SUDDIKSHANA KANNADA NEWS/ DAVANAGERE/ DATE:12-03-2024
ದಾವಣಗೆರೆ: ಭವಿಷ್ಯದಲ್ಲಿ ಭಾರತವು ವಿಶ್ವಗುರು ಸ್ಥಾನ ಅಲಂಕರಿಸಲಿದೆ. ಇದಕ್ಕೆ ಪೂರಕವಾಗಿ ಶ್ರೇಷ್ಠ ಭಾರತ ನಿರ್ಮಾಣಕ್ಕೆ ದೇಶದ ಯುವ ಜನತೆ ಗುಣಮಟ್ಟದ ಶಿಕ್ಷಣ ಪಡೆದು ಅತ್ಯುನ್ನತ ಕೊಡುಗೆ ನೀಡಬೇಕೆಂದು ರಾಜ್ಯಪಾಲರು ಹಾಗೂ ವಿಶ್ವವಿದ್ಯಾನಿಲಯ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಅವರು ಕರೆ ನೀಡಿದರು.
ಅವರು ದಾವಣಗೆರೆ ವಿಶ್ವವಿದ್ಯಾಲಯದ 11 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಸಂಶೋಧನಾ ವಿದ್ಯಾರ್ಥಿಗಳಿಗೆ ಪಿ.ಹೆಚ್.ಡಿ ಪದವಿ, ಸ್ನಾತಕ, ಸ್ನಾತಕೋತ್ತರ ಪದವಿಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಪದಕ ಮತ್ತು ಪದವಿ ಪ್ರಮಾಣ ಪತ್ರ ಪ್ರದಾನ ಮಾಡಿ ಮಾತನಾಡಿದರು.
ವಿದ್ಯಾರ್ಥಿಗಳು ನಿರಂತರ ಪರಿಶ್ರಮದಿಂದ ಯಶಸ್ಸು ಸಾಧ್ಯ, ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ ಅನೇಕ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕೇವಲ ಪದವಿ ಪಡೆಯುವುದು ಮಾತ್ರವಲ್ಲದೇ, ಪದವಿಯ ನಂತರ ಉತ್ತಮ ಜೀವನ ರೂಪಿಸಿಕೊಳ್ಳುವ ಮೂಲಕ ದೇಶಕ್ಕೆ ನಿಮ್ಮ ಕೊಡುಗೆ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಶ್ರೇಷ್ಠ ಭಾರತ ನಿರ್ಮಾಣದಲ್ಲಿ ವಿಧ್ಯಾರ್ಥಿಗಳು, ಯುವಕರ ಪಾತ್ರ ಬಹು ಮುಖ್ಯವಾಗಿದೆ. ದೇಶ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು ವಿಶ್ವದ ಆರ್ಥಿಕತೆಯಲ್ಲಿ ಪ್ರಸ್ತುತ ಐದನೇ ಸ್ಥಾನದಲ್ಲಿದೆ. ಯುವಕರ ಶ್ರಮದಿಂದ ಮುಂದಿನ ದಿನಗಳಲ್ಲಿ ಇದು ಮೂರನೇ ಸ್ಥಾನಕ್ಕೇರುವ ಮೂಲಕ ಬಲಿಷ್ಠ, ಭವಿಷ್ಯದ ಭಾರತ ನಿರ್ಮಾಣವಾಗಲಿದ್ದು ಇದಕ್ಕೆ ಯುವ ಜನರ ಪರಿಶ್ರಮ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.
ಸ್ವಾತಂತ್ರ್ಯ ಗಳಿಸಿ 75 ವರ್ಷಗಳಾಗಿದ್ದು 2047 ಕ್ಕೆ 100 ವರ್ಷ ಪೂರೈಸಲಿದೆ. ದೇಶದ ಅಭಿವೃದ್ದಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಿಸುವ ಮೂಲಕ ಅನುಷ್ಠಾನ ಮಾಡುತ್ತಿವೆ. ಇದರಿಂದ ಭವಿಷ್ಯದಲ್ಲಿ ವಿಕಸಿತ ಭಾರತವಾಗಿ ಹೊರ ಹೊಮ್ಮಲಿದ್ದು ಎಲ್ಲರೂ ಕೈಜೋಡಿಸಬೇಕೆಂದರು.
ಉಷ್ಣತೆ ಹೆಚ್ಚಾಗುತ್ತಿದ್ದು ಇದು ಎಲ್ಲಾ ದೃಷ್ಟಿಯಿಂದಲೂ ಹಾನಿಕಾರಕವಾಗಿದೆ. ಇದಕ್ಕಾಗಿ ನೀರಿನ ಸಂರಕ್ಷಣೆ, ಜಲ ಮರುಪೂರಣ, ಭೂಮಿ, ಅರಣ್ಯ ರಕ್ಷಣೆಯನ್ನು ನಮ್ಮ ನಮ್ಮ ಮನೆಯಿಂದಲೇ ಮಾಡಬೇಕಾಗಿದೆ ಎಂದು
ಹೇಳಿದರು.
ದಾವಣಗೆರೆ ವಿಶ್ವವಿದ್ಯಾಲಯದಿಂದ ಕಾನೂನು ಮತ್ತು ನ್ಯಾಯ ಕ್ಷೇತ್ರದಲ್ಲಿ ನ್ಯಾಯಾಧೀಶರಾದ ಗೌರವಾನ್ವಿತ ಶಿವರಾಜ್ ವಿ. ಪಾಟೀಲ್, ವಿಜ್ಞಾನ ಕ್ಷೇತ್ರದಲ್ಲಿ ಪ್ರೊಫೆಸರ್ ಕೆ.ಸಿದ್ದಪ್ಪ ಹಾಗೂ ಕಲೆ, ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಶ್ರೀ ಎಚ್.ಬಿ. ಮಂಜುನಾಥ್ ಅವರುಗಳ ಅತ್ಯುತ್ತಮ ಕೆಲಸಕ್ಕಾಗಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ. ಗೌರವ ಸ್ವೀಕರಿಸಿದ ಗಣ್ಯರಿಗೆ ಅಭಿನಂದಿಸುತ್ತ ಅವರ ಸೇವೆ ನಿರಂತರವಾಗಿರಲಿ ಎಂದರು.
ಪದವಿಗಳನ್ನು ಪಡೆದ ಎಲ್ಲಾ ವಿದ್ಯಾರ್ಥಿಗಳು ಮತ್ತು ಚಿನ್ನದ ಪದಕ ಮತ್ತು ಪ್ರಶಸ್ತಿ ವಿಜೇತರಿಗೆ ಅಭಿನಂದನೆಗಳು. ಪದವಿ ಮತ್ತು ಚಿನ್ನದ ಪದಕಗಳನ್ನು ಪಡೆದ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರಿದ್ದಾರೆ ಎಂಬುದು
ಸಂತೋಷವಾಗಿದೆ. ಹೆಣ್ಣು ಮಕ್ಕಳ ಆತ್ಮಸ್ಥೈರ್ಯ ಮತ್ತು ಸಾಮಥ್ರ್ಯದ ಬಲದಿಂದ ಮುನ್ನಡೆಯುತ್ತಿರುವುದು ಹರ್ಷ ತಂದಿದೆ ಎಂದು ಶ್ಲಾಘಿಸಿದರು