಯ ಲಭಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಉತ್ತಮ ವಿದ್ಯಾರ್ಥಿಗಳು ಅಥವಾ ಉತ್ತಮ ಪ್ರಾಧ್ಯಾಪಕರು ಭವಿಷ್ಯದಲ್ಲಿ ಹೆಚ್ಚು ಹೊಣೆಗಾರಿಕೆಯನ್ನು ಹೊಂದಿರುತ್ತಾರೆ. ಆದ್ದರಿಂದ, ನಮ್ಮ ಸೌಲಭ್ಯಗಳ ಲಾಭವನ್ನು ಪಡೆದುಕೊಳ್ಳಿ, ಉತ್ತಮ ಜ್ಞಾನವನ್ನು ಪಡೆದುಕೊಳ್ಳಿ, ಮತ್ತು ಭಾರತದ ಭವಿಷ್ಯವನ್ನು ಉಜ್ವಲಗೊಳಿಸಿ ಎಂದರು.
ಗೌರವಾನ್ವಿತ ಅತಿಥಿಗಳಾಗಿದ್ದ ದಕ್ಷಿಣ ಕರ್ನಾಟಕದ ಪ್ರಾದೇಶಿಕ ತಾಂತ್ರಿಕ ಮುಖ್ಯಸ್ಥ ಅಶೋಕ್ ರೆಡ್ಡಿ ಕೊಲ್ಲೂರು ಮಾತನಾಡಿ, ಈಗ, ಹೊಸ ಉತ್ಪನ್ನಗಳು, ಮುಂದಿನ ತಲೆಮಾರಿನ ಉತ್ಪನ್ನಗಳು, ಸುಸ್ಥಿರ ಉತ್ಪನ್ನಗಳು – ನಮ್ಮ ಎಲ್ಲಾ ಉತ್ಪನ್ನಗಳು ಹಸಿರು ಬೆಳವಣಿಗೆಯ ಉತ್ಪನ್ನಗಳೇ. ನಮ್ಮ ಕಂಪನಿಯೂ ಕೂಡ ಅತ್ಯಂತ ಜಾಗೃತವಾಗಿದ್ದು, ನಮ್ಮ ಎಲ್ಲಾ ಉತ್ಪನ್ನಗಳು ಸುಸ್ಥಿರತೆಯ ಕಡೆಗೆ ಸಾಗುತ್ತಿವೆ. ನಾವು ಜಗತ್ತಿನ ಹಸಿರು ಎನರ್ಜಿಗಾಗಿ ಹೋರಾಡುತ್ತಿದ್ದೇವೆ ಎಂದರು.
ಇದೇ ವೇಳೆ ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಜಿಎಂ ವಿಶ್ವವಿದ್ಯಾಲಯದ ನಡುವೆ ವಿದ್ಯಾರ್ಥಿಗಳಿಗೆ ಸುಸ್ಥಿರ ನಿರ್ಮಾಣ ಅಭ್ಯಾಸಗಳು ಮತ್ತು ಸಾಮಗ್ರಿಗಳ ವಿಶಿಷ್ಟತೆ ಕುರಿತು ಪ್ರಾಯೋಗಿಕ ತರಬೇತಿ ವಿಷಯವಾಗಿ ಒಡಂಬಡಿಕೆ ಮಾಡಿಕೊಳ್ಳಲಾಯಿತು. ಅತಿಥಿ ಗಣ್ಯರು ಸುಸ್ಥಿರ ನಿರ್ಮಾಣ ಅಭ್ಯಾಸಗಳು ಮತ್ತು ಸಾಮಗ್ರಿಗಳ ವಿಶಿಷ್ಟತೆ ಕೇಂದ್ರವನ್ನು ವೀಕ್ಷಿಸಿದರು.
ಕಾರ್ಯಕ್ರಮದಲ್ಲಿ ಜಿಎಂ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಸುನಿಲ್ ಕುಮಾರ್ ಬಿ.ಎಸ್, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಭರತರಾಜ್ ಇಟಿಗಿ ವೈ.ಬಿ, ಸಹಾಯಕ ಪ್ರಾಧ್ಯಾಪಕರಾದ ಡಾ. ವರೂಣ್ ಬಿ.ಕೆ, ಅಲ್ಟ್ರಾಟೆಕ್ ಸಿಮೆಂಟ್ ನ ಪ್ರಾದೇಶಿಕ ತಾಂತ್ರಿಕ ಮುಖ್ಯಸ್ಥರಾದ ಶ್ರೀವತ್ಸ ಸುಬ್ರಹ್ಮಣಿ ಸೇರಿದಂತೆ ಇತರರು ಇದ್ದರು.