SUDDIKSHANA KANNADA NEWS/ DAVANAGERE/ DATE:25-08-2024
ದಾವಣಗೆರೆ: ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಮಠ ಮತ್ತು ಸಮಾಜದ ಗೌರವ ಘನತೆಗಳಿಗೆ ಧಕ್ಕೆ ಬರುವಂತೆ ಮಾಡುತ್ತಿರುವ ವ್ಯವಸ್ಥಿತ ಸಂಚು ನಿನ್ನೆ ಮೊನ್ನೆಯದಲ್ಲ. ಅನೇಕ ವರ್ಷಗಳಿಂದ ನಡೆಯುತ್ತಾ ಬಂದಿದೆ. ಮಠದ ಮತ್ತು ಸಮಾಜದ ಯಾವುದಾದರೂ ಮುಖ್ಯವಾದ ಕಾರ್ಯಕ್ರಮಗಳು ಇದ್ದರೆ ಇವರು ಮಾಧ್ಯಮಗಳಲ್ಲಿ ಹುಯಿಲು ಎಬ್ಬಿಸಿ ಭಕ್ತಾದಿಗಳಲ್ಲಿ ಗೊಂದಲವುಂಟು ಮಾಡುತ್ತಾ ಬಂದಿರುತ್ತಾರೆ ಎಂದು ಚಿತ್ರದುರ್ಗದ ಸಿರಿಗೆರೆ ತರಳಬಾಳು ಬೃಹನ್ಮಠದ ಕಾರ್ಯದರ್ಶಿಗಳು ಮಾಹಿತಿ ನೀಡಿದ್ದಾರೆ.
ಇದೇ ರೀತಿ 2021 ರಲ್ಲಿಯೂ ಮಾಧ್ಯಮಗಳಲ್ಲಿ ಪರಮಪೂಜ್ಯ ಶ್ರೀ ಜಗದ್ಗುರುಗಳವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದರು. ಸುಳ್ಳು ಲೆಕ್ಕ, ಕಳ್ಳ ಲೆಕ್ಕ ಕೊಡಲು ಯಾರಿಗೆ ಬರುವುದಿಲ್ಲ? ಕೋಟ್ಯಂತರ ರೂ. ಮಠದ ಹಣ ದುರುಪಯೋಗವಾಗಿದೆ ಎಂದು ಮಿಥ್ಯಾರೋಪ ಮಾಡಿದ್ದರು. ಈ ಸಂಬಂಧವಾಗಿ ನಮ್ಮ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾದ ಶ್ರೀಮತ್ ಸಾದು ಸದ್ಧರ್ಮ ವೀರಶೈವ ಸಂಘದ ಆಗಿನ ಅಧ್ಯಕ್ಷರಾದ ದಿವಂಗತ ಕೆ.ಆರ್ ಜಯದೇವಪ್ಪನವರು ಆರೋಪ ಮಾಡಿದವರಿಗೆ ದಿನಾಂಕ 11-11-2021 ರಂದು ನೋಂದಣಿ ಅಂಚೆಯಲ್ಲಿ ನೋಟೀಸ್ ಜಾರಿ ಮಾಡಿದ್ದರು. ಮಾಧ್ಯಮಗಳ ಮೂಲಕ ಪತ್ರಿಕಾ ಗೋಷ್ಠಿ ನಡೆಸಿ ಮಾಡಿರುವ ಆಪಾದನೆಗಳಿಗೆ ಸಂಬಂಧಿಸಿದಂತೆ ಪೂರಕ ದಾಖಲೆಗಳನ್ನು ದಿನಾಂಕ 18-11-2021 ರ ಒಳಗಾಗಿ ಸಲ್ಲಿಸಲು ಸೂಚಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಅಲ್ಲದೆ ದಿನಾಂಕ 19-11-2021 ರಂದು ಸಿರಿಗೆರೆಯಲ್ಲಿ ಕರೆದ ಸಮಾಜದ ಸಭೆಗೆ ಹಾಜರಾಗಲೂ ತಿಳುವಳಿಕೆ ನೋಟೀಸ್ ಕೊಡಲಾಗಿತ್ತು. ಆದರೆ ಆರೋಪ ಮಾಡಿದವರಾರೂ ಆರೋಪಗಳನ್ನು ರುಜುವಾತು ಪಡಿಸುವ ಯಾವುದೇ ದಾಖಲೆಗಳನ್ನು ಸಲ್ಲಿಸಿರುವುದಿಲ್ಲ. ಸಮಾಜದ ಸಭೆಗೂ ಹಾಜರಾಗಲಿಲ್ಲ. ಅವರು ಬರೆದ ಪತ್ರಗಳಿಗೆ ಶ್ರೀ ಜಗದ್ಗುರುಗಳವರಿಂದ ಯಾವುದೇ ಉತ್ತರವಿಲ್ಲ ಎಂದು ಆಕ್ಷೇಪಿಸುವ ಅವರು ಆ ಪತ್ರಗಳು ಮಠಕ್ಕೆ ತಲುಪವುದರೊಳಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಆರೋಪ ಮಾಡಿದವರು ಯಾರಾದರೂ ಇದ್ದರೆ ಬಂದು ಮಾತನಾಡಿ ಎಂದು ಅಂದಿನ ಸಭೆಯಲ್ಲಿ ಸೂಚನೆ ಕೊಟ್ಟರೂ ಯಾರೂ ಇರಲಿಲ್ಲ. 2021 ರಲ್ಲಿ ಸಂಘದಿಂದ ಕೊಟ್ಟ ನೋಟೀಸಿನ ಪ್ರತಿಯನ್ನು ಶಿಷ್ಯರು ಮತ್ತು ಸಾರ್ವಜನಿಕರ ಗಮನಕ್ಕೆ ತರುವ ದೃಷ್ಟಿಯಿಂದ ಈ ಕೆಳಗೆ ಕೊಡಲಾಗಿದೆ ಎಂದು ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಕಾರ್ಯದರ್ಶಿಗಳು ತಿಳಿಸಿದ್ದಾರೆ.