SUDDIKSHANA KANNADA NEWS/ DAVANAGERE/ DATE:11-03-2024
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರವು ಬಿಜೆಪಿಯ ಭದ್ರಕೋಟೆ ಎಂಬುದರಲ್ಲಿ ಎರಡು ಮಾತಿಲ್ಲ. ಆದ್ರೆ, ಈ ಬಾರಿ ಯಾರಿಗೆ ಟಿಕೆಟ್ ಎಂಬ ಕುತೂಹಲ ಗರಿಗೆದರಿದೆ. ನೂರಕ್ಕೆ ನೂರು ನನಗೆ ಇಲ್ಲವೇ ನನ್ನ ಕುಟುಂಬದವರಿಗೆ ಲೋಕಸಭೆ ಟಿಕೆಟ್ ಸಿಗುತ್ತದೆ. ಬಿಜೆಪಿ ವರಿಷ್ಠರು ನೀಡುತ್ತಾರೆ ಎಂಬ ಭರವಸೆ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರದ್ದು. ಆದ್ರೆ, ಮಾಜಿ ಸಚಿವ, ರೆಬೆಲ್ ನಾಯಕ ಎಂ. ಪಿ. ರೇಣುಕಾಚಾರ್ಯ ಮಾತ್ರ ಸೂರ್ಯ ಚಂದ್ರರಿರುವುದು ಎಷ್ಟು ಸತ್ಯವೋ ಬದಲಾವಣೆಯೂ ಅಷ್ಟೇ ನಿಜ ಎಂದಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.
ಸಂಸದ ಸಿದ್ದೇಶ್ವರ ಅವರು ನಾನು ಎಲ್ಲಿಗೂ ಹೋಗಲ್ಲ. ನನಗೆ ಇಲ್ಲವೇ ಕುಟುಂಬದ ಸದಸ್ಯರಿಗೆ ಟಿಕೆಟ್ ಖಚಿತ ಎಂದಿದ್ದರೆ, ರೇಣುಕಾಚಾರ್ಯ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್, ಮಹಾನಗರ ಪಾಲಿಕೆ ಮಾಜಿ ಮೇಯರ್ ಅಜಯ್ ಕುಮಾರ್, ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಅವರು ಮಾತ್ರ ಈ ಬಾರಿ ಬದಲಾವಣೆ ಖಚಿತ. ಹಳ್ಳಿಯಿಂದ ದಿಲ್ಲಿಯವರೆಗೆ ನಾವು ಭೇಟಿ ಮಾಡಿ ಅಭಿಪ್ರಾಯ ಹೇಳಿದ್ದೇವೆ. ನಾಲ್ಕು ಬಾರಿ ಸಂಸದರಾಗಿರುವವರಿಗೆ ಈ ಬಾರಿ ಟಿಕೆಟ್ ಸಿಗಲ್ಲ ಎಂದು ವಿಶ್ವಾಸದ ಮಾತನಾಡಿದ್ದಾರೆ. ನವದೆಹಲಿಯಲ್ಲಿ ಬಹಿರಂಗವಾಗಿಯೇ ಸಿದ್ದೇಶ್ವರರ ವಿರುದ್ಧ ಬುಸುಗುಟ್ಟಿದ್ದಾರೆ.
ಮಾಡಾಳ್ ಮಲ್ಲಿಕಾರ್ಜುನ್
ಹಳ್ಳಿಯಿಂದ ದಿಲ್ಲಿಯವರೆಗೆ ಓಡಾಡಿ ಅಭಿಪ್ರಾಯ ಹೇಳಿದ್ದೇವೆ. ಸಂಘಟನೆಯವರು, ಪಕ್ಷದ ವರಿಷ್ಠರು, ಪ್ರಮುಖರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಟ್ಟಿದ್ದೇವೆ. ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ಮಾಡಿದ್ದೇವೆ. ಮಾಧ್ಯಮದವರ ಮುಂದೆ ಏನೂ
ಹೇಳುವುದಿಲ್ಲ. ಹೊಸ ಮುಖಕ್ಕೆ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದೇವೆ. ಸಾಕಷ್ಟು ಕಾರಣಗಳಿವೆ. 20 ವರ್ಷ ಹೇಗೆ ಸಹಿಸಿಕೊಂಡಿದ್ದಾರೆ ಎಂದು ನಮ್ಮನ್ನೇ ಕೇಳುತ್ತಿದ್ದಾರೆ ಎಂದು ಬಿಜೆಪಿ ಯುವ
ನಾಯಕ ಮಾಡಾಳ್ ಮಲ್ಲಿಕಾರ್ಜುನ್ ಹೇಳಿದ್ದಾರೆ.
ಲೋಕಿಕೆರೆ ನಾಗರಾಜ್ ಏನಂದ್ರು…?
ನೋಡಿ, ಇಡೀ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಸಂಸದರ ವಿರುದ್ಧವಾದ ವಿರುದ್ಧವಾದ ಅಲೆ ಇದೆ. ಕಾರ್ಯಕರ್ತರು, ಮುಖಂಡರು ಅವರ ವಿರುದ್ಧ ಇದ್ದಾರೆ. ನೂರಕ್ಕೆ ನೂರು ಟಿಕೆಟ್ ತಪ್ಪುತ್ತೆ. ಹೊಸ ಮುಖಗಳಿಗೆ ಅವಕಾಶ ಸಿಗುತ್ತೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್ ಹೇಳಿದ್ರು.
ಅಜಯ್ ಕುಮಾರ್ ಏನು ಹೇಳಿದ್ರು…?
ರಾಜ್ಯ ನಾಯಕರು, ರಾಷ್ಟ್ರ ನಾಯಕರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ. ನಾನೂ ಸಹ ಟಿಕೆಟ್ ಆಕಾಂಕ್ಷಿ. ನಾನೇ ಅಂಥೇನಲ್ಲ. ನಾವೆಲ್ಲರೂ ಆಕಾಂಕ್ಷಿಗಳು. ಸರ್ವೆ ಮಾಡಿ. ಇದರಲ್ಲಿ ಯಾರು ಗೆಲ್ತಾರೆ ಅವರಿಗೆ ಟಿಕೆಟ್ ಕೊಡಿ. ಹಾಗಾಗಿ ನಾವೆಲ್ಲರೂ ಭೇಟಿ ಮಾಡಿದ್ದೇವೆ. ಹೊಸಬರಿಗೆ ಅವಕಾಶ ಸಿಗುತ್ತದೆ ಎಂದು ಮಹಾನಗರ ಪಾಲಿಕೆ ಮಾಜಿ ಮೇಯರ್ ಅಜಯ್ ಕುಮಾರ್ ಹೇಳಿದ್ದಾರೆ.
ರೇಣುಕಾಚಾರ್ಯ ಬದಲಾವಣೆ ದಾಳ
ಇನ್ನು ರೇಣುಕಾಚಾರ್ಯ ಮಾತನಾಡಿ ನನಗೆ ವಿಶ್ವಾಸ ಇದೆ. ಸೂರ್ಯ, ಚಂದ್ರರು ಇರುವುದು ಎಷ್ಟು ಸತ್ಯವೋ ಅಷ್ಟೇ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಬಾರಿ ಸಂಸದರಾಗಿರುವವರನ್ನು ಬದಲಾವಣೆ ಮಾಡಿ ಬೇರೆಯವರಿಗೆ ಟಿಕೆಟ್ ನೀಡುತ್ತಾರೆ ಎಂಬುದೂ ಅಷ್ಟೇ ಸತ್ಯ ಎಂದು ಭವಿಷ್ಯ ನುಡಿದರು.
ಜೇಡ ಬಲೆ ಕಟ್ಟುತ್ತೆ. ಮೊದಲು ಜೇಡ ನೋಡಿ ನಗುತ್ತಾರೆ. ಈಗ ಏನಾಗಿದೆ ನಮ್ಮ ಹೋರಾಟ ಜೋರಾಗಿದೆ. ಮಾಜಿ ಸಚಿವರಾದ ಎಸ್. ಎ. ರವೀಂದ್ರನಾಥ್, ಕರುಣಾಕರ ರೆಡ್ಡಿ, ಶಿವಯೋಗಿಸ್ವಾಮಿ, ಬಸವರಾಜ್ ನಾಯ್ಕ್ ಅವರೆಲ್ಲರೂ ಒಟ್ಟಾಗಿ ಅಭಿಪ್ರಾಯ ಹೇಳಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಬೇಕು. ದಾವಣಗೆರೆಯಲ್ಲಿ ಬಿಜೆಪಿ ಗೆಲ್ಲಬೇಕು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎಂಟಕ್ಕೆ ಎಂಟು ಬಿಜೆಪಿ ಗೆಲ್ಲಬೇಕು. ಕಾರ್ಯಕರ್ತರು, ಮತದಾರರ ಮನದಾಳದ ಮಾತುಗಳನ್ನು ನಾಯಕರಿಗೆ ತಲುಪಿಸುವ ಕೆಲಸ ಮಾಡಿದ್ದೇವೆ ಎಂದ್ರು.
ದಾವಣಗೆರೆ ಜಿಲ್ಲೆಯ ಜನರು ಬದಲಾವಣೆ ಬಯಸಿದ್ದಾರೆ. ಬದಲಾವಣೆ ಆಗಿಯೇ ಆಗುತ್ತದೆ. ನರೇಂದ್ರ ಮೋದಿ ಅವರು ಪ್ರಧಾನಿ ಆಗಬೇಕು. ವಿಶ್ವಾಸದ ರಾಜಕಾರಣ ಮಾಡ್ತೇವೆ. ಜೇಡ ಪ್ರಾರಂಭದಲ್ಲಿ ಕಳಚಿ ಬೀಳುತ್ತೆ. ಆದರೂ ಹೋರಾಟ ನಿಲ್ಲಿಸಲ್ಲ. ನಮ್ಮದು ಹಾಗೆಯೇ ಹೋರಾಟ. ಈ ಹೋರಾಟದಲ್ಲಿ ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸ ಇದೆ ಎಂದರು.
ಅಜಯ್ ಕುಮಾರ್, ನಾನು, ರವಿಕುಮಾರ್ ಅವರೂ ಟಿಕೆಟ್ ಕೇಳಿದ್ದೇವೆ. ನಾನೂ ಜಾತ್ಯಾತೀತ ತತ್ವ ಹೊಂದಿರುವವನು. ಪಕ್ಷಕ್ಕೆ ಮುಜಗರ ಆಗಬಾರದು, ಸಮಾಜದ ದೃಷ್ಟಿ ಗಮನಿಸಿದರೆ ರವಿಕುಮಾರ್ ಅವರಿಗೆ ಟಿಕೆಟ್ ನೀಡಿದರೂ ಹಗಲಿರುಳು ಶ್ರಮಿಸುತ್ತೇವೆ. ನಾವು ಶ್ರಮಜೀವಿಗಳು. ಹೋರಾಟ, ಸಂಘಟನೆಯಿಂದ ಬಂದವರು. ಪಕ್ಷದ ಗೆಲುವಿಗಾಗಿ ಸಂಕಲ್ಪ ಮಾಡಿದ್ದೇವೆ. ನೂರಕ್ಕೆ ನೂರು ನಾಯಕರು ನಮ್ಮ ಮಾತು ಗೌರವಿಸುತ್ತಾರೆ ಎಂಬ ನಂಬಿಕೆ ಇದೆ. ಅಭ್ಯರ್ಥಿ ಇಂದು ಅಥವಾ ನಾಳೆ ಘೋಷಣೆಯಾಗಲಿದೆ. ಬದಲಾವಣೆ ಜಗದ ನಿಯಮ. ನೂರಕ್ಕೆ ನೂರು ಹೊಸಬರಿಗೆ ಟಿಕೆಟ್ ಸಿಗುತ್ತೆ. ನಾವು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಒಟ್ಟಿನಲ್ಲಿ ಈ ಬಾರಿ ಬೆಣ್ಣೆನಗರಿ ಟಿಕೆಟ್ ವಿಚಾರ ಕಬ್ಬಿಣದ ಕಡಲೆಯಾಗಿ ಬಿಜೆಪಿ ಹೈಕಮಾಂಡ್ ಗೆ ಪರಿಣಮಿಸಿದೆ. ಇನ್ನು ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ರೇಣುಕಾಚಾರ್ಯ, ಲೋಕಿಕೆರೆ ನಾಗರಾಜ್, ಅಜಯ್ ಕುಮಾರ್, ಶಿವಯೋಗಿಸ್ವಾಮಿ, ದೂಡಾ ಮಾಜಿ ಅಧ್ಯಕ್ಷ ಕೆ. ಎಂ. ಸುರೇಶ್ ಸೇರಿದಂತೆ ಇತರೆ ಬಿಜೆಪಿ ಮುಖಂಡರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಒಟ್ಟಾರೆ, ದಾವಣಗೆರೆ ಬಿಜೆಪಿ ಟಿಕೆಟ್ ಯಾರಿಗೆ ಸಿಗುತ್ತದೆ ಎಂಬುದು ಹೈಕಮಾಂಡ್ ಘೋಷಿಸುವ ಪಟ್ಟಿಯಲ್ಲಿಯಷ್ಟೇ ಸ್ಪಷ್ಟವಾಗಲಿದೆ.