SUDDIKSHANA KANNADA NEWS/ DAVANAGERE/ DATE:01-03-2025
ದಾವಣಗೆರೆ: ದಾವಣಗೆರೆ ನಗರದ ಅರುಣಾ ಚಿತ್ರಮಂದಿರದ ಹತ್ತಿರ ದಿ ಚೆನ್ನಯ್ಯ ಶಾಪಿಂಗ್ ಮಾಲ್ ಅದ್ಧೂರಿಯಾಗಿ ಕಾರ್ಯಾರಂಭಗೊಂಡಿದೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಅದ್ಧೂರಿಯಾಗಿ ಚಾಲನೆ ನೀಡಿದ್ದಾರೆ. ಆದ್ರೆ, ಶಾಪಿಂಗ್ ಮಾಲ್ ಆರಂಭೋತ್ಸವಕ್ಕೆ ದಾವಣಗೆರೆ ತುಂಬೆಲ್ಲಾ ಫ್ಲೆಕ್ಸ್ ಅಳವಡಿಕೆ ಮಾಡಲಾಗಿದೆ. ಇದು ಜನರ ಆಕ್ರೋಶಕ್ಕೆ ಗುರಿಯಾಗಿದೆ.
ದಾವಣಗೆರೆ ನಗರದ ಪಿ. ಬಿ. ರಸ್ತೆ, ಹದಡಿ, ಬಂಬೂ ಬಜಾರ್, ಭಾರತ್ ಕಾಲೋನಿ, ಜಯದೇವ ವೃತ್ತ ಸೇರಿದಂತೆ ಎಲ್ಲೆಂದರಲ್ಲಿ ಫ್ಲೆಕ್ಸ್ ಅಳವಡಿಕೆ ಮಾಡಲಾಗಿದೆ. ಅದರಲ್ಲಿಯೂ ವಿದ್ಯುತ್ ಕಂಬಗಳ ಮೇಲೆ ಫ್ಲೆಕ್ಸ್ ಅಳವಡಿಸುವಂತಿಲ್ಲ.
ಜಯದೇವ ವೃತ್ತ, ಪಿ. ಬಿ. ರಸ್ತೆ, ಹದಡಿ ರಸ್ತೆಯಲ್ಲಿ ವಿದ್ಯುತ್ ಕಂಬಗಳ ಮೇಲೆ ಫ್ಲೆಕ್ಸ್ ಅಳವಡಿಕೆ ಮಾಡಲಾಗಿದೆ. ಕಾನೂನಿನ ಪ್ರಕಾರ ವಿದ್ಯುತ್ ಕಂಬದ ಮೇಲೆ ಫ್ಲೆಕ್ಸ್ ಅಳವಡಿಸುವಂತಿಲ್ಲ. ಆದ್ರೂ ಅಳವಡಿಕೆ ಮಾಡಲಾಗಿದೆ. ಜನಸಾಮಾನ್ಯರಿಗೆ
ಒಂದು ನಿಯಮ, ಚೆನ್ನಯ್ಯ ಶಾಪಿಂಗ್ ಮಾಲ್ ನವರಿಗೆ ಒಂದು ಕಾನೂನಾ ಎಂದು ಪ್ರಶ್ನಿಸಲಾಗುತ್ತಿದೆ.
ದಾವಣಗೆರೆ ಮಹಾನಗರ ಪಾಲಿಕೆಯ ಮುಂಭಾಗದಲ್ಲಿರುವ ಖಾಸಗಿ ಬಸ್ ನಿಲ್ದಾಣದ ಪಕ್ಕದಲ್ಲಿನ ವಿದ್ಯುತ್ ಕಂಬಕ್ಕೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಭಾವಚಿತ್ರವುಳ್ಳ ದಿ ಚೆನ್ನಯ್ಯ ಶಾಪಿಂಗ್ ಮಾಲ್ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸುವ ಫ್ಲೆಕ್ಸ್ ಅಳವಡಿಸಲಾಗಿದೆ. ವಿದ್ಯುತ್ ಕಂಬದ ಮೇಲೆ ಅಳವಡಿಸುವಂತಿಲ್ಲ. ಇದು ಕಾನೂನು ವಿರೋಧಿ ಕ್ರಮ ಆದರೂ ಇದುವರೆಗೆ ತೆರವುಗೊಳಿಸಿಲ್ಲ. ಇನ್ನು ಶಾಪಿಂಗ್ ಮಾಲ್ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸುವ ಫ್ಲೆಕ್ಸ್ ಗಳಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಭಾವಚಿತ್ರ ಅಳವಡಿಸಲಾಗಿದೆ.
ಅಧಿಕಾರಿಗಳು ಈ ಜನಪ್ರತಿನಿಧಿಗಳ ಭಾವಚಿತ್ರವಿದ್ದರೆ ತೆರವುಗೊಳಿಸುವುದಿಲ್ಲ ಎಂಬ ಐಡಿಯಾ ಕೊಟ್ಟವರು ಯಾರು ಎಂದು ಪ್ರಶ್ನಿಸುತ್ತಿದ್ದಾರೆ. ಬ್ಯಾನರ್, ಬಂಟಿಂಗ್ಸ್, ಹೋಲ್ಡಿಂಗ್ ಹಾಕುವವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಮಹಾನಗರ
ಪಾಲಿಕೆಯವರು ದಿ ಚೆನ್ನಯ್ಯ ಶಾಪಿಂಗ್ ಮಾಲ್ ನವರಿಗೆ ಫ್ಲೆಕ್ಸ್, ಬಂಟಿಂಗ್ಸ್ ಅಳವಡಿಸಲು ಅನುಮತಿ ಕೊಟ್ಟಿದ್ಯಾಕೆ? ಇದರ ಹಿಂದೆ ಇರುವ ಆ ಪ್ರಭಾವಿ ನಾಯಕ ಯಾರು? ಯಾಕಾಗಿ ಈ ರೀತಿ ಕಾನೂನು ಜಾರಿಗೊಳಿಸಲಾಗುತ್ತದೆ ಎಂದು ಜನರು
ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಗರದ ಸುಂದರ ಮತ್ತು ಅಂದವಾಗಿಡುವ ನಿಟ್ಟಿನಲ್ಲಿ ಅನಧಿಕೃತ, ಕಾನೂನು ಉಲ್ಲಂಘಿಸಿ, ನಿಯಮ ಮೀರಿ ಫ್ಲೆಕ್ಸ್ ಅಳವಡಿಸಲಾಗಿದ್ದರೂ ಮಹಾನಗರ ಪಾಲಿಕೆಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಯಾಕೆ? ಊರ ತುಂಬೆಲ್ಲಾ ಫ್ಲೆಕ್ಸ್ ಅಳವಡಿಸಿದ್ದರೂ ಕ್ರಮ ಜರುಗಿಸಿಲ್ಲ. ದಿ ಚೆನ್ನಯ್ಯ ಶಾಪಿಂಗ್ ಮಾಲ್ ನವರಿಗೆ ದಂಡ ವಿಧಿಸಿಲ್ಲ ಎಂದು ವಿವಿಧ ಬಟ್ಟೆ ಅಂಗಡಿಗಳ ಮಾಲೀಕರು, ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳು ಹೇಳುವುದೇನು..?
ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಯಾವುದೇ ಅನುಮತಿ ಪಡೆಯದೇ ಹೋಲ್ಡಿಂಗ್ಸ್, ಬಂಟಿಂಗ್ಸ್ ಹಾಕುವಂತಿಲ್ಲ. ಅನುಮತಿ ಪಡೆದ ಸಂಖ್ಯೆಯಷ್ಟೇ ಫ್ಲೆಕ್ಸ್ ಹಾಕಬೇಕು. ವಿದ್ಯುತ್ ಕಂಬದ ಮೇಲೆ ಫ್ಲೆಕ್ಸ್ ಅಳವಡಿಸಿದ್ದರೆ ಅದು ಕಾನೂನು ವಿರೋಧಿ ಕ್ರಮ. ಕೂಡಲೇ ತೆರವುಗೊಳಿಸುತ್ತೇವೆ. ಎಷ್ಟು ಫ್ಲೆಕ್ಸ್ ಗಳಿಗೆ ಅನುಮತಿ ಪಡೆಯಲಾಗಿದೆಯೋ ಅಷ್ಟಕ್ಕೆ ಮಾತ್ರ ಅವಕಾಶ ಇರುತ್ತದೆ. ಅನಧಿಕೃತವಾಗಿ ಅಳವಡಿಸಿದ್ದರೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಕೂಡಲೇ ತೆರವುಗೊಳಿಸುತ್ತೇವೆ ಎಂದು ಮಹಾನಗರ ಪಾಲಿಕೆಯ ಆರೋಗ್ಯ ಶಾಖೆಯ ಅಧಿಕಾರಿಗಳು ಹಾಗೂ ಬಂಟಿಂಗ್ಸ್, ಹೋಲ್ಡಿಂಗ್ಸ್ ನಿರ್ವಹಿಸುವ ಪ್ರಭಾರ ಅಧಿಕಾರಿಗಳು ತಿಳಿಸಿದ್ದಾರೆ.